Advertisement

ಮರಳು ಗ್ರಾಹಕರ ಕುಂದುಕೊರತೆ ಆಲಿಸಲು ತುರ್ತು ಸಹಾಯವಾಣಿ

01:48 AM Jun 18, 2022 | Team Udayavani |

ಮಂಗಳೂರು: ಜಿಲ್ಲೆಯ ಮರಳು ಗ್ರಾಹಕರ ಕುಂದುಕೊರತೆ ಆಲಿಸಲು ತುರ್ತಾಗಿ ಸಹಾಯವಾಣಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕ ಬಿ.ಎಂ. ಲಿಂಗರಾಜ್‌ ಅವರಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಮರಳು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ತಾಲೂಕು ವ್ಯಾಪ್ತಿಯ ಫಲ್ಗುಣಿ ನದಿ ಪಾತ್ರದ ಅದ್ಯಪಾಡಿ ಅಣೆಕಟ್ಟು ಹಾಗೂ ಬಂಟ್ವಾಳ ತಾಲೂಕು ವ್ಯಾಪ್ತಿಯ ನೇತ್ರಾವತಿ ನದಿ ಪಾತ್ರದ ಶಂಭೂರು ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಹೂಳು ತೆಗೆಯುವ ಕೆಲಸ ಆರಂಭವಾಗಿದ್ದು, ಈಗಾಗಲೇ ಶೇಖರಣೆಗೊಂಡಿರುವ ಮರಳನ್ನು ಗ್ರಾಹಕರಿಗೆ ಸೂಕ್ತ ಸಮಯಲ್ಲಿ ತಲುಪಿಸುವ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು.

“ಮರಳು ಮಿತ್ರ’ ಆ್ಯಪ್‌
“ಮರಳು ಮಿತ್ರ’ ಆ್ಯಪ್‌ಅಭಿವೃದ್ಧಿಗೊಂಡಿದ್ದು, ಮರಳಿನ ಗುಣಮಟ್ಟವನ್ನು ಗ್ರಾಹಕರ ಇದೀಗ ಆನ್‌ಲೈನ್‌ ಮೂಲಕವೂ ಪರಿಶೀಲಿಸಿಕೊಂಡು, ಅನಂತರ ಮರಳನ್ನು ಮುಂಗಡವಾಗಿ ಕಾದಿರಿಸಿಕೊಳ್ಳಬಹುದಾಗಿದೆ. ಇದರ ಬಗ್ಗೆ ವ್ಯಾಪಕ ಪ್ರಚಾರವಾಗಬೇಕು. ಅದು ಜನಸಾಮಾನ್ಯರಿಗೆ ಉಪಯೋಗ ವಾಗಬೇಕು ಎಂದರು.

ಮರಳುಗಾರಿಕೆ ನಡೆಯುವ ಮತ್ತು ಅಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸಬೇಕು. ಶಾಲೆಗಳಿರುವ ರಸ್ತೆಗಳಲ್ಲಿ ಮರಳು ವಾಹನಗಳು ನಿಧಾನವಾಗಿ ಚಲಿಸಬೇಕು. ಜಿಲ್ಲೆಯಲ್ಲಿ ಮರಳಿನ ಸಂಗ್ರಹ ಪ್ರಮಾಣ, ಬುಕ್ಕಿಂಗ್‌ ಮಾಡಿದ ಗ್ರಾಹಕರು, ಈಗಾಗಲೇ ಮರಳು ತಲುಪಿದವರ ಪಟ್ಟಿಯನ್ನು ಪ್ರತೀವಾರ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು, ಮರಳುಗಾರಿಕೆ ವ್ಯಾಪ್ತಿಯ ಪ್ರದೇಶದಲ್ಲಿ ಕಡ್ಡಾಯವಾಗಿ ಸಿಸಿ ಕೆಮರಾ ಅಳವಡಿಸಬೇಕು ಹಾಗೂ ಮರಳು ಸಾಗಾಟ ವಾಹನಗಳಿಗೆ ಜಿಪಿಎಸ್‌ ಅಳವಡಿಸುವಂತೆ ಅವರು ಗಣಿ ಇಲಾಖೆಗೆ ಸೂಚಿಸಿದರು.

Advertisement

ರಾಜ್ಯ ಮಿನರಲ್ಸ್‌ ಕಾರ್ಪೊರೇಷ‌ನ್‌ ಲಿಮಿಟೆಡ್‌ನ‌ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಎಸ್‌. ಕಾವೇರಿ, ಜಿಲ್ಲಾ ಎಸ್‌ಪಿ ಹೃಷಿಕೇಷ್‌ ಭಗವಾನ್‌ ಸೋನಾವಣೆ, ಮಂಗಳೂರು ಸಹಾಯಕ ಆಯುಕ್ತ ಮದನ್‌ ಮೋಹನ್‌, ತಹಶೀಲ್ದಾರ್‌ ಪುರಂದರ ಮೊದಲಾದ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next