Advertisement

ಅನುಭವ ಮಂಟಪ ವಿಶ್ವದ ಪ್ರಥಮ ಶಾಸನ ಸಭೆ

05:52 PM Nov 18, 2021 | Team Udayavani |

ಹುಬ್ಬಳ್ಳಿ: ವಚನ ಸಾಹಿತ್ಯದ ಮೌಲ್ಯಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲ ಸೂತ್ರಗಳಾಗಿವೆ. 12ನೇ ಶತಮಾನದಲ್ಲಿಯೇ ಬಸವಣ್ಣನವರು ಆರಂಭಿಸಿದ್ದ ಅನುಭವ ಮಂಟಪ ಇಡೀ ವಿಶ್ವದ ಪ್ರಥಮ ಶಾಸನ ಸಭೆಯಾಗಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ.

Advertisement

ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆಯುತ್ತಿರುವ 82ನೇ ಅಖೀಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನ ಮತ್ತು ಶತಮಾನೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಂವಿಧಾನ, ಸದನ ಮತ್ತು ನಾಗರಿಕರ ಬಗೆಗೆ ಪೀಠಾಸೀನಾಧಿಕಾರಿಗಳ ಜವಾಬ್ದಾರಿ ಕುರಿತು ವಿಚಾರ ಮಂಡಿಸಿದ ಹೊರಟ್ಟಿ ಅವರು, ಸಾಮಾಜಿಕ ಸಬಲೀಕರಣ, ಸಮಾನತೆ, ಸೌಹಾರ್ದತೆ, ಸಹೋದರತ್ವ ಕುರಿತಾಗಿ ವಚನಗಳ ಮೂಲಕ ಬಸವಾದಿ ಶರಣರು ಸಮಾಜಕ್ಕೆ ಸಾರಿದ ಸಂದೇಶಗಳೇ ಇಂದಿನ ಪ್ರಜಾಪ್ರಭುತ್ವದ ಮೂಲ ಆಶಯಗಳಾಗಿ ರೂಪುಗೊಂಡಿವೆ. ವಿಶ್ವಕ್ಕೆ ಪ್ರಜಾಪ್ರಭುತ್ವದ ಬುನಾದಿ ಹಾಕಿ ಬೆಳಕು ತೋರಿದ ಬಸವಣ್ಣನವರು
ಕರ್ನಾಟಕದವರೆಂಬುದು ಹೆಮ್ಮೆಯ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ತಮ್ಮ ಸತತ ನಾಲ್ಕು ದಶಕಗಳ ಶಾಸಕಾಂಗದ ಅನುಭವ ಹಂಚಿಕೊಂಡ ಸಭಾಪತಿಯವರು, ಸದನಗಳ ಯಶಸ್ಸು ಮತ್ತು ಸಾರ್ಥಕತೆಗೆ ಅನೇಕ ಸಲಹೆ ನೀಡಿದರು. ಸದನ ಕಾರ್ಯಕಲಾಪ ಗುಣಮಟ್ಟ ಹಾಗೂ ನಿಗದಿತ ಕಾರ್ಯಸೂಚಿ ಕುರಿತಾಗಿ ಸಲಹೆ ನೀಡಿದ ಅವರು, ಕಲಾಪಗಳಲ್ಲಿ ಸದಸ್ಯರ ವರ್ತನೆ, ವಿಷಯ ಮಂಡನೆ, ಸಹಭಾಗಿತ್ವಕ್ಕೆ ಕಾಲಕಾಲಕ್ಕೆ ಸೂಕ್ತ ತರಬೇತಿಯ ಅವಶ್ಯಕತೆ ಇದೆ. ಸದನದಲ್ಲಿ ಸಮರ್ಥವಾಗಿ ವಿಷಯ ಮಂಡಿಸಿ ಸಕ್ರಿಯಾಗಿ
ಪಾಲ್ಗೊಳ್ಳುವ ಸದಸ್ಯರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಬೇಕು.

ಕಾರ್ಯಸೂಚಿಯಂತೆ ಅಂದಿನ ವಿಷಯ ಅಂದೇ ಚರ್ಚೆ ನಡೆಸಿ ಮುಕ್ತಾಗೊಳಿಸಬೇಕು. ಸದನ ಒಳಗಡೆ ಭಿತ್ತಿಪತ್ರ, ಚಿತ್ರಗಳನ್ನು ಪ್ರದರ್ಶಿಸಿ ಘೋಷಣೆ ಕೂಗುವ ಪರಿಪಾಠಕ್ಕೆ ಇತಿಶ್ರೀ ಹಾಡುವುದು ಸೇರಿದಂತೆ ವಿವಿಧ ಸಲಹೆಗಳನ್ನು ಸಭಾಪತಿ ಹೊರಟ್ಟಿಯವರು ನೀಡಿದರು. ಎರಡು ದಿನಗಳ ಸಮ್ಮೇಳನವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ, ಹಿಮಾಚಲ ವಿಧಾನಸಭಾಧ್ಯಕ್ಷ ವಿಪಿನ್‌ ಸಿಂಗ್‌ ಪರ್ಮಾರ್‌, ಹಿಮಾಚಲ
ಪ್ರದೇಶದ ಮುಖ್ಯಮಂತ್ರಿ ಜಯರಾಮ ಠಾಕೂರ, ರಾಜ್ಯಸಭೆ ಉಪಸಭಾಪತಿ ಹರಿವಂಶ ನಾರಾಯಣ ಸಿಂಗ್‌, ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಇನ್ನಿತರರು ಪಾಲ್ಗೊಂಡಿದ್ದಾರೆಂದು ಸಭಾಪತಿಯವರ ಕಚೇರಿ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next