ಬೆಂಗಳೂರು: ಬಿಬಿಎಂಪಿ ಮೇಯರ್ ಆಯ್ಕೆ ಕುರಿತು ಆಡಳಿತ ಪಕ್ಷ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಈ ಕುರಿತು ಮಂಗಳವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಕಾರ್ಪೊರೇಟರ್ಗಳ ಜೊತೆಗೆ ಮಾತುಕತೆ ನಡೆಸಿದ್ದಾರೆ. ಪಕ್ಷದ ತೀರ್ಮಾನಕ್ಕೆ ಬದ್ದರಾಗಿರುವಂತೆ ಎಲ್ಲರಿಗೂ ಸೂಚಿಸಿದ್ದಾರೆ.
ಮೇಯರ್ ಅಭ್ಯರ್ಥಿ ಆಯ್ಕೆ ಸಂಬಂಧ ಬುಧವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ನೇತೃತ್ವದಲ್ಲಿ ಅಂತಿಮ ಸಭೆ ನಡೆಯಲಿದ್ದು, ಅದಕ್ಕೂ ಮುಂಚಿತವಾಗಿ ಮೇಯರ್ ಆಕಾಂಕ್ಷಿಗಳ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ. ಅವರ ಆಯ್ಕೆಯ ನಂತರ ಯಾವುದೇ ಆಕಾಂಕ್ಷಿಯೂ ಅಪಸ್ವರ ಎತ್ತಬಾರದು ಎಂದು ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಮುಖವಾಗಿ ದೇವರ ಜೀವನಹಳ್ಳಿ ವಾರ್ಡ್‌ನ ಕಾರ್ಪೊರೇಟರ್ ಸಂಪತ್ ರಾಜ್, ಸುಭಾಷ್ ನಗರ ವಾರ್ಡ್ ಗೋವಿಂದರಾಜ್, ಲಕ್ಷ್ಮೀದೇವಿ ನಗರ ವಾರ್ಡ್‌ನ ವೇಲುನಾಯಕರ್ ಹೆಸರುಗಳು ಮುಂಚೂಣಿಯಲ್ಲಿವೆ. ಮಂಗಳವಾರ ನಡೆದ ಸಭೆಯಲ್ಲಿ ನಾಯಕರ ತೀರ್ಮಾನಕ್ಕೆ ಬದ್ದವಾಗಿರುವುದಾಗಿ ಎಲ್ಲ ಆಕಾಂಕ್ಷಿಗಳು ಹೇಳಿರುವುದರಿಂದ ಬುಧವಾರದ ಸಭೆ ಮಹತ್ವ ಪಡೆದುಕೊಂಡಿದೆ.
ಬಹಿಷ್ಕಾರದ ಬೆದರಿಕೆ?: ಈ ಮಧ್ಯೆ, ಬೆಂಗಳೂರು ಹೊರ ವಲಯದ ಭಾಗದ ಕಾರ್ಪೊರೇಟರ್‌ಗಳಿಗೆ ಮೇಯರ್ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಹೆಚ್ಚು ಮಹತ್ವ ಬಂದಿದ್ದು, ಹೊರ ವಲಯದ ವಾರ್ಡ್‌ಗಳಿಂದ ಆಯ್ಕೆಯಾಗಿರುವ ಕಾರ್ಪೊರೇಟರ್‌ಗೆ ಮೇಯರ ಸ್ಥಾನ ನೀಡದಿದ್ದರೆ, ಸೆಪ್ಟಂಬರ್ 28 ರಂದು ನಡೆಯುವ ಮೇಯರ್ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಸಂಸದ ಡಿ.ಕೆ. ಸುರೇಶ್, ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹಾಗೂ ಕೆ.ಆರ್.ಪುರ ಶಾಸಕ ಬೈರತಿ ಬಸವರಾಜ್ ಪಕ್ಷದ ನಾಯಕರಿಗೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ಆದ ಮೇಲೆ ಬೆಂಗಳೂರಿನ ವ್ಯಾಪ್ತಿ ವಿಸ್ತಾರವಾಗಿದ್ದು, ಆರು ವಿಧಾನಸಭಾ ಕ್ಷೇತ್ರಗಳು ಬೆಂಗಳೂರಿನ ಹೊರ ವಲಯದಲ್ಲಿ ಬರುತ್ತಿದ್ದು, ಸುಮಾರು 40 ಲಕ್ಷ ಜನ ಹೊರ ವಲಯದ ಕ್ಷೇತ್ರಗಳಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಹೊರ ವಲಯದ ಕ್ಷೇತ್ರಗಳಲ್ಲಿ ಸಾಕಷ್ಟು ಮೂಲ ಸೌಕರ್ಯದ ಕೊರತೆ ಇರುವುದರಿಂದ ಮೀಸಲಾತಿ ಪ್ರಕಾರ ಅರ್ಹರಿರುವ ಯಾವುದಾದರೂ ವಾರ್ಡ್‌ನ ಸದಸ್ಯರಿಗೆ ನೀಡಬೇಕೆನ್ನುವುದು ಇವರ ಬೇಡಿಕೆ. ತಮ್ಮ ಬೇಡಿಕೆಗೆ ನಾಯಕರು ಸ್ಪಂದಿಸದಿದ್ದರೆ, ಚುನಾವಣೆ ಬಹಿಷ್ಕರಿಸುವುದಾಗಿ ಹೇಳಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
3/5 ಭಾಗಗಳಲ್ಲಿ ವಿಭಜನೆ: ಸಿಎಂ ಸುಳಿವು
ಕೆಲ ದಿನಗಳಿಂದ ತೆರೆಮರೆಗೆ ಸರಿದಿದ್ದ “ವಿಭಜನೆ’ ವಿಷಯಕ್ಕೆ ಮತ್ತೆ ಜೀವ ನೀಡಿರುವ ಸಿಎಂ ಸಿದ್ದರಾಮಯ್ಯ, “ಆಡಳಿತಾತ್ಮಕ ದೃಷ್ಟಿಯಿಂದ ಬಿಬಿಎಂಪಿಯನ್ನು ವಿಭಜಿಸುವ ಚಿಂತನೆಯಿದೆ,’ ಎಂದು ಮತ್ತೂಮ್ಮೆ ಹೇಳಿದ್ದಾರೆ. ಶಂಕರಮಠ ವಾರ್ಡ್‌ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬಿಬಿಎಂಪಿಯಲ್ಲಿ ಸದ್ಯ 198 ವಾರ್ಡ್‌ಗಳಿವೆ. ಇದಕ್ಕೆ 110 ಹಳ್ಳಿಗಳು ಹೊಸದಾಗಿ ಸೇರಿವೆ. ಮೇಲಾಗಿ, ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದೆ. ಹೀಗಿರುವಾಗ ಒಂದೇ ಪಾಲಿಕೆಯಿಂದ ಇಷ್ಟೊಂದು ದೊಡ್ಡ ಆಡಳಿತ ವ್ಯವಸ್ಥೆಯ ನಿರ್ವಹಣೆ ಸಾಧ್ಯವಿಲ್ಲ. ಕೇವಲ ಆಡಳಿತಾ ತ್ಮಕ ದೃಷ್ಟಿಯಿಂದ ಮಾತ್ರ ಬಿಬಿಎಂಪಿಯನ್ನು 3 ಅಥವಾ 5 ಭಾಗಗಳಲ್ಲಿ ವಿಂಗಡಿಸುವ ಚಿಂತನೆಯಿದೆ.
ಓಟಿಗಾಗಿ ಅಥವಾ ರಾಜಕೀಯ ಲಾಭಕ್ಕಾಗಿ ಬಿಬಿಎಂಪಿ ವಿಭಜನೆ ಮಾಡಲಾಗುತ್ತಿದೆ ಎಂಬುದು ಸರಿಯಲ್ಲ. ಪ್ರಾಯೋಗಿಕ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದ ಸಿಎಂ, ಸಿದ್ದರಾಮಯ್ಯ, “ಮುಂದಿನ ಬಾರಿಯೂ ಪಾಲಿಕೆಯಲ್ಲಿ ಜನ ನಮಗೇ ಆಶಿರ್ವಾದ ಮಾಡಲಿದ್ದಾರೆ’ ಎಂದು ಹೇಳುವ ಮೂಲಕ “ಬಿಬಿಎಂಪಿ ವಿಭಜನೆ’ ವಿಚಾರ ಜೀವಂತವಾಗಿರಲಿದೆ ಎಂಬ ಮುನ್ಸೂಚನೆ ನೀಡಿದರು.