Advertisement

UV Fusion: ಅಳಿಸಲಾಗದ, ಉಳಿಸಲೇಬೇಕಾದ ಕಲೆ

03:33 PM Nov 06, 2023 | Team Udayavani |

ಯಕ್ಷಗಾನ ಎನ್ನುವಂತದ್ದು ನಮ್ಮ ನಾಡಿನ ಸಂಸ್ಕೃತಿಯನ್ನು ಗಗನದಷ್ಟು ಎತ್ತರಕ್ಕೆ ಏರಿಸಿದ ಅದ್ಭುತ ಕಲೆ. ಈ ಕಲೆಯನ್ನು ಕರಾವಳಿಯ ಗಂಡು ಕಲೆ ಎನ್ನುವುದಾಗಿ ಕರೆಯುತ್ತಾರೆ. ಆದರೆ, ಈಗ ಲಿಂಗ ಭೇದವಿಲ್ಲದೆ ಇಂತಿಷ್ಟೇ ಪ್ರಾಯ ಎನ್ನುವಂತಹ ಮಿತಿ ಇಲ್ಲದೆ ಮಕ್ಕಳು, ಯುವಕ, ಯುವತಿಯರು, ಪ್ರಬುದ್ಧರು, ವಯೋವೃದ್ಧರು ಎನ್ನುವ ಭೇದವಿಲ್ಲದೆ ಎಲ್ಲರನ್ನೂ ಆವರಿಸಿಕೊಂಡಿದೆ. ಯಕ್ಷಗಾನವು ಹಲವು ಬಗೆಗಳಲ್ಲಿ ಮೂಡಿಬರುತ್ತದೆ, ಅದನ್ನು ತಿಟ್ಟು ಎಂಬುದಾಗಿ ಕರೆಯುತ್ತಾರೆ. ಉದಾಹರಣೆಗೆ ಬಡಗುತಿಟ್ಟು, ಬಡಬಡಗುತಿಟ್ಟು, ತೆಂಕುತಿಟ್ಟು, ನಡುತಿಟ್ಟು ಹೀಗೆ ಕಾಣಬಹುದು.

Advertisement

ಯಕ್ಷಗಾನದಲ್ಲಿ ಸಪ್ತ ತಾಳಗಳು, ಪಂಚ ಉಪತಾಳಗಳನ್ನು ಒಳಗೊಂಡು ಅನೇಕ ರೀತಿಯ ಸಂದರ್ಭಕ್ಕೆ ತಕ್ಕಂತೆ ಚಾಲು ಹೆಜ್ಜೆಗಳನ್ನು ಒಳಗೊಂಡಿದೆ. ಯಕ್ಷಗಾನದಲ್ಲಿ ಭಾಗವತಿಕೆ ಪ್ರಧಾನವಾದ ಭಾಗವಾಗಿರುತ್ತದೆ. ಮದ್ದಳೆ, ಚಂಡೆ ಇದು ಹಿಮ್ಮೇಳದ ವಿಭಾಗವಾಗಿರುತ್ತದೆ.ಹಾಗೂ ಯಕ್ಷಗಾನಕ್ಕೆ ಬೇಕಾಗುವಂತಹ ವಿವಿಧ ರೀತಿಯ ವಿನ್ಯಾಸಗಳು ಇರುವ ಪೋಷಾಕು ಸಾಮಗ್ರಿಗಳನ್ನ ಒಳಗೊಂಡಿರುತ್ತದೆ. ಅವುಗಳಿಗೆ ಬೇರೆ ಬೇರೆ ಹೆಸರುಗಳಿವೆ ಉದಾಹರಣೆಗೆ, ಕೈಕಟ್ಟು, ಭುಜಕಟ್ಟು, ತೋಲ್‌ ಕಟ್ಟು, ಎದೆ ಕಟ್ಟು, ರಾಜಕಿರೀಟ, ಪ್ರಭಾವಳಿ ಕಿರೀಟ, ಕೇದೆಗೆ, ಮುಂದಲೆ, ಶಿರೋಭೂಷಣ, ಕಾಲ್ಗೆಜ್ಜೆ, ಕಾಲ್‌ ಕಡಗ, ಸೆಲೆ, ಡಾಬು, ಸೊಂಟಪಟ್ಟಿ, ಕುತ್ತಿಗೆ ಹಾರ, ಇತ್ಯಾದಿ. ಯಕ್ಷಗಾನ ನಾಟ್ಯದಲ್ಲಿ ವಿವಿಧ ಪಾತ್ರಗಳಿಗೆ ಬೇರೆ ಬೇರೆ ರೀತಿಯ ಹಾವಭಾವಗಳು,ಭಂಗಿಗಳು ಕುಣಿತಗಳು ,ಮುದ್ರೆಗಳು, ದೃಷ್ಟಿಗಳು, ವೇಷ ಭೂಷಣಗಳು, ಎನ್ನುವಂತಹ ರೀತಿಯಲ್ಲಿ ಪರಿಗಣಿಸಲ್ಪಡುತ್ತದೆ.

ಯಕ್ಷಗಾನ ಎನ್ನುವಂತದ್ದು ನಮ್ಮ ಸಂಸ್ಕೃತಿಯ ಅಪಾರವಾದ ಜ್ಞಾನವನ್ನು ಕೊಡುತ್ತದೆ ಹಾಗೂ ಇತಿಹಾಸಗಳನ್ನು ನೆನಪಿಸುತ್ತದೆ. ಒಬ್ಬ ಯಕ್ಷಗಾನ ಕಲಾವಿದ ರಂಗದಲ್ಲಿರುವಾಗ ನಾನಾ ಬಗೆಯಲ್ಲಿ ಯೋಚನಾ ಶಕ್ತಿಯನ್ನು ಹೊಂದಿರುತ್ತಾನೆ.ಒಂದೇ ಸಮಯದಲ್ಲಿ ಭಾಗವತರ ಪದ್ಯವನ್ನು ಕೇಳಿಕೊಂಡು ಚೆಂಡೆ, ಮದ್ದಳೆಗಳಿಗೆ ತಕ್ಕಂತೆ ಹೆಜ್ಜೆ ಹಾಕಿಕೊಂಡು ಪದ್ಯಕ್ಕೆ ಅನುಗುಣವಾಗಿ ಭಾವ ಭಂಗಿಗಳನ್ನ ವ್ಯಕ್ತಪಡಿಸುತ್ತಾ ರಂಗದ ಮುಂದೆ ಕುಳಿತಿರುವ ವೀಕ್ಷಕರನ್ನು ಮಗ್ನರಾಗುವ ಹಾಗೆ ತನ್ನ ಕಾರ್ಯವನ್ನು ಮುಂದುವರಿಸುತ್ತಾನೆ.

ಹಾಗೆಯೇ ನಾನಾ ಪಾತ್ರಗಳಿಗೆ ಅನುಗುಣವಾಗಿ ತನ್ನ ಮಾತಿನ ಒರಸೆಯನ್ನು ತೋರ್ಪಡಿಸುತ್ತಾನೆ. ಯಕ್ಷಗಾನ ಎನ್ನುವಂತಹ ಕಲೆ ಎಲ್ಲರಿಗೆ ಒಲಿಯುವುದಿಲ್ಲ, ಅದರೊಟ್ಟಿಗೆ ತಪಸ್ಸನ್ನೇ ಆಚರಿಸಬೇಕು, ಮನಸ್ಸಿನಲ್ಲಿ ಆರಾಧಿಸಬೇಕು. ವಿಶಿಷ್ಟವಾದಂತಹ ಕಲೆಗೆ ದೇವರ ಅನುಗ್ರಹವೂ ಬೇಕು. ಯಕ್ಷಗಾನದಲ್ಲಿ ಬಾಲಗೋಪಾಲ, ಪೀಠಿಕಾ ಸ್ತ್ರೀವೇಷ, ಒಡ್ಡೋಲಗವೇಷ, ರಾಜವೇಷ, ಪುಂಡು ವೇಷ, ಸ್ತ್ರೀ ವೇಷ, ಬಣ್ಣದ ವೇಷ, ಹಾಸ್ಯ ವೇಷ ಹೀಗೆ ಹತ್ತು ಹಲವಾರು ವೇಷಗಳನ್ನು ಒಳಗೊಂಡಿರುತ್ತದೆ.

ಪ್ರಸಂಗದ ಸ್ಥಿತಿಗತಿಯನ್ನರಿತು ಹಿಂದಿನ ಕಾಲದಲ್ಲಿ ಅನೇಕ ಬಯಲಾಟ ತಂಡಗಳು ಈ ಕಾರ್ಯವನ್ನು ನಿರ್ವಹಿಸುತ್ತಾ ಇದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಸಂಘ ಸಂಸ್ಥೆಗಳು ಯಕ್ಷಗಾನದಲ್ಲಿ ತೊಡಗಿಸಿಕೊಂಡಿವೆ. ಯಕ್ಷಗಾನದ ನಾಟ್ಯ ಭರತನಾಟ್ಯ ಹಾಗೂ ಕಥಕ್ಕಳಿ, ನಾಟ್ಯಗಳನ್ನು ಒಳಗೊಂಡಂತಹ ಅದ್ಭುತ ನಾಟ್ಯವಾಗಿರುತ್ತದೆ. ಅದೆಷ್ಟೋ ಯಕ್ಷಗಾನದ ಪಂಡಿತರು ಆಗಿ ಹೋಗಿದ್ದಾರೆ.

Advertisement

ಆದರೆ ಯಕ್ಷಗಾನ ಎನ್ನುವಂತಹ ಕಲೆಯನ್ನು ಎಷ್ಟು ಕಲಿತರೂ ಮತ್ತಷ್ಟು ಕಲಿಯುವುದಕ್ಕೆ ಇರುತ್ತದೆ. ಇದು ಯಕ್ಷಗಾನದ ವಿಶೇಷತೆ. ನಾನಾ ರೀತಿಯ ರಾಗಗಳನ್ನು ಯಕ್ಷಗಾನ ಒಳಗೊಂಡಿದೆ. ಯಕ್ಷಗಾನದ ಪ್ರಸಂಗದಲ್ಲಿ ಕ್ಷಣ ಕ್ಷಣಕ್ಕೆ ಪದ್ಯಗಳು, ರಾಗಗಳು, ನುಡಿತಗಳು, ತಾಳಗಳು, ಭಾವಗಳು, ಸನ್ನಿವೇಷಗಳು, ಬದಲಾಗುತ್ತ ಇರುತ್ತವೆ. ಯಕ್ಷಗಾನ ರಂಗದಲ್ಲಿ ರಾಜನಾಗಿ, ದೇವನಾಗಿ, ಬಡವನಾಗಿ, ಭಿಕ್ಷುಕನಾಗಿ, ಸ್ವರ್ಗವಾಗಿ, ನರಕವಾಗಿ, ಶ್ಮಶಾನವಾಗಿ, ಮದುವೆ ಮಂಟಪವಾಗಿ, ಯುದ್ಧ ರಂಗವಾಗಿ, ನಾನಾ ಬಗೆಯನ್ನು  ಒಂದೇ ವೇದಿಕೆಯಲ್ಲಿ ನೋಡುವುದಕ್ಕೆ ಸಾಧ್ಯವಿದೆ. ಹಾಗಾಗಿ ಇದು ಅಳಿಸಲಾಗದ ಮತ್ತು ಉಳಿಸಲೇಬೇಕಾದ ಒಂದು ಕಲೆ ಎಂದರೂ ತಪ್ಪಾಗದು.

-ಸಿಯಾನ ಶೆಟ್ಟಿ

ಎಂ.ಜಿ.ಎಂ., ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next