Advertisement

ಜನಮತಗಣನೆಯಿಂದ ಗೂಗಲ್‌ ನಡೆಯುತ್ತಿಲ್ಲ : CEO ಸುಂದರ್‌ ಪಿಚೈ

03:50 PM Nov 02, 2018 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೋ : ಗೂಗಲ್‌ ಕಂಪೆನಿಯು ಜನಮತಗಣನೆಯಿಂದ ನಡೆಯುತ್ತಿಲ್ಲ ಎಂದು ಕಂಪೆನಿಯ ಸಿಇಓ ಸುಂದರ್‌ ಪಿಚೈ ಹೇಳಿದ್ದಾರೆ. 

Advertisement

ಕಚೇರಿಯಲ್ಲಿನ ಕಿರುಕುಳ, ತಾರತಮ್ಯ, ಒತ್ತಡ ಇತ್ಯಾದಿಗಳನ್ನು ಪ್ರತಿಭಟಿಸಿ ನಿನ್ನೆ ಗುರುವಾರ ಗೂಗಲ್‌ ಕಂಪೆನಿಯ ಏಶ್ಯ ವಲಯದ ನೌಕರರು ಮತ್ತು ಗುತ್ತಿಗೆದಾರರು ಹಲವು ನೂರರ ಸಂಖ್ಯೆಯಲ್ಲಿ ಮಧ್ಯಾಹ್ನದ ಹೊತ್ತಿನಲ್ಲಿ ತಮ್ಮ ಕಚೇರಿಯಿಂದ ಹೊರ ನಡೆದು ತೋರಿದ ಪ್ರತಿಭಟನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು. 

ನ್ಯೂಯಾರ್ಕ್‌ ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಪಿಚೈ ಅವರು, “ನಾವು ಜನಮತಗಣನೆಯ ಆಧಾರದಲ್ಲಿ ಕಂಪೆನಿಯನ್ನು ನಡೆಸುತ್ತಿಲ್ಲ; ನೌಕರರಿಗೆ ತಮ್ಮ  ಧ್ವನಿ ವ್ಯಕ್ತಪಡಿಸುವುದಕ್ಕೆ ಹಲವಾರು ಉತ್ತಮ ಅವಕಾಶಗಳಿವೆ; ಆ ನಿಟ್ಟಿನಲ್ಲಿ ನಾವು ಸಾಕಷ್ಟು ಮಾಡಿದ್ದೇವೆ’ ಎಂದು ಹೇಳಿರುವುದನ್ನು ಉಲ್ಲೇಖೀಸಿ ಬ್ಲೂಮ್‌ ಬರ್ಗ್‌ ವರದಿ ಮಾಡಿದೆ. 

ಏಶ್ಯದಲ್ಲಿನ ನೂರಾರು ಗೂಗಲ್‌ ನೌಕರರು ಮತ್ತು ಗುತ್ತಿಗೆದಾರರು ನಿನ್ನೆ  ಮಧ್ಯಾಹ್ನ ತಮ್ಮ ಮೇಲೆ ಕಂಪೆನಿಯ ಕಚೇರಿಗಳಲ್ಲಿ  ನಡೆಯುತ್ತಿರುವ ಆರೋಪಿತ ಶೋಷಣೆ, ಕಿರುಕುಳವನ್ನು ಪ್ರತಿಭಟಿಸಿ ಕಾರ್ಯಾಲಯದಿಂದ ಹೊರ ನಡೆದ ಅತ್ಯಪರೂಪದ ವಿದ್ಯಮಾನ ನಡೆಯಿತು. 

ದುಡಿಯುವ ಸ್ಥಳದಲ್ಲಿ (ಕಚೇರಿಯಲ್ಲಿ) ಕಂಪೆನಿಯ ಕಾರ್ಯನಿರ್ವಾಹಕರಿಂದ ನೌಕರರ ಮೇಲೆ ಅನಿರ್ಬಂಧಿತ ಅಧಿಕಾರ ಪ್ರಯೋಗ, ಜನಾಂಗೀಯತೆ, ಲೈಂಗಿಕ ಶೋಷಣೆಯೇ ಮೊದಲಾದ ಅತಿರೇಕಗಳನ್ನು ಪ್ರತಿಭಟಿಸಲು ವಿಶ್ವಾದ್ಯಂತದ ಗೂಗಲ್‌ ಕಾರ್ಯಾಲಯಗಳಿಂದ ಹಲವು ಸಾವಿರ ಮಂದಿ ನೌಕರರು ಹೊರಬಂದು ಪ್ರತಿಭಟಿಸುವ ನಿರೀಕ್ಷೆ ಇದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

Advertisement

ನಿನ್ನೆ ತಡವಾಗಿ ಹೊರಡಿಸಲಾಗಿದ್ದ  ಹೇಳಿಕೆಯಲ್ಲಿ ಸಂಘಟಕರು ಗೂಗಲ್‌ ಮಾತೃ ಸಂಸ್ಥೆಯಾಗಿರುವ Alphabet Inc. ಮುಖ್ಯಸ್ಥರನ್ನು ಭೇಟಿಯಾಗಿ ಕಂಪೆನಿಯ ನಿರ್ದೇಶಕರ ಮಂಡಳಿಯಲ್ಲಿ ನೌಕರ ಪ್ರತಿನಿಧಿಯೋರ್ವರನ್ನು ಸೇರಿಸಿಕೊಳ್ಳುವಂತೆ ಮತ್ತು ವೇತನ-ಸಮಾನತೆ ಅಂಕಿ ಅಂಶವನ್ನು ಆಂತರಿಕವಾಗಿ ಹಂಚಿಕೊಳ್ಳುವಂತೆ ಮನವಿ ಮಾಡಿದರು; ಜತೆಗೆ ಕಾರ್ಯ ಸ್ಥಳದಲ್ಲಿನ ಕಿರುಕುಳ-ಸಂಬಂಧಿ ಪರಿಹಾರ ಕೋರಿಕೆ ಪ್ರಕರಣಗಳನ್ನು ನ್ಯಾಯೋಚಿತವಾಗಿ ಇತ್ಯರ್ಥಪಡಿಸುವ ದಿಶೆಯಲ್ಲಿನ ಮಾನವ ಸಂಪನ್ಮೂಲ ಉಪಕ್ರಮಗಳಿಗೆ ಬದಲಾವಣೆ ತರಬೇಕು ಎಂದು ವರದಿಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next