Advertisement
ದೀಪಾವಳಿ ಬಂದರೆ ವಿಶ್ವನಿಗೆ ಭಯ, ಶಾಲುಗೆ ಖುಷಿ. ತನ್ನ ಹೆಂಡತಿ ತಲೆಗೆ ಎಣ್ಣೆಯನ್ನು ಹಚ್ಚಿ ಯಾವ ರೀತಿ ಬಡಿಯಬಹುದು ಎಂದು ಕಲ್ಪನೆ ಮಾಡಿಕೊಂಡು ಸುರುಸುರು ಬತ್ತಿಯಾಗಿ ಥರಥರ ನಡುಗುತ್ತಿದ್ದ. ಎಣ್ಣೆಯನ್ನು ಗಂಡನ ತಲೆಗೆ ಒತ್ತಿ, ಯಾವ ರೀತಿ ತಬಲಾ ಬಡಿಯಬಹುದು ಎಂದು ಶಾಲು ಯೋಚನೆ ಮಾಡುತ್ತಿದ್ದಳು. ಅರ್ಧ ಲೀಟರ್ ಎಣ್ಣೆಯನ್ನು ತಲೆಗೆ ಸುರಿದಾಗ ಅದು ಕಣ್ಣು, ಮೂಗು, ಕಿವಿಗಳನ್ನು ದಾಟಿ ಇಳಿಯುತ್ತಿತ್ತು. ಎಣ್ಣೆ ತಲೆಯಿಂದ ಜಾರಲು ಬಿಡದಂತೆ, ಶಾಲು ಗಂಡನ ತಲೆಯ ಮೇಲೆ ತಬಲಾ ಶುರು ಮಾಡುತ್ತಿದ್ದಳು.
Related Articles
Advertisement
ನಾನು ಸಾಗರದಲ್ಲಿದ್ದಾಗ ವರದಾಮೂಲದ ಅಡಕೆ ತೋಟದ ಮನೆಯೊಂದಕ್ಕೆ ಅತಿಥಿಯಾಗಿ ಹೋಗಿದ್ದೆ. ಒಂದೇ ಮನೆಯಲ್ಲಿ 48 ಜನ ಇದ್ದ ಕೂಡು ಕುಟುಂಬ. ಮನೆಯ ಹಿಂದೆ ಒಂದು ಹಂಡೆ. ಅದರಲ್ಲಿ ಸದಾ ಕೊತಕೊತ ಬಿಸಿನೀರು. ದೀಪಾವಳಿ ಬಂದ್ರೆ ನಾನ್‌ಸ್ಟಾಪ್ ಅಭ್ಯಂಜನ. 48 ತಲೆಗಳು ನೆನೆದು ರೆಡಿಯಾಗುವ ವೇಳೆಗೆ ಅರ್ಧ ದಿನವೇ ಮುಗಿದಿರುತ್ತಿತ್ತು. ಆ ಕಾಲದ ಲಕ್ಸ್ ಸೋಪು ಬೆಳ್ಳಗೆ ಕೈ ತುಂಬಾ ಸಿಕ್ತಾ ಇತ್ತು… ಒಂದು ಸೋಪ್ ಹಂಡೆ ಬಳಿ ಹಾಕಿದ್ರೆ, ಎಲ್ಲರೂ ಅದೇ ಸೋಪಿನಲ್ಲಿ ಸ್ನಾನ ಮಾಡಿ ಸೋಪು ಕರಗಿಸುತ್ತಿದ್ದರು. ಮರುದಿನ ಮತ್ತೂಂದು ಸೋಪು! ಆದ್ರೆ ಈಗ ಕಾಲ ಬದಲಾಗಿದೆ. ಒಂದು ಸೋಪನ್ನು ಇಬ್ಬರು ಬಳಸೋದಿಲ್ಲ.
ಅಮೆರಿಕದ ಆಸ್ಟಿನ್‌ಗೆ ಹೋಗಿದ್ದೆ. ಅಲ್ಲಿನ ಮನೆಗೆ ಹೋದ ಕೂಡಲೇ ಸ್ನಾನಕ್ಕೆಂದು ಅಲ್ಲೇ ಟೇಬಲ್ ಮೇಲಿದ್ದ ಸೋಪನ್ನು ಎತ್ತಿಕೊಳ್ಳಲು ಹೋದೆ. ಮನೆಯಾಕೆ ಗದರಿದಳು. “ನೋ ನೋ ಡೋಂಟ್ ಟಚ್. ಅದು ನಮ್ಮ ನಾಯಿ ಸೋಪು’ ಎಂದಳು. “ಅಯ್ಯೋ ದೇವ್ರೇ, ನನಗೆ ಗೊತ್ತಿಲೆª ಸೋಪು ಹಾಕ್ಕೊಂಡಿದ್ರೆ ಏನು ಗತಿ?’ ಅಂದೆ. “ಆಗ ನಮ್ಮ ನಾಯಿಗೆ ಬೇರೆ ಸೋಪು ಕೊಡಿಸಬೇಕಾಗ್ತಿತ್ತು’ ಎಂಬ ಉತ್ತರ ಬಂತು.
ಅಭ್ಯಂಜನದ ಮಾತು ಈ ಕಾಲದಲ್ಲಿ ದೂರವೇ ಉಳಿದಿದೆ. ಎಣ್ಣೇನೂ ಗೊತ್ತು. ಸ್ನಾನಾನೂ ಗೊತ್ತು. ಆದ್ರೆ ಎಣ್ಣೆ ಸ್ನಾನ ಗೊತ್ತಿಲ್ಲ. ದೀಪಾವಳಿ ಬಂದರೆ ಮಾವನ ಮನೆಗೆ ಹೊಸ ಅಳಿಯ ಲಗ್ಗೆ ಇಡುವ ಆ ಮಧುರ ದಿನಗಳನ್ನು ಕೆ.ಎಸ್. ನರಸಿಂಹಸ್ವಾಮಿಯವರು “ರಾಯರು ಬಂದರು ಮಾವನ ಮನೆಗೆ’ ಎಂದು ವರ್ಣಿಸಿದ್ದಾರೆ. ಆದರೆ, ಈಗ ಅಳಿಯನಿಗೆ ಆ ಖದರ್ ಇಲ್ಲ. ಎಣ್ಣೆ ಹಾಕುವ ಅಳಿಯಂದಿರು Rackನಲ್ಲಿದ್ದಾರೆ. ಆದರೆ, ತಲೆಗೆ ಎಣ್ಣೆ ಒತ್ತಿ ಅಭ್ಯಂಜನ ಮಾಡಿಸುವ ಹೆಂಡತಿಯರು Stockನಲ್ಲಿ ಇಲ್ಲ.
ಕುವೆಂಪು ಅವರ “ಅಜ್ಜಯ್ಯನ ಅಭ್ಯಂಜನ’ ಎಂಬುದು ಉತ್ತಮ ಪ್ರಬಂಧ. ಕುವೆಂಪು ಅವರ ಹಳ್ಳಿ ಮನೇಲಿ ಅಭ್ಯಂಜನವೆಂದರೆ, ಅದು ಬಹುದೊಡ್ಡ ಸಂಭ್ರಮ. ಮನೆ ಮಂದಿಗೆ ತಟಪಟ ಬಡಿಯುತ್ತಾ ಎಣ್ಣೆ ಒತ್ತಿ ಬಿಸಿಲಲ್ಲಿ ಗಂಟೆಕಾಲ ನಿಲ್ಲಿಸಿ, ಅನಂತರ ಹಬೆಯಾಡುವ ಬಿಸಿ ಬಿಸಿ ನೀರನ್ನು ಚೊಂಬುಗಟ್ಟಲೆ ತಲೆಗೆ ಹೊಯ್ದು ಶರೀರದ ಆರೋಗ್ಯವನ್ನು ಕಾಪಾಡುತ್ತಿದ್ದ ಕಾಲವದು. ಆದರೆ, ಈ ಕಾಲದವರಿಗೆ ಎಣ್ಣೆ ಬೇಕು, ಎಣ್ಣೆ ಸ್ನಾನ ಬೇಡ. ಸೀಗೇಕಾಯಿಯಂತೂ ದೂರವೇ ಉಳಿಯಿತು.
ನನ್ನ ತಲೆಯಲ್ಲಿ ಇಂದಿಗೂ ಸಮೃದ್ಧವಾಗಿ ಕೂದಲು ಇದೆ. ಚಿಕ್ಕ ವಯಸ್ಸಲ್ಲಿ ನನ್ನ ತಾಯಿ ಪ್ರತೀವಾರ ತಲೆಗೆ ಎಣ್ಣೆ ಒತ್ತಿ ಸೀಗೇಕಾಯಿ ಹಾಕಿ ಅಭ್ಯಂಜನ ಮಾಡಿಸುತ್ತಿದ್ದುದರ ಫಲವಿದು. ದೀಪಾವಳಿಗೆ ಮೂರು ದಿನದ ಮಗು ನಾನು. ಇಂದಿಗೂ ಅಭ್ಯಂಜನ ಎಂದರೆ ನನಗೆ ಪ್ರಿಯ! ಈ ಶಾಂಪೂ ಕಾಲದಲ್ಲಿ ಕೃತಕ ಕೆಮಿಕಲ್‌ಗಳನ್ನು ಬಳಸುವ ದ್ರಾವಣದ ಬದಲು ಹಳೇ ಕಾಲದ ಹರಳೆಣ್ಣೆ, ಸೀಗೇಕಾಯಿ ಹಾಕಿ ಸ್ನಾನ ಮಾಡಿದರೆ ತಲೆಗೆ ತಂಪು, ಕೂದಲು ಸೊಂಪು.
ಸೀಗೇಕಾಯಿ ತಂದು ಅದನ್ನು ಒಣಗಿಸಿ, ಅದಕ್ಕೆ ಮೆಂತ್ಯದ ಕಾಳು, ಹೆಸರುಕಾಳು ಬೆರೆಸಿ ಜೊತೆಗೆ ಚಿಗರೆಪುಡಿ ಬೆರೆಸಿ ಪುಡಿ ಮಾಡುತ್ತಿದ್ದರು. ಅದರಿಂದ ಯಾರ ಕಣ್ಣೂ ಕೆಂಪಾಗುತ್ತಿರಲಿಲ್ಲ. ಈಗ ಬಹುಮಂದಿಯ ಕಣ್ಣು ಕೆಂಪು, ಜೊತೆಗೆ ತಲೆಬಿಸಿ! ಇದು ಕಡಿಮೆ ಆಗಬೇಕಾದರೆ ದೀಪಾವಳಿಯ ದಿನವಾದರೂ ಪುಷ್ಕಳವಾಗಿ ಅಭ್ಯಂಜನ ಮಾಡಬೇಕು. “ಉಂಡಿದ್ದೇ ಉಗಾದಿ, ಮಿಂದಿದ್ದೇ ದೀಪಾವಳಿ’ ಎಂಬ ಗಾದೆಯೇ ಇದೆ.
ದೀಪಗಳ ಹಬ್ಬದ ಸಮಯದಲ್ಲಿ ಮೈತುಂಬಾ ಎಣ್ಣೆ ಹಾಕಿಕೊಂಡು ಮಹಡಿ ಮೇಲೆ ಬಿಸಿಲಲ್ಲಿ ಸ್ವಲ್ಪ ಹೊತ್ತು ಮೈಯನ್ನು ನೆನೆಸಿದರೆ “ಡಿ’ ಅಂಗಾಂಗ ದೊರೆತು ಮೈ “ಸಿ’ ಅಂಗಾಂಗ ಆಗುತ್ತದೆ. ವರ್ಷಕ್ಕೊಮ್ಮೆಯಾದರೂ ಪರಿಪೂರ್ಣವಾದ ಅಭ್ಯಂಜನ ನಡೆಸಿದರೆ ಅದು ದೀಪಾವಳಿ ಹಬ್ಬಕ್ಕೆ ಗೌರವ ಕೊಟ್ಟಂತೆ! ಈ ಬೆಂಗಳೂರೆಂಬ “ಮಸಾಜ್ ನಗರಿ’ಯಲ್ಲಿ ಇವೆಲ್ಲ ಕಲ್ಪಿಸಿಕೊಳ್ಳಲು ಸಾಧ್ಯವೇ?
* ಎಂ.ಎಸ್. ನರಸಿಂಹಮೂರ್ತಿ