Advertisement
ಇನ್ನು ಮುಂದೆ ತಿಂಗಳಿಗೆ ಎರಡು ಸಚಿವರು ಕೆಪಿಸಿಸಿ ಕಚೇರಿಗೆ ಬಂದು ಪತ್ರಿಕಾಗೋಷ್ಠಿ ನಡೆಸುವ ಮೂಲಕ ರಾಜ್ಯ ಸರ್ಕಾರದ ಸಾಧನೆಗಳು ಮತ್ತು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸೂಚನೆ ನೀಡಿದ್ದಾರೆ. ಈ ಕುರಿತಂತೆ ಎಲ್ಲ ಸಚಿವರಿಗೆ ಪತ್ರ ಬರೆದಿರುವ ಅವರು, ನಾಲ್ಕು ವರ್ಷದಲ್ಲಿ ರಾಜ್ಯ ಸರ್ಕಾರ ಮಾಡಿರುವ ಸಾಧನೆಗಳ ಬಗ್ಗೆ ವಿರೋಧ ಪಕ್ಷ ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿ, ರಾಜ್ಯದ ಜನತೆಗೆ ವಾಸ್ತವ ತಿಳಿಸುವಂತೆ ಹೇಳಿದ್ದಾರೆ.
ಬಿಜೆಪಿ ವಿಸ್ತಾರಕ ಕಾರ್ಯಕ್ರಮಕ್ಕೆ ಪ್ರತಿಯಾಗಿ ರೂಪುಗೊಂಡ ಕಾಂಗ್ರೆಸ್‌ನ ಬೂತ್ ಕಮಿಟಿ ರಚನೆಯನ್ನು ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ. ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದ ಅವರು, ಆಗಸ್ಟ್ 30 ರೊಳಗೆ ಎಲ್ಲ ಜಿಲ್ಲೆಗಳಲ್ಲಿಯೂ ಬೂತ್ ಸಮಿತಿ, ಪಂಚಾಯತ್ ಹಾಗೂ ವಾರ್ಡ್‌ಗಳ ಸಮಿತಿ ನೇಮಕ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ. ಸೆಪ್ಟಂಬರ್‌ನಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ 66 ಸಾವಿರ ಬೂತ್ ಸಮಿತಿ ಸದಸ್ಯರ ಸಮಾವೇಶ ಉದ್ದೇಶಿಸಿ ಮಾತನಾಡುವ ಯೋಜನೆಯನ್ನು ಕಾಂಗ್ರೆಸ್ ಹಮ್ಮಿಕೊಂಡಿದೆ.
Related Articles
Advertisement
ಯಾವ ಯಾವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸರಿಯಾಗಿ ಕೆಲಸ ಮಾಡುವುದಿಲ್ಲ ಅಂತವರ ಬದಲಾವಣೆ ಮಾಡುವಂತೆ ಶೀಘ್ರವೇ ಕೆಪಿಸಿಸಿಗೆ ವರದಿ ನೀಡಬೇಕೆಂದು ಪರಮೇಶ್ವರ್ ಸೂಚಿಸಿದ್ದಾರೆ. ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್ ಮತ್ತು ಎಸ್.ಆರ್. ಪಾಟೀಲ್, ಜಿಲ್ಲಾ ಘಟಕಗಳ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.
ಜಿಲ್ಲಾಧ್ಯಕ್ಷರ ಬದಲಾವಣೆಗೆ ನಿರ್ಧಾರ ?ವಿಧಾನಸಭೆ ಚುನಾವಣೆಗಾಗಿ ಪಕ್ಷದ ಸಂಘಟನೆಯನ್ನು ಚುರುಕುಗೊಳಿಸಲು ನಿರ್ಧರಿಸಿರುವ ಪರಮೇಶ್ವರ್, 20ಕ್ಕೂ ಹೆಚ್ಚು ಜಿಲ್ಲಾಧ್ಯಕ್ಷರನ್ನು ಬದಲಾವಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎರಡು ಹುದ್ದೆ ಹೊಂದಿರುವವರು ಮತ್ತು ಸಕ್ರಿಯರಲ್ಲದ ಜಿಲ್ಲಾಧ್ಯಕ್ಷರನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಇದಕ್ಕೆ ಪೂರಕ ಎನ್ನುವಂತೆ ಶನಿವಾರ ಹಾಸನ, ಮಂಡ್ಯ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲಾ ಘಟಕಗಳ ಅಧ್ಯಕ್ಷರು ಹಾಗೂ ಶಾಸಕರ ಜೊತೆ ಪರಮೇಶ್ವರ್ ಸಭೆ ನಡೆಸಿದರು. ಹಾಸನ ಜಿಲ್ಲಾಧ್ಯಕ್ಷ ಗಂಡಸಿ ಶಿವರಾಮ್ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದಾರೆ, ಮಂಡ್ಯ ಜಿಲ್ಲಾಧ್ಯಕ್ಷ ಆತ್ಮಾನಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ, ವಿಜಯಪುರ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ್ ಕೆಪಿಸಿಸಿ ಕಾರ್ಯದರ್ಶಿಯಾಗಿ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಆಂಜನೇಯಲು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾಗಿರುವುದರಿಂದ ಅವರನ್ನು ಜಿಲ್ಲಾಧ್ಯಕ್ಷ ಹುದ್ದೆಯಿಂದ ತೆರವುಗೊಳಿಸಲು ಪರಮೇಶ್ವರ್ ಜಿಲ್ಲಾ ಶಾಸಕರು ಮತ್ತು ಮುಖಂಡರ ಜೊತೆ ಚರ್ಚಿಸಿದ್ದು, ಶೀಘ್ರವೇ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಮಂಡ್ಯ ಜಿಲ್ಲಾ ಮುಖಂಡರ ಸಭೆಗೆ ಶಾಸಕ ಅಂಬರೀಶ್ ಮಾಜಿ ಸಂಸದೆ ರಮ್ಯಾ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯೆ ಮಲ್ಲಾಜಮ್ಮ ಗೈರು ಹಾಜರಾಗಿದ್ದರು. ಬಿಜೆಪಿಯವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ತಾನೆ ನಮ್ಮನ್ನು ಜೈಲಿಗೆ ಕಳುಹಿಸುವುದು. ರಾಜ್ಯದಲ್ಲಿ ಬಿಜೆಪಿ ಸ್ಥಿತಿ ಕಂಡು ಅಮಿತ್ ಶಾ ಬೈದಿರುವುದರಿಂದ ಯಡಿಯೂರಪ್ಪ ಹತಾಶರಾಗಿದ್ದಾರೆ. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಶನ್ ವಿಚಾರದಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ನೀಡಿರುವ ದೂರಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರೇ ಅವರ ವಿರುದ್ಧ ದೂರು ದಾಖಲಿಸಿರಬಹುದು.
– ದಿನೇಶ್ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ