ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕನಸಿನೊಂದಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯದಲ್ಲೇ ಮೊಕ್ಕಾ ಹೂಡಲು ನಿರ್ಧರಿಸಿದ್ದು, ಇದಕ್ಕಾಗಿ ಬೆಂಗಳೂರಿನಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಅಮಿತ್ ಶಾ ಅವರಿಗಾಗಿ ನಗರದ ಚಾಲುಕ್ಯ ವೃತ್ತದ ಸಮೀಪದ ಫೈರ್ ಫೀಲ್ಡ್ ಲೇಔಟ್‌ನಲ್ಲಿ ಆರು ಬೆಡ್‌ರೂಂನ ಬೃಹತ್ ಮನೆಯನ್ನು ಬಾಡಿಗೆಗೆ ಪಡೆಯಲಾಗಿದ್ದು, ಇದರಲ್ಲಿ ಮನೆ ಜತೆ ಕಚೇರಿಯ ರಚನೆಯೂ ಇದೆ. ಈಗಾಗಲೇ ಮನೆಯಲ್ಲಿ ಪೂಜೆ ಮಾಡಿ ಸ್ವಾಧೀನಕ್ಕೆ ಪಡೆಯಸಲಾಗಿದ್ದು, ಮಾರ್ಚ್ ಅಂತ್ಯದ ವೇಳೆ ಅಮಿತ್ ಶಾ ವಾಸ್ತವ್ಯವನ್ನು ಬೆಂಗಳೂರಿಗೆ ವರ್ಗಾಯಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಿನಿ ವಾರ್ ರೂಂ: ರಾಜ್ಯ ಬಿಜೆಪಿಯ ಎಲ್ಲಾ ಚಟುವಟಿಕೆಗಳನ್ನು ಈಗಾಗಲೇ ತಮ್ಮ ಕೈಗೆ ತೆಗೆದುಕೊಂಡಿರುವ ಅಮಿತ್ ಶಾ ಮುಂದಿನ ದಿನಗಳಲ್ಲಿ ಈ ಮನೆಯಲ್ಲೇ ಕುಳಿತು ಪ್ರಮುಖ ಸಭೆಗಳನ್ನು ನಡೆಸಿ ತಂತ್ರಗಾರಿಕೆಗಳನ್ನು ಸಿದ್ಧಪಡಿಸಲಿದ್ದು, ಬಿಜೆಪಿ ಪಾಲಿಗೆ ಇದು ಮಿನಿ ವಾರ್ ರೂಂ ಆಗಲಿದೆ.
ಮನೆ ವಿಶೇಷತೆಗಳು: ಸಕಲ ಸೌಲಭ್ಯವಿರುವ ಮೂರು ಅಂತಸ್ತಿನ ಮನೆ ಇದಾಗಿದ್ದು, ಆರು ಬೆಡ್‌ರೂಂಗಳಿವೆ. ಜತೆಗೆ 40-50 ಜನ ಕುಳಿತು ಸಭೆ ನಡೆಸಲು ಅನುಕೂಲವಾಗುವಂತಹ ಸ್ಥಳಾವಕಾಶವಿದೆ. ಮನೆ ಪಕ್ಕದಲ್ಲೇ ದೊಡ್ಡ ಲಾನ್ ಇದ್ದು, ವಾಯುವಿಹಾರಕ್ಕೆ ಅಗತ್ಯ ಸ್ಥಳಾವಕಾಶವೂ ಇದೆ. ಏಕಕಾಲದಲ್ಲಿ ನಾಲ್ಕೈದು ಕಾರ್ ಪಾರ್ಕಿಂಗ್‌ಗೂ ಜಾಗವಿದೆ.
ಅಮಿತ್ ಶಾ ಅವರೊಂದಿಗೆ ಅವರ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಕೂಡ ಇರಲು ಸ್ಥಳಾವಕಾಶವಿದ್ದು, 1.5 ಲಕ್ಷ ರೂ. ಬಾಡಿಗೆ ನಿಗದಿಪಡಿಸಲಾಗಿದೆ. ಪ್ರೀತಿ ನಲ್ಪಾಣಿ ಎಂಬುವರಿಗೆ ಸೇರಿದ ಮನೆ ಇದಾಗಿದ್ದು, ಏಳು ವರ್ಷಗಳ ಹಿಂದೆ ಮಾಜಿ ಸಚಿವ ಮುರುಗೇಶ್ ನಿರಾಣಿ ಇದೇ ಮನೆಯಲ್ಲಿದ್ದರು ಎನ್ನಲಾಗಿದೆ.