Advertisement

ಗುರುವಿನ ಟೈಟಲ್‌; ಶಿಷ್ಯನ ಸಿನಿಮಾ; ಈಗ ಅಮೃತವರ್ಷಿಣಿ; ಮುಂದೆ…

05:16 PM Jul 31, 2018 | Sharanya Alva |

ಕನ್ನಡದ ಜನಪ್ರಿಯ ಮತ್ತು ಯಶಸ್ವಿ ಚಿತ್ರಗಳ ಪೈಕಿ ದಿನೇಶ್‌ ಬಾಬು ನಿರ್ದೇಶನದ “ಅಮೃತವರ್ಷಿಣಿ’ ಸಹ ಒಂದು. ರಮೇಶ್‌ ಅರವಿಂದ್‌, ಸುಹಾಸಿನಿ, ಶರತ್‌ ಬಾಬು ಮುಂತಾದವರು ಅಭಿನಯಿಸಿರುವ ಈ ಚಿತ್ರವು ದೊಡ್ಡ ಯಶಸ್ಸು ಪಡೆದಿದ್ದಷ್ಟೇ ಅಲ್ಲ, ಅದರ ಹಾಡುಗಳು ಈಗಲೂ ಜನಪ್ರಿಯ. ಈಗ ಅದೇ ಶೀರ್ಷಿಕೆಯನ್ನಿಟ್ಟುಕೊಂಡು, ದಿನೇಶ್‌ ಬಾಬು ಅವರ ಶಿಷ್ಯ ಶಿವಪ್ರಭು ಹೊಸದೊಂದು ಸಿನಿಮಾ ಮಾಡುವುದಕ್ಕೆ ಸಜ್ಜಾಗುತ್ತಿದ್ದಾರೆ.

Advertisement

ಎರಡು ವರ್ಷಗಳ ಹಿಂದೆ ಯೋಗಿ ಅಭಿನಯದ “ಕಾಲಭೈರವ’ ಚಿತ್ರ ನಿರ್ದೇಶಿಸಿದ್ದ ಶಿವಪ್ರಭು, ಈಗ ಹೊಸದೊಂದು ಥಾಟ್‌ನೊಂದಿಗೆ, “ಅಮೃತವರ್ಷಿಣಿ’ ಎಂಬ ಚಿತ್ರವನ್ನು ನಿರ್ದೇಶಿಸುವುದಕ್ಕೆ ಹೊರಟಿದ್ದಾರೆ. ಈ ಚಿತ್ರಕ್ಕೆ ಅವರು ನಿರ್ದೇಶಕರಷ್ಟೇ ಅಲ್ಲ, ಕಥೆ, ಚಿತ್ರಕಥೆ ಮತ್ತು ನಿರ್ಮಾಣ ಸಹ ಅವರದ್ದೇ. ಹೆಸರು ಬಿಟ್ಟರೆ, ಮೂಲ ಚಿತ್ರಕ್ಕೂ, ಈ “ಅಮೃತವರ್ಷಿಣಿ’ಗೂ ಯಾವುದೇ ಸಂಬಂಧವಿಲ್ಲ. ಹೆಸರು ಮಾತ್ರ ಅದೇ. ಮಿಕ್ಕಂತೆ ಈ ಎರಡು ವರ್ಷಗಳಲ್ಲಿ ಒಂದು ತಂಡ ಕಟ್ಟಿಕೊಂಡು, ಒಂದು ಹೊಸ ಕಥೆ ಮಾಡಿ, ಚಿತ್ರ ಮಾಡುವುದಕ್ಕೆ ತಯಾರಿ ನಡೆಸುತ್ತಿದ್ದಾರೆ ಶಿವಪ್ರಭು. 

ಅಂದಹಾಗೆ, ಈ ಚಿತ್ರ ಆಗಸ್ಟ್‌ 19ರಂದು ಪ್ರಾರಂಭವಾಗಲಿದ್ದು, ಮಡಿಕೇರಿಯ ಮನೆಯೊಂದರಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆಯಂತೆ. “ಅಮೃತವರ್ಷಿಣಿ’ ಚಿತ್ರಕ್ಕೆ ಯಶಸ್‌ ಸೂರ್ಯ ನಾಯಕನಾಗಿ ಆಯ್ಕೆಯಾಗಿದ್ದು, ನಾಯಕಿಯ ಹುಡುಕಾಟದಲ್ಲಿದ್ದಾರೆ ಶಿವಪ್ರಭು. ಈ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇನ್ನು ಛಾಯಾಗ್ರಾಹಕ, ಇತರೆ ತಂತ್ರಜ್ಞರು ಮತ್ತು ಕಲಾವಿದರ ಹುಡುಕಾಟ ನಡೆಯುತ್ತಲಿದೆ.

ಅಂದಹಾಗೆ, ಸದ್ಯಕ್ಕೆ “ಅಮೃತವರ್ಷಿಣಿ’ ಕೈಗೆತ್ತಿಕೊಂಡಿರುವ ಶಿವಪ್ರಭು, ಅದರ ನಂತರ “ಸುಪ್ರಭಾತ’ ಎಂಬ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಾರಂತೆ. ವಿಶೇಷವೆಂದರೆ, “ಸುಪ್ರಭಾತ’ ಸಹ ದಿನೇಶ್‌ ಬಾಬು ಅವರ ಚಿತ್ರವೇ. ಅದೇ ಹೆಸರಿಟ್ಟು, ಹೊಸ ಕಥೆ ಮಾಡಿ, ಹೊಸ ಚಿತ್ರ ಮಾಡುವುದು ಶಿವಪ್ರಭು ಯೋಚನೆ.

Advertisement

Udayavani is now on Telegram. Click here to join our channel and stay updated with the latest news.

Next