Advertisement

ಥೀಮ್‌ಗೆ ಆಘಾತವಿಕ್ಕಿದ ರಾಮ್‌ಕುಮಾರ್‌

03:35 AM Jun 29, 2017 | Team Udayavani |

ಹೊಸದಿಲ್ಲಿ: ಭಾರತದ ಯುವ ಟೆನಿಸ್‌ ತಾರೆ ರಾಮ್‌ಕುಮಾರ್‌ ರಾಮನಾಥನ್‌ ಅವರು ತನ್ನ ಟೆನಿಸ್‌ ಬಾಳ್ವೆಯಲ್ಲಿಯೇ ಮಹೋನ್ನತ ಸಾಧನೆಯೊಂಂದನ್ನು ಮಾಡಿದ್ದಾರೆ. ಟರ್ಕಿಯಲ್ಲಿ ಸಾಗುತ್ತಿರುವ ಅಂಟಾಲ್ಯ ಓಪನ್‌ ಟೆನಿಸ್‌ ಕೂಟದಲ್ಲಿ ರಾಮ್‌ಕುಮಾರ್‌ ಅವರು ಅಗ್ರ ಶ್ರೇಯಾಂಕದ ಡೊಮಿನಿಕ್‌ ಥೀಮ್‌ ಅವರನ್ನು ನೇರ ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್‌ಫೈನಲಿಗೇರಿ ಸಾಹಸ ಮೆರೆದಿದ್ದಾರೆ.

Advertisement

ವಿಶ್ವದ 222ನೇ ರ್‍ಯಾಂಕ್‌ನಲ್ಲಿರುವ ರಾಮ್‌ಕುಮಾರ್‌ ಅಮೋಘ ಆಟದ ಪ್ರದರ್ಶನ ನೀಡಿ ವಿಶ್ವದ ಎಂಟನೇ ರ್‍ಯಾಂಕಿನ ಥೀಮ್‌ ಅವರನ್ನು ಒಂದು ತಾಸಿನ ಒಳಗಡೆ 6-3, 6-2 ಸೆಟ್‌ಗಳಿಂದ ಸದೆಬಡಿದು ಮುಂದಿನ ಸುತ್ತಿಗೇರಿದರು. ರಾಮ್‌ಕುಮಾರ್‌ ಅವರು ಎಟಿಪಿ ರ್‍ಯಾಂಕಿಂಗ್‌ನ ಅಗ್ರ 10ರ ಒಳಗಿನ ಆಟಗಾರರೊಬ್ಬರ ವಿರುದ್ಧ ಗೆಲುವು ಸಾಧಿಸಿರುವುದು ಇದೇ ಮೊದಲ ಸಲವಾಗಿದೆ. 

ಕ್ವಾರ್ಟರ್‌ಫೈನಲ್‌ನಲ್ಲಿ ರಾಮ್‌ಕುಮಾರ್‌ ಅವರು ಸೈಪ್ರಸ್‌ನ ಮಾರ್ಕೊಸ್‌ ಬಗ್ಧಾಟಿಸ್‌ ಅವರನ್ನು ಎದುರಿಸಲಿದ್ದಾರೆ. ಈ ಗೆಲುವಿಗಾಗಿ  ನಾನು ನಿಜವಾಗಿಯೂ ಕಠಿನ ಪ್ರಯತ್ನ ನಡೆಸಿದ್ದೆ ಎಂದು ಪಂದ್ಯದ ಬಳಿಕ ರಾಮ್‌ಕುಮಾರ್‌ ತಿಳಿಸಿದರು. 

ಅಂಗಣಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿದ್ದಕ್ಕೆ ನಾನು ಇಲ್ಲಿನ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸುವೆ. ಗ್ರಾಸ್‌ ಕೋರ್ಟ್‌ ಅನ್ನು ಇಷ್ಟಪಡುವೆ ಇಲ್ಲಿ ವೇಗವಾಗಿ ಆಡಲು ಸಾಧ್ಯವಾಗುತ್ತದೆ. ನನಗೆ ಸಿಕ್ಕಿದ ಅವಕಾಶವನ್ನು ಸಮರ್ಥ ರೀತಿಯಲ್ಲಿ ಬಳಸಿಕೊಂಡು ಗೆಲುವಿಗಾಗಿ ಪ್ರಯತ್ನಿಸಿದೆ ಎಂದು ಅವರು ತಿಳಿಸಿದರು.

ಎಂತಹ ರೋಮಾಂಚಕ ಗೆಲುವು ಇದು. ಅಗ್ರ 10ರೊಳಗಿನ ಆಟಗಾರನನ್ನು ಸೋಲಿಸಿದ್ದರಿಂದ ರಾಮ್‌ಕುಮಾರ್‌ ಅವರಿಗೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚಾಗಲಿದೆ ಎಂದು ಭಾರತ ಡೇವಿಸ್‌ ಕಪ್‌ ತಂಡದ ನಾಯಕ ಮಹೇಶ್‌ ಭೂಪತಿ ಹೇಳಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next