Advertisement
ಸಾಮಾನ್ಯವಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಬಂದರೆ ಸಂಘಟನೆಯಷ್ಟೇ ಮುಖ್ಯವಾಗಿ ಪಕ್ಷದ ಆಂತರಿಕ ಭಿನ್ನಮತ, ದೂರುಗಳ ಸುರಿ ಮಳೆಯಾಗುತ್ತದೆ. ಆದರೆ, ಶಾ ಪ್ರವಾಸದ ಅವಧಿಯಲ್ಲಿ ಪಕ್ಷದ ರಾಜ್ಯ ನಾಯಕರ ವಿರುದ್ಧ ದೂರುಗಳಿಗೆ ಅವಕಾಶವಿಲ್ಲ. ಕೇವಲ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದನ್ನೇ ದೃಷ್ಟಿಯಲ್ಲಿಟ್ಟು ಕಾರ್ಯತಂತ್ರಗಳನ್ನು ಸಿದ್ಧಪಡಿಸಲು ಸೀಮಿತಗೊಳಿಸುವಂತೆ ಶಾ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
Related Articles
ಪಕ್ಷ ಅಧಿಕಾರಕ್ಕೆ ಬರಬೇಕಾದರೆ ತಳಮಟ್ಟದಿಂದ ಕೆಲಸ ಆಗಬೇಕಾಗುತ್ತದೆ. ಅದಕ್ಕಾಗಿ ತಳಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಆವಶ್ಯಕತೆ ಇದೆ. ರಾಜ್ಯದಲ್ಲಿ ಇತ್ತೀಚೆಗೆ ಉದ್ಭವವಾಗಿದ್ದ ಭಿನ್ನಮತ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದ್ದು, ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾಯಕರನ್ನು ಒಟ್ಟಾಗಿ ಕೂರಿಸಿ ಪರಸ್ಪರ ವಿಶ್ವಾಸ ಮೂಡಿಸುವ ಕೆಲಸವನ್ನು ಅಮಿತ್ ಶಾ ಅವರು ಮಾಡಲಿದ್ದಾರೆ. ಆ ಮೂಲಕ ಕಾರ್ಯಕರ್ತರನ್ನು ಸಕ್ರಿಯಗೊಳಿಸಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಮಿಷನ್-150ರ ಗುರಿ ತಲುಪಲು ಪೂರಕವಾಗಿ ಕೆಲಸ ಮಾಡುವಂತೆ ಪ್ರೇರೇಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
Advertisement
2019ರಲ್ಲಿ ನಡೆಯುವ ಲೋಕಸಭೆ ಚುನಾವಣೆ ಬಗ್ಗೆಯೂ ಸಿದ್ಧತೆ ಆರಂಭವಾಗಲಿದೆ. ಸಂಸದರೊಂದಿಗೆ ಸಮಾಲೋಚನೆ ನಡೆಸಲಿರುವ ಅಮಿತ್ ಶಾ ಬಳಿಕ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದ 11 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳನ್ನು ಕರೆಸಿ ಮಾತುಕತೆ ನಡೆಸಲಿದ್ದಾರೆ. ಆ ಮೂಲಕ ಅಲ್ಲಿ ಈಗಿನಿಂದಲೇ ಪಕ್ಷ ಸಂಘಟನೆಗೆ ಸೂಚನೆಗಳನ್ನು ನೀಡಲಿದ್ದಾರೆ.
ಪರಿವಾರದ ಜತೆ ಮಾತುಕತೆ: ಅಮಿತ್ ಶಾ ಸೋಮವಾರ ಬೆಳಗ್ಗೆ ಸಂಘ ಪರಿವಾರದ ಮುಖಂಡರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಗಣ್ಯರ ಸಭೆಗೆ ದೇವಿಶೆಟ್ಟಿ, ಚಿಮೂಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಸಂಜೆ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಮಾಲೋಚನೆ ನಡೆಸಲಿದ್ದು, ಸುಮಾರು 600ರಿಂದ 800 ಮಂದಿಗೆ ಆಹ್ವಾನ ನೀಡಲಾಗಿದೆ. ನಗರದ ಖಾಸಗಿ ಹೊಟೇಲ್‌ನಲ್ಲಿ ಸಂಜೆ 6.45ಕ್ಕೆ ನಡೆಯುವ ಈ ಸಮಾಲೋಚನೆಗೆ ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ| ದೇವಿಶೆಟ್ಟಿ, ಹಿರಿಯ ಸಂಶೋಧಕ ಡಾ| ಎಂ. ಚಿದಾನಂದಮೂರ್ತಿ, ಸಾಹಿತಿ ಸುಮತೀಂದ್ರ ನಾಡಿಗ್, ಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ, ವಿವಿಧ ಕಂಪೆನಿಗಳ ಸಿಇಒಗಳು, ಪ್ರಮುಖ ವಕೀಲರು, ಲೆಕ್ಕ ಪರಿಶೋಧಕರು, ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ನಟ ಉಪೇಂದ್ರ ಅವರಿಗೂ ಆಹ್ವಾನವಿದೆ ಎಂದು ಹೇಳಲಾಗುತ್ತಿದೆಯಾದರೂ ಅದು ಖಚಿತವಾಗಿಲ್ಲ. ಉಪೇಂದ್ರ ಬಿಜೆಪಿ ಸೇರ್ತಾರಾ?
ಚಿತ್ರನಟ ಹಾಗೂ ನಿರ್ದೇಶಕ ಉಪೇಂದ್ರ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಮಾತು ಜೋರಾಗಿ ಕೇಳಿಬರುತ್ತಿದೆಯಾದರೂ ಅವರೇನೂ ಈ ತನಕ ಅಧಿಕೃತವಾಗಿ ಬಾಯಿಬಿಟ್ಟಿಲ್ಲ. ಆದರೆ, ದಟ್ಟವಾಗಿ ಹರಡುತ್ತಿರುವ ಸುದ್ದಿಗೆ ಪೂರಕವಾಗಿ ಇಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿ ಹಾಗೂ ತಮ್ಮ ಮುನ್ನೋಟದ ಕುರಿತು ಆಡಿಯೋವೊಂದನ್ನು ಅನಾಮತ್ತಾಗಿ ಹರಿಯಬಿಟ್ಟು ಬೆಂಕಿಗೆ ಗಾಳಿ ಹಾಕಿದ್ದಾರೆ. ಬಿಜೆಪಿ ಮೂಲಗಳ ಪ್ರಕಾರ, ಈಗಾಗಲೇ ಉಪೇಂದ್ರ ಅವರನ್ನು ಪಕ್ಷಕ್ಕೆ ಆಹ್ವಾನಿಸಲಾಗಿದೆ. ಆದರೆ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಂತೆ. ನಟ ಉಪೇಂದ್ರ ಅವರು ಮೋದಿ ಅಭಿಮಾನಿಯಾಗಿದ್ದು, ಅವರ ಕುರಿತಾದ ಚಲನಚಿತ್ರವೊಂದನ್ನು ಮಾಡಲು ಕೂಡ ಮುಂದಾಗಿದ್ದಾರೆ. ಹೀಗಾಗಿ ಅಮಿತ್ ಶಾ ಅವರು ಬೆಂಗಳೂರಿಗೆ ಆಗಮಿಸುವ ಸಂದರ್ಭದಲ್ಲಿ ಅವರನ್ನು ಭೇಟಿಯಾಗಿ ಪಕ್ಷ ಸೇರಬಹುದು ಎಂಬ ಮಾತು ಕೇಳಿಬರುತ್ತಿದೆ.