Advertisement

“ನಿನ್ನ ಜಾಗವನ್ನು ಯಾರೂ ತುಂಬಲಾರರು ಅಪ್ಪು” ಭಾವನಾತ್ಮಕ ಪತ್ರ ಬರೆದ ಕಿಚ್ಚ

02:42 PM Oct 30, 2021 | Team Udayavani |

ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ನಿಧನ ಎಲ್ಲರನ್ನೂ ಆಘಾತಕ್ಕೆ ದೂಡಿದೆ. ನಂಬಲಾಗದ ಸತ್ಯವನ್ನು ಅರಗಿಸಿಕೊಳ್ಳಲು ಚಿತ್ರರಂಗದವರು, ಅಭಿಮಾನಿಗಳು ಕಷ್ಟಪಡುತ್ತಿದ್ದಾರೆ. ಬಾಲಿವುಡ್ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

ಕಿಚ್ಚ ಸುದೀಪ್ ಅವರು ಭಾವನಾತ್ಮಕ ಪತ್ರವನ್ನು ಬರೆದಿದ್ದಾರೆ. ಅಪ್ಪು ಮತ್ತು ತನ್ನ ಪರಿಚಯ, ಒಡನಾಟವನ್ನು ನೆನೆದು ಕಿಚ್ಚ ಸುದೀಪ್ ಸುದೀರ್ಘ ಪತ್ರವನ್ನು ಟ್ವೀಟ್ ಮಾಡಿದ್ದಾರೆ.

ಸುದೀಪ್ ಪತ್ರದ ಸಾರಾಂಶ:

ಇದು ಬಾಲ್ಯದಿಂದ ಬಂದ ಪಯಣ. ನಾನು ಮೊದಲು ಪುನೀತ್ ರನ್ನು ಶಿವಮೊಗ್ಗದಲ್ಲಿ ಭೇಟಿಯಾದಾಗ ಅವರು ಅದಾಗಲೇ ಸ್ಟಾರ್ ಆಗಿದ್ದರು. ಅವರು ಭಾಗ್ಯವಂತ ಚಿತ್ರದ ಸಕ್ಸಸ್ ಟೂರ್ ನಲ್ಲಿದ್ದರು. ಚಿತ್ರಲೋಕದಲ್ಲಿ ನನ್ನ ತಂದೆ ಪರಿಚಿತರಾಗಿದ್ದ ಕಾರಣ ಪುನೀತ್ ಅವರು ಕೆಲವರೊಂದಿಗೆ ನಮ್ಮ ಮನೆಗೆ ಊಟಕ್ಕೆ ಬಂದಿದ್ದರು. ಅದು ನಮ್ಮ ಮೊದಲ ಭೇಟಿ. ಊಟಕ್ಕಿಂತ ಹೆಚ್ಚು ನನ್ನ ಆಟದ ಸಾಮಾಗ್ರಿಗಳು ಅವರನ್ನು ಆಕರ್ಷಿಸಿತ್ತು. ಮಹಿಳೆಯೊಬ್ಬರು ಅಪ್ಪುವಿಗೆ ಊಟ ಮಾಡಿಸಲು ಅವರ ಹಿಂದೆ ಓಡಾಡುತ್ತಿದ್ದ ಕ್ಷಣಗಳು ನನಗೀಗಲೂ ನೆನಪಿದೆ. ಅವರ ಉತ್ಸಾಹ ಕಂಡು ನಾನು ಪುಳಕಿತನಾಗಿದ್ದೆ. ನನ್ನ ನೆರೆಹೊರೆಯವರು, ಮಕ್ಕಳು ಎಲ್ಲರೂ ಅಂದು ನಮ್ಮ ಮನೆಯಲ್ಲಿ ಸೇರಿದ್ದರು. ಯಾಕೆಂದರೆ ಅಲ್ಲಿ ಬಂದಿದ್ದು ಸಾಮಾನ್ಯ ಬಾಲಕನಲ್ಲ… ಪುನೀತ್.. ಚಿತ್ರರಂಗದ ಹೊಸ ತಾರೆ, ದಿಗ್ಗಜ ಡಾ.ರಾಜ್ ಕುಮಾರ್ ಅವರ ಪುತ್ರ.

ಇದನ್ನೂ ಓದಿ:ಅಭಿಮಾನಿಗಳ ಒತ್ತಾಯದ ಹಿನ್ನಲೆ ನಾಳೆ ಪುನೀತ್ ಅಂತ್ಯಕ್ರಿಯೆ : ಸಿಎಂ ಬೊಮ್ಮಾಯಿ

Advertisement

ನಾವು ಮತ್ತೆ ಹಲವು ಬಾರಿ ಭೇಟಿಯಾಗಿದ್ದೆವು. ನಂತರ ಸಹೋದ್ಯೋಗಿಗಳಾದೆವು. ಆತ ಕೇವಲ ಸ್ನೇಹಿತನಲ್ಲ, ಒಬ್ಬ ಉತ್ತಮ ಸ್ಪರ್ಧಿ ಕೂಡಾ. ಅದ್ಭುತ ನಟ, ಡ್ಯಾನ್ಸರ್, ಫೈಟರ್ ಮತ್ತು ಅತ್ಯುತ್ತಮ ಮನುಷ್ಯ. ನಾನು ಈ ಸ್ಪರ್ಧೆಯನ್ನು ಆನಂದಿಸಿದ್ದೇನೆ, ಯಾಕೆಂದರೆ ಅದು ನನ್ನಲ್ಲೂ ಉತ್ತಮ ಪ್ರದರ್ಶನಕ್ಕೆ ಕಾರಣವಾಗಿದೆ. ಅಪ್ಪುವಿನಂತಹ ನಟ ಇದ್ದ ಕಾಲದಲ್ಲಿಯೇ ನಾನು ನಟನಾಗಿರುವುದಕ್ಕೆ ಖುಷಿ ಮತ್ತು ಹೆಮ್ಮೆಯಿದೆ.

ಚಿತ್ರರಂಗವಿಂದು ಅಪೂರ್ಣವಾಗಿದೆ. ಶೂನ್ಯವಾಗಿದೆ, ಕಾಲ ಕ್ರೂರಿಯಂತೆ ಕಾಣುತ್ತಿದೆ. ಸ್ಥಳವು ದುಃಖಕರವಾಗಿ ಕಾಣುತ್ತಿದೆ. ಕಪ್ಪು ಮೋಡಗಳು, ತುಂತುರು ಹನಿಗಳು.., ನಿನ್ನೆ ಪ್ರಕೃತಿಯೂ ಅಳುವಂತೆ ಭಾಸವಾಗುತ್ತಿತ್ತು. ನಾನು ಬೆಂಗಳೂರಿಗೆ ಬಂದಿಳಿದು, ಅವರನ್ನಿರಿಸಿದ್ದ ಜಾಗಕ್ಕೆ ಹೊರಟೆ, ನನ್ನ ಉಸಿರು ಭಾರವಾಗುತ್ತಿತ್ತು. ನಾನಿನ್ನೂ ಅರಗಿಸಿಕೊಳ್ಳಲಾಗದ ನೈಜತೆಯತ್ತ ನಾನು ಸಮೀಪಿಸುತ್ತಿದ್ದೆ.

ಆತ ಅಲ್ಲಿ ಮಲಗಿರುವುದನ್ನು ಕಂಡು ಎದೆಯ ಮೇಲೆ ಕಲ್ಲಿಟ್ಟ ಹಾಗಾಗಿತ್ತು. ಹತ್ತು ಹಲವು ಪ್ರಶ್ನೆಗಳು ಮತ್ತು ಯೋಚನೆಗಳು, ಯಾಕೆ.. ಹೇಗೆ!

ಮೊದಲ ಬಾರಿಗೆ ನನಗೆ ಸರಿಯಾಗಿ ಉಸಿರಾಡಲಾಗಲಿಲ್ಲ. ನನ್ನೊಬ್ಬ ಸಹೋದ್ಯೋಗಿ, ಸ್ನೇಹಿತ ಎಲ್ಲಿರಬಾರದಿತ್ತೋ ಅಲ್ಲಿ ಹೋಗಿದ್ದ. ನನಗೆ ಹೆಚ್ಚು ಹೊತ್ತು ಅವನನ್ನು ನೋಡಲಾಗಲಿಲ್ಲ. ಆ ದೃಶ್ಯ ಇನ್ನೂ ನನ್ನನ್ನು ಕಾಡುತ್ತಿದೆ.

ಶಿವಣ್ಣನನ್ನು ಆ ಸ್ಥಿತಿಯಲ್ಲಿ ನೋಡುವುದು ಮತ್ತಷ್ಟು ಕಷ್ಟ. ಅವರೊಂದು ಮಾತು ಹೇಳಿದರು. “ಪುನೀತ್ ನನಗಿಂತ 13 ವರ್ಷ ಚಿಕ್ಕವನು. ನಾನು ಈ ಕೈಗಳಿಂದ ಅವನನ್ನು ಎತ್ತಿ ಆಡಿಸಿದ್ದೆ. ಇದುವರೆಗೆ ತುಂಬಾ ನೋಡಿದ್ದೇನೆ, ನನಗೆ ಇನ್ನೇನು ನೋಡಬೇಕಿದೆಯೋ..”

ಈ ಮಾತುಗಳಿನ್ನೂ ನನ್ನ ಕಿವಿಗಳಿಗೆ ಅಪ್ಪಳಿಸುತ್ತಲೇ ಇದೆ. ಎಲ್ಲರಿಗೂ ಆಘಾತವಾಗಿದೆ. ಬೇಸರವಾಗಿದೆ. ಜರ್ಜರಿತರಾಗಿದ್ದಾರೆ.

ಇದನ್ನೆಲ್ಲಾ ಅರಗಿಸಿಕೊಳ್ಳಲು ಇನ್ನೂ ತುಂಬಾ ಸಮಯ ಬೇಕಾಗುತ್ತದೆ. ಆದರೂ ಆ ಒಂದು ಜಾಗ ಮಾತ್ರ ಖಾಲಿಯಾಗಿಯೇ ಉಳಿಯುತ್ತದೆ. ಆ ಜಾಗವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಆ ಜಾಗ ನಮ್ಮ ಪ್ರೀತಿಯ ಅಪ್ಪುವಿಗೆ ಮಾತ್ರ ಸೀಮಿತ.

Advertisement

Udayavani is now on Telegram. Click here to join our channel and stay updated with the latest news.

Next