Advertisement

2023ರ ಚುನಾವಣೆ ನಾಯಕತ್ವ; ಬಿಜೆಪಿಯಲ್ಲಿ ಸಂಚಲನ-ಜಿಜ್ಞಾಸೆ ಸೃಷ್ಟಿಸಿದ ಅಮಿತ್‌ ಶಾ ಹೇಳಿಕೆ

04:46 PM Sep 03, 2021 | Team Udayavani |

ಮುಂದಿನ ವಿಧಾನಸಭೆ ಚುನಾವಣೆಯ ನಾಯಕತ್ವ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ್ದು, ಜಿಜ್ಞಾಸೆ ಹುಟ್ಟು ಹಾಕುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ.

Advertisement

ರಾಜ್ಯದ ವಿಧಾನಸಭೆ ಚುನಾವಣೆಗೆ ಇನ್ನು ಸುಮಾರು 18 ತಿಂಗಳು ಕಾಲವಕಾಶವಿದೆ. ಚುನಾವಣೆ ನಾಯಕತ್ವದ ವಿಚಾರ ಪ್ರಸ್ತಾಪಕ್ಕೆ ಅಗತ್ಯವಿಲ್ಲದ ವೇದಿಕೆಯಲ್ಲಿ ಚುನಾವಣೆ ನಾಯಕತ್ವ ಘೋಷಣೆ ಮೂಲಕ ಅಮಿತ್‌ ಶಾ ಅವರು, ಬಿಜೆಪಿಯಲ್ಲಿ ಮಹತ್ವದ ಚರ್ಚೆ ಹುಟ್ಟು ಹಾಕುವಂತೆ ಮಾಡಿದ್ದಾರೆ. ಅಲ್ಲಿಗೆ ರಾಜ್ಯದಲ್ಲಿ ಬಿಜೆಪಿ ಹೊಸ ನಾಯಕತ್ವ ಬೆಳೆಸಲು ತಾಲೀಮು ಶುರುವಿಟ್ಟುಕೊಂಡಿದ್ದೇವೆ ಎಂಬ ಸಂದೇಶ ನೀಡಿದ್ದಾರೆಯೇ ಎಂಬ ಪ್ರಶ್ನೆ ಮೂಡತೊಡಗಿದೆ.

ರಾಜ್ಯ ರಾಜಕೀಯದಲ್ಲಿ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನ ಬದಲಾಗಿತ್ತು. ಬಿ.ಎಸ್‌.ಯಡಿಯೂರಪ್ಪ ಅವರ ಸ್ಥಾನದಲ್ಲಿ, ಯಡಿಯೂರಪ್ಪ ಅವರ ಸಮ್ಮತಿಯೊಂದಿಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು. ನಾಯಕತ್ವ ಬದಲಾವಣೆಗೆ ಒಂದು ತಿಂಗಳಾಗಿದೆಯಷ್ಟೇ. ಮುಂದಿನ ಚುನಾವಣೆಯ ನಾಯಕತ್ವದ ಕುರಿತಾಗಿ ಸ್ಪಷ್ಟ ಚರ್ಚೆ, ತೀರ್ಮಾನಗಳಿನ್ನು ಆಗಿಲ್ಲ ಎಂಬುದು ಬಿಜೆಪಿ ವಲಯದ ಅನಿಸಿಕೆಯಾಗಿದೆ.

ಇನ್ನೊಂದು ಕಡೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್‌ ಅವರು ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದ್ದರ ಬೆನ್ನ ಹಿಂದೆಯೇ ಅಮಿತ್‌ ಶಾ ಅವರ ಹೇಳಿಕೆ ಹೊಸ ವಿದ್ಯಮಾನಗಳನ್ನು ಸೃಷ್ಟಿಸುವಂತೆ ಮಾಡಿದೆ.

ಪ್ರಯೋಗಾತ್ಮಕ ಅಸ್ತ್ರ ಬಳಸಿದರೆ ಚಾಣಕ್ಯ?: ರಾಜಕೀಯ ತಂತ್ರಗಾರಿಕೆಯಲ್ಲಿ ತಮ್ಮದೇ ಸಾಮರ್ಥ್ಯ ಹೊಂದಿರುವ ಅಮಿತ್‌ ಶಾ ಅವರ ರಾಜಕೀಯ ನಡೆ, ಚಿಂತನೆ ವಿಭಿನ್ನ ಹಾಗೂ ವಿಶೇಷತೆಗಳನ್ನು ಕೂಡಿರುತ್ತವೆ. ಅವರು ಪ್ರಯೋಗಿಸುವ ರಾಜಕೀಯ ಅಸ್ತ್ರಗಳು ಹಾಗೂ ದಾಳ ಫಲ ನೀಡಿದ ನಂತರವೇ ಗೋಚರಿಸುತ್ತವೆ ಎಂಬ ಮಾತು ರಾಷ್ಟ್ರ ರಾಜಕೀಯದ ಹಲವು ಪ್ರಕರಣಗಳಲ್ಲಿ ಸಾಬೀತಾಗಿದೆ. ಇದೀಗ ರಾಜ್ಯದಲ್ಲಿಯೂ ಮುಂದಿನ ವಿಧಾನಸಭೆ ಚುನಾವಣೆಯ ನಾಯಕತ್ವದ ಕುರಿತಾಗಿ ಪ್ರಯೋಗಾತ್ಮಕ ಅಸ್ತ್ರ ಬಳಸಿದರೇ ಎಂಬ ಪ್ರಶ್ನೆ ಉದ್ಬವಿಸಿದೆ.

Advertisement

ಸಾಮಾನ್ಯವಾಗಿ ಮುಖ್ಯಮಂತ್ರಿಯಾಗಿದ್ದವರ ನಾಯಕತ್ವದಲ್ಲೇ ಚುನಾವಣೆಗಳನ್ನು ಎದುರಿಸಲಾಗುತ್ತದೆ. ಆದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಹೊರತಾಗಿ ನಾಯಕತ್ವದ ಚಿಂತನೆ ಕಷ್ಟಸಾಧ್ಯ ಎನ್ನುವಂತಿದೆ. ಆದರೂ, ಹೊಸ ನಾಯಕತ್ವ ಬೆಳೆಸುವ, ವ್ಯಕ್ತಿಗಿಂತ ಪಕ್ಷಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಹಲವು ಪ್ರಯೋಗ, ಯತ್ನಗಳಿಗೆ ಅನೇಕ ರಾಜ್ಯಗಳಲ್ಲಿ ಮುಂದಾಗಿದೆ. ಕೆಲವೊಂದು ರಾಜ್ಯಗಳಲ್ಲಿ ಯಶಸ್ಸನ್ನು ಕಂಡಿದೆ. ಅದೇ ಮಾದರಿ ಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲು ಮುಂದಾಗಿದೆಯೇ? ಇದರ ಸಾಧಕ-ಬಾಧಕ ಸನ್ನಿವೇಶ ಏನೆಲ್ಲಾ ಸೃಷ್ಟಿಯಾಗಬಹುದು, ಯಾವ ತಿರುವುಗಳನ್ನು ಪಡೆದುಕೊಳ್ಳಬಹುದು ಎಂಬ ಪರೀಕ್ಷೆಗೆ ಈ ಪ್ರಾಯೋಗಿಕ ಅಸ್ತ್ರ ಬಳಿಸಿರಬಹುದು ಎಂಬ ಅನಿಸಿಕೆ ಬಿಜೆಪಿ ವಲಯದಲ್ಲಿ ಮೂಡಿವೆ.

ಇದನ್ನೂ ಓದಿ:ಸರ್ಕಾರ ರಚನೆಗೂ ಮುನ್ನಾ ವಿದೇಶಗಳೊಂದಿಗೆ ಬೆಂಬಲ ಯಾಚಿಸಿದ ತಾಲಿಬಾನ್!ಚೀನಾದೊಂದಿಗೂ ಒಪ್ಪಂದ.?

ಅಮಿತ್‌ ಶಾ ಅವರ ಮತ್ತೂಂದು ಅಚ್ಚರಿಯ ನಡೆ ಎಂದರೆ, ಯಡಿಯೂರಪ್ಪ ಅವರು ರಾಜ್ಯದಲ್ಲಿ ಹೊಸ ನಾಯಕತ್ವ ಬೆಳೆಸುವ ನಿಟ್ಟಿನಲ್ಲಿ  ಸ್ವಯಂ ಪ್ರೇರಣೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು ಎಂದು ಹೊಸದೊಂದು ಬಾಂಬ್‌ ಸಿಡಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಸಂದರ್ಭದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರು ಮಾಡಿದ ವಿದಾಯ ಭಾಷಣದಲ್ಲಿ ಪಕ್ಷ ಕಟ್ಟಲು ಪಟ್ಟ ಕಷ್ಟ, ಅನುಭವಿಸಿದ ನೋವು, ಅವಮಾನ, ಸಂಕಷ್ಟ, ಕೇಂದ್ರ ಸಂಪುಟಕ್ಕೆ ಆಹ್ವಾನ ನೀಡಿದರೂ ರಾಜ್ಯವೇ ಸಾಕು, ಇಲ್ಲಿ ಪಕ್ಷ ಅಧಿಕಾರಕ್ಕೆ ತಂದು ತೋರಿಸುವೆ ಎಂದು ಛಲ ತೊಟ್ಟಿದ್ದನ್ನು ಸ್ಮರಿಸಿಕೊಂಡಿದ್ದರು, ಭಾವುಕರಾಗಿ ಕಣ್ಣೀಟ್ಟಿದ್ದನ್ನು ಎಲ್ಲರೂ ನೋಡಿದ್ದಾರೆ. ಆದರೂ ಸ್ವಯಂ ಪ್ರೇರಣೆಯಿಂದ ರಾಜೀನಾಮೆ ಎಂಬ ಶಬ್ದ ಬಳಕೆಯ ಹಿಂದಿನ ಗೂಡಾರ್ಥವೇನೆಂಬ ಹುಡುಕಾಟ ಶುರುವಾಗಿದೆ.

ವಿಶೇಷವೆಂದರೆ ಪಕ್ಷ ಸಂಘಟನೆಗೆ ರಾಜ್ಯದ ಪ್ರವಾಸಕ್ಕೆ ಮುಂದಾಗುವೆ ಎಂದು ಯಡಿಯೂರಪ್ಪ ಅವರು ಸಜ್ಜಾದ ಸಂದರ್ಭದಲ್ಲೇ ಅಮಿತ್‌ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಾಯಕತ್ವದಲ್ಲಿ 2023ರ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿರುವುದು ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ ಎನ್ನಬಹುದು.

ಸಿಎಂಗೆ ಟಾಸ್ಕ್ ಕೊಟ್ಟರೆ ಶಾ?: ರಾಜ್ಯದಲ್ಲಿ ಹೊಸ ನಾಯಕತ್ವ ಬೆಳೆಸುವ ಚಿಂತನೆಯಲ್ಲಿರುವ ಬಿಜೆಪಿ ಹೈಕಮಾಂಡ್‌ ಚುನಾವಣೆ ಇನ್ನು ಸುಮಾರು 18 ತಿಂಗಳು ಇರುವಾಗಲೇ ಅಗತ್ಯ ಪೂರ್ವತಯಾರಿ, ಪಕ್ಷ ಸಂಘಟನೆ, ನಾಯಕತ್ವ ಬೆಳೆಸಿಕೊಳ್ಳುವ, ಪಕ್ಷದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್‌ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಟಾಸ್ಕ್ ನೀಡಿದೆಯೇ? ಅಮಿತ್‌ ಶಾ ಅವರ ಹೇಳಿಕೆ ಇಂತಹ ವ್ಯಾಖ್ಯಾನಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಯಾಗಿ ಕಳೆದೊಂದು ತಿಂಗಳಲ್ಲಿಯೇ ಬಸವರಾಜ ಬೊಮ್ಮಾಯಿ ಅವರ ಸರಳ ನಡೆ, ಆರ್ಥಿಕ ವೆಚ್ಚ ಕಡಿತ, ವಿಐಪಿ ಸಂಸ್ಕೃತಿಗೆ ವಿದಾಯ, ಹಂತ, ಹಂತವಾಗಿ ಆಡಳಿತದಲ್ಲಿ ಬಿಗಿ ಹಿಡಿತ, ಅಧಿಕಾರಿ ಶಾಹಿಗೆ ಮೂಗುದಾರ ಹಾಕುವ, ಆಡಳಿತ ಸುಧಾರಣೆಗೆ ಮಹತ್ವದ ಹೆಜ್ಜೆಗಳನ್ನಿರಿಸುವ, ಯಾವುದೇ ವಿವಾದಗಳಿಗೆ ಅವಕಾಶ ನೀಡದ ರೀತಿಯಲ್ಲಿ ಸಾಗಿರುವುದು, ಸಹಜವಾಗಿಯೇ ಬಿಜೆಪಿ ಹೈಕಮಾಂಡ್‌ ಗಮನ ಸೆಳೆದಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಕಾಶ್ಮೀರದಲ್ಲಿರುವ ಮುಸ್ಲಿಮರ ಪರ ಧ್ವನಿ ಎತ್ತುವ ಎಲ್ಲಾ ಹಕ್ಕು ನಮಗಿದೆ: ತಾಲಿಬಾನ್

ಸರಕಾರದ ಉತ್ತಮ ನಿರ್ವಹಣೆ ಜತೆಗೆ ಪಕ್ಷ ಮುನ್ನಡೆಸುವ ನಾಯಕತ್ವ ಗುಣ ಬೆಳೆಸಿಕೊಳ್ಳುವ, ಬಿಜೆಪಿಗೆ ಮಹತ್ವದ ಬಲವಾಗಿರುವ ಲಿಂಗಾಯತ ಸಮುದಾಯಕ್ಕೆ ಭವಿಷ್ಯದ ನಾಯಕರಿವರು ಎಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಸಾಗಬೇಕಾದ ಮಾರ್ಗ, ಮೂಡಿಸಬೇಕಾಗದ ವಿಶ್ವಾಸ, ರಾಜ್ಯದಲ್ಲಿ ಮತ್ತೆ ಪಕ್ಷ ಅಧಿಕಾರ ಹಿಡಿಯುವಂತಾಗಲು ಲಿಂಗಾಯತರು ಸೇರಿದಂತೆ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ಪಡೆದು ಮುನ್ನಡೆಯುವ, ನಾಯಕತ್ವ ಗುಣಗಳನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬಿಜೆಪಿ ಹೈಕಮಾಂಡ್‌ ಸೂಚ್ಯವಾಗಿ ಟಾಸ್ಕ್ ನೀಡಿದೆಯೇ? ಅಮಿತ್‌ ಶಾ ಅವರ ಘೋಷಣೆ ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗಿದೆ.

ಮುಂದಿನ ವಿಧಾನಸಭೆ ಚುನಾವಣೆ ನಾಯಕತ್ವ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ದಿಢೀರ್ ಹೇಳಿಕೆ ಕುರಿತಾಗಿ 2023 ವಿಧಾನಸಭೆ ಚುನಾವಣೆಗೆ ಇನ್ನು ಕಾಲವಕಾಶವಿದೆ ಅಲ್ಲಿವರೆಗೆ ಏನಾಗುತ್ತದೆಯೋ ನೋಡೋಣ. ಆದರೆ ನಾವೆಲ್ಲ ಪಕ್ಷದ ಶಿಸ್ತಿನ ಶಿಪಾಯಿಗಳು ಪಕ್ಷ ಹೇಳುವುದನ್ನು ಒಪ್ಪಿ ನಡೆಯುತ್ತೇವೆ ಎಂದು ಬಿಜೆಪಿ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಮಾರ್ಮಿಕವಾಗಿ ನುಡಿದಿರುವುದು, ಏನೇ ಆದರೂ ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ನಡೆಯುತ್ತದೆ ಎಂದು ಈಶ್ವರಪ್ಪ ಹೇಳಿರುವುದು ಬಿಜೆಪಿಯಲ್ಲಿನ ಸಂಚಲನ, ಜಿಜ್ಞಾಸೆಗೆ ನಾಂದಿ ಹಾಡಿದ್ದು, ಶಾ ಹೇಳಿಕೆ ಮುಂದಿನ ದಿನಗಳಲ್ಲಿ ಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next