Advertisement

ಆ್ಯಂಟಿ ಬಯಾಟಿಕ್‌: ಹೊಳಪು ಕಳೆದುಕೊಳ್ಳುತ್ತಿರುವ ವಜ್ರ

12:30 AM Mar 10, 2019 | Team Udayavani |

ಮುಂದುವರಿದುದು-  ಕಾಯಿಲೆಗೆ ತುತ್ತಾಗುವ ಅಪಾಯವು ಕೆಲವರಿಗೆ ಇತರರಿಗಿಂತ ಹೆಚ್ಚು ಇರುತ್ತದಾದರೂ ವ್ಯಕ್ತಿಯೊಬ್ಬರು ಆ್ಯಂಟಿಬಯಾಟಿಕ್‌ ಪ್ರತಿರೋಧವುಳ್ಳ ಸೋಂಕುಗಳನ್ನು ಸಂಪೂರ್ಣವಾಗಿ ದೂರ ಇರಿಸಬಹುದು. ಪ್ರತಿರೋಧ ಶಕ್ತಿ ಹೊಂದಿರುವ ಸೂಕ್ಷ್ಮಜೀವಿಗಳಿಂದ ಉಂಟಾದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವುದು ಕಠಿನ, ಅದಕ್ಕೆ ಹೆಚ್ಚು ವೆಚ್ಚ ತಗಲುತ್ತದೆ ಹಾಗೂ ಕೆಲವೊಮ್ಮೆ ಹೆಚ್ಚು ವಿಷಕಾರಿಯಾದ ಪರ್ಯಾಯ ಔಷಧಗಳನ್ನು ಉಪಯೋಗಿಸಬೇಕಾಗುತ್ತದೆ. ಕೆಲವು ಪ್ರತಿರೋಧಕ ಸೋಂಕುಗಳು ತೀವ್ರ ಅನಾರೋಗ್ಯವನ್ನು ಉಂಟು ಮಾಡುವ ಮೂಲಕ ಗುಣಮುಖವಾಗಲು ಹೆಚ್ಚು ಕಾಲ, ಹೆಚ್ಚು ವೈದ್ಯಕೀಯ ವೆಚ್ಚ ಅಥವಾ ಮೃತ್ಯುವನ್ನೂ ತಂದೊಡ್ಡಬಹುದು. ಆ್ಯಂಟಿ ಬಯಾಟಿಕ್‌ ಪ್ರತಿರೋಧವು ಆರೋಗ್ಯ ಸೇವಾ ವೆಚ್ಚದಲ್ಲಿ ಹೆಚ್ಚಳ, ಆಸ್ಪತ್ರೆ ವಾಸದ ಸಮಯ ಹೆಚ್ಚಳ ಹಾಗೂ ಮರಣ ಮತ್ತು ಶಾಶ್ವತ ಊನಗಳಂತಹ ಅಪಾಯವನ್ನು ಮುಂದುವರಿದ ಅಮೆರಿಕದಂತಹ ದೇಶಗಳು ಮತ್ತು ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ಏಕಪ್ರಕಾರವಾಗಿ ಉಂಟುಮಾಡುತ್ತಿದೆ.

Advertisement

ಆ್ಯಂಟಿಬಯಾಟಿಕ್‌ ಪ್ರತಿರೋಧ ಸಮಸ್ಯೆಯನ್ನು ಹೇಗೆ ನಿಭಾಯಿಸಬಹುದು?
ಆ್ಯಂಟಿ ಬಯಾಟಿಕ್‌ ಪ್ರತಿರೋಧವನ್ನು ನಿಭಾಯಿಸಲು ಹತ್ತು ಮಾರ್ಗೋಪಾಯಗಳಿವೆ:
1. ಜಾಗತಿಕ ಮಟ್ಟದಲ್ಲಿ ಅರಿವು ಆಂದೋಲನವನ್ನು ಆರಂಭಿಸುವುದು.
2. ನೈರ್ಮಲ್ಯವನ್ನು ಹೆಚ್ಚಿಸುವ ಮೂಲಕ ಸೋಂಕುಗಳ ಪ್ರಸರಣವನ್ನು ತಗ್ಗಿಸುವುದು.
3. ಕೃಷಿಯಲ್ಲಿ ಅನವಶ್ಯಕವಾಗಿ ಆ್ಯಂಟಿಮೈಕ್ರೋಬಿಯಲ್‌ಗ‌ಳ ಉಪಯೋಗವನ್ನು ಮತ್ತು ವಾತಾವರಣಕ್ಕೆ ಅವುಗಳ ಪ್ರಸರಣವನ್ನು ಕಡಿಮೆ ಮಾಡುವುದು.
4. ಔಷಧ ಪ್ರತಿರೋಧ ಮತ್ತು ಆ್ಯಂಟಿ ಮೈಕ್ರೋಬಿಯಲ್‌ ಬಳಕೆಯ ಮೇಲೆ ಜಾಗತಿಕ ಮಟ್ಟದಲ್ಲಿ ನಿಗಾ ಹೆಚ್ಚಿಸುವುದು.
5. ಆ್ಯಂಟಿ ಮೈಕ್ರೋಬಿಯಲ್‌ಗ‌ಳು ನೈಜವಾಗಿ ಅಗತ್ಯವಾಗಿರುವ ರೋಗಿಗಳಿಗೆ ಅವುಗಳನ್ನು ನೀಡುವುದನ್ನು ಸುಲಭವಾಗಿಸುವುದಕ್ಕಾಗಿ ಹೊಸ ಮತ್ತು ಕ್ಷಿಪ್ರ ರೋಗ ಪತ್ತೆ ವಿಧಾನಗಳ ಬಳಕೆಯನ್ನು ಹೆಚ್ಚಿಸುವುದು.
6. ಲಸಿಕೆಗಳ ಅಭಿವೃದ್ಧಿ ಮತ್ತು ಬಳಕೆಯನ್ನು ಹೆಚ್ಚಿಸುವ ಮೂಲಕ ಆ್ಯಂಟಿ ಬಯಾಟಿಕ್‌ ಚಿಕಿತ್ಸೆ ಅಗತ್ಯವಾಗುವ ರೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು.
7. ಸೋಂಕು ರೋಗಗಳ ಜತೆಗೆ ಕಾರ್ಯ ನಿರ್ವಹಿಸುವ ವ್ಯಕ್ತಿಗಳ ಸಂಖ್ಯೆ ಮತ್ತು ಗುರುತು ಪತ್ತೆಯನ್ನು ಹೆಚ್ಚಿಸುವುದು.
8. ಹೊಸ ಬಗೆಯ ಚಿಕಿತ್ಸೆಗಳ ಅಭಿವೃದ್ಧಿಯಲ್ಲಿ ನಿರ್ಣಾಯಕವಾಗಿರುವ ಔಷಧ ಶೋಧದ ಆರಂಭಿಕ ಹಂತದ ಸಂಶೋಧನೆಯ ಪ್ರವರ್ಧನೆಗಾಗಿ ಜಾಗತಿಕ ಆವಿಷ್ಕರಣಾ ನಿಧಿಯ ಸ್ಥಾಪನೆ.
9. ಹಾಲಿ ಇರುವ ಔಷಧಗಳನ್ನು ಉತ್ತಮಪಡಿಸುವುದು ಮತ್ತು ಹೊಸ ಔಷಧಗಳ ಶೋಧನೆಯನ್ನು ಪ್ರೋತ್ಸಾಹಿಸುವುದು.
10. ಸಕ್ರಿಯಾತ್ಮಕ ಕಾರ್ಯಾಚರಣೆಗಾಗಿ ಜಾಗತಿಕ ಕೂಟವನ್ನು ಸ್ಥಾಪಿಸುವುದು. ಉದಾಹರಣೆಗೆ, ಆ್ಯಂಟಿ ಬಯಾಟಿಕ್‌ ಪ್ರತಿರೋಧ ಹಾಗೂ ಅದನ್ನು ತಡೆಯುವ ಏಕೈಕ ಗುರಿಯು ಜಾಗತಿಕ ಅಜೆಂಡಾದಲ್ಲಿ ಒಂದಾಗುವುದು. 

ಆಹಾರದ ಮೂಲಕ ಪ್ರತಿರೋಧಕ ಶಕ್ತಿ ಹೊಂದಿರುವ ಸೋಂಕುಗಳು ಉಂಟಾಗದಂತೆ ನಾವೇನು ಮಾಡಬಹುದು? 
ಆಹಾರವನ್ನು ಸುರಕ್ಷಿತವಾಗಿ ನಿರ್ವಹಿಸುವುದು ಮತ್ತು ತಯಾರಿಸುವುದಕ್ಕೆ ಕೆಳಗೆ ಪಟ್ಟಿ ಮಾಡಿರುವ ಸುಲಭ ಮಾರ್ಗೋಪಾಯಗಳನ್ನು ಅನುಸರಿಸಿ.
– ನಿಯಮಿತವಾಗಿ ಕೈತೊಳೆದುಕೊಳ್ಳುವುದು ಮತ್ತು ಲಸಿಕೆಗಳನ್ನು ಹಾಕಿಸಿಕೊಳ್ಳುವುದನ್ನು ಕಡ್ಡಾಯವಾಗಿ ಅನುಸರಿಸುವುದು.
– ಆಹಾರವನ್ನು ಸಮರ್ಪಕವಾಗಿ ಶುದ್ಧೀಕರಿಸಿ, ವಿಭಾಗಿಸಿ, ಅಡುಗೆ ಮಾಡಿ, ಶೈತ್ಯೀಕರಿಸಿ.
– ಮಾಂಸ, ಮೊಟ್ಟೆ, ಕೋಳಿಮಾಂಸಗಳನ್ನು ಅಗತ್ಯವಿರುವಷ್ಟು ಉಷ್ಣತೆಯಲ್ಲಿ ಸರಿಯಾಗಿ ಬೇಯುವವರೆಗೆ ಬೇಯಿಸಿ. 
– ಕೈಗಳು, ಪಾತ್ರೆಗಳು ಮತ್ತು ಅಡುಗೆ ಕೋಣೆಯ ಮೇಲ್ಮೆ„ಗಳನ್ನು ಚೆನ್ನಾಗಿ ಶುಚಿಗೊಳಿಸುವ ಮೂಲಕ ಪ್ರಾಣಿಜನ್ಯ ಆಹಾರವಸ್ತುಗಳು, ಇತರ ಆಹಾರ ವಸ್ತುಗಳನ್ನು ಕಲುಷಿತಗೊಳಿಸದಂತೆ ನೋಡಿಕೊಳ್ಳಿ.
– ಹಸಿ ಹಾಲನ್ನು ಕುಡಿಯಬಾರದು.
– ಮಲ, ಪ್ರಾಣಿಗಳು ಮತ್ತು ಪ್ರಾಣಿ ವಾಸಸ್ಥಳಗಳನ್ನು ಸ್ಪರ್ಶಿಸಿದ ಮೇಲೆ ಸರಿಯಾಗಿ ಕೈ ತೊಳೆದುಕೊಳ್ಳಿ.
– ಆ್ಯಂಟಿ ಬಯಾಟಿಕ್‌ಗಳು ಬ್ಯಾಕ್ಟೀರಿಯಾಗಳ ವಿರುದ್ಧ ಮಾತ್ರ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದುಕೊಳ್ಳಿ. ವೈರಸ್‌ಗಳಿಂದ ಉಂಟಾಗುವ ಶೀತಜ್ವರಗಳನ್ನು ಅವು ಗುಣಪಡಿಸುವುದಿಲ್ಲ.
– ನಿಮಗೆ ಉಂಟಾಗಿರುವ ಅನಾರೋಗ್ಯಕ್ಕೆ ಆ್ಯಂಟಿ ಬಯಾಟಿಕ್‌ ಅನಗತ್ಯ ಎಂಬುದಾಗಿ ವೈದ್ಯರು ಹೇಳಿದ ಮೇಲೂ ಆ್ಯಂಟಿ ಬಯಾಟಿಕ್‌ ನೀಡುವಂತೆ ಒತ್ತಾಯಿಸಬೇಡಿ. 
– ನಿಮಗೆ ಶಿಫಾರಸು ಮಾಡಿದ್ದರೆ ಅಥವಾ ನಿಮಗೆ ಶಿಫಾರಸು ಮಾಡಲಾದ ಆ್ಯಂಟಿ ಬಯಾಟಿಕ್‌ಗಳನ್ನು ಮಾತ್ರ ಉಪಯೋಗಿಸಿ. ಹಳೆಯದನ್ನು ಉಪಯೋಗಿಸುವುದು ಅಥವಾ ನಿಮಗೆ ಶಿಫಾರಸು ಮಾಡಿರುವುದನ್ನು ಇನ್ನೊಬ್ಬರಿಗೆ ನೀಡುವುದು ಮಾಡಬಾರದು.
– ಆ್ಯಂಟಿ ಬಯಾಟಿಕ್‌ ಶಿಫಾರಸು ಮಾಡಿದ್ದಾಗ ಅವುಗಳ ಉಪಯೋಗದ ಬಗ್ಗೆ ವೈದ್ಯರ ಸಲಹೆ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಿ.

Advertisement

Udayavani is now on Telegram. Click here to join our channel and stay updated with the latest news.

Next