Advertisement

ರಾಜ್ಯ ಬಿಜೆಪಿಯಲ್ಲಿ ಅಮಿತ್‌ ಶಾ ಟೆನ್ಷನ್‌

10:45 AM Aug 09, 2017 | |

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಆ.12ರಿಂದ ಮೂರು ದಿನಗಳ ರಾಜ್ಯ ಪ್ರವಾಸ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಅವರ ಕಾರ್ಯಕ್ರಮಗಳಿಗೆ ಸಿದ್ಧತೆ ತೀವ್ರಗೊಳ್ಳುತ್ತಿದ್ದಂತೆ, ಪಕ್ಷದ ರಾಜ್ಯ ನಾಯಕರಲ್ಲಿ ಟೆನ್ಷನ್‌ ಕಾಣಿಸಿಕೊಂಡಿದೆ.

Advertisement

ಇದಕ್ಕೆ ಕಾರಣ ಅಮಿತ್‌ ಶಾ ಅವರು ತಾವು ಮಾತನಾಡುವುದಕ್ಕಿಂತ ಇತರರ ಮಾತುಗಳನ್ನು ಕೇಳಿಸಿಕೊಂಡು ಖಡಕ್‌ ನಿರ್ಧಾರ ಕೈಗೊಳ್ಳುತ್ತಿರುವುದು ಮತ್ತು ಆ ನಿರ್ಧಾರಗಳು ಕಡ್ಡಿ ಮುರಿದಂತೆ ಇರುವುದು. ಪಕ್ಷದಲ್ಲಿ ಶಾ ಅವರ ಈ ಕಠಿಣ ನಿಲುವುಗಳು ಪಕ್ಷದಲ್ಲಿರುವ ಅಸಮಾಧಾನದ ಬಗ್ಗೆ ದೂರಲು ಮುಂದಾಗಿರುವ ನಾಯಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಇನ್ನೊಂದೆಡೆ ಪಕ್ಷದ ಕಾರ್ಯತಂತ್ರಗಳನ್ನು ರೂಪಿಸುವಾಗ ಅವರು ನಾಯಕರ ಅಭಿಪ್ರಾಯಗಳನ್ನು ಆಲಿಸಿ  ಮನನ ಮಾಡಿಕೊಳ್ಳುತ್ತಾರಾದರೂ ಅದಕ್ಕಿಂತ ಸ್ಥಳೀಯವಾಗಿ ತಾವು ಸಂಗ್ರಹಿಸಿದ ಮಾಹಿತಿಗಳನ್ನೇ ಹೆಚ್ಚು ನೆಚ್ಚಿಕೊಳ್ಳುತ್ತಾರೆ. ಮತ್ತು ಅದನ್ನು ಆಧರಿಸಿ ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸುವ ಕೆಲಸವನ್ನೂ ಮಾಡುತ್ತಾರೆ. ಇದು ಕೂಡ ರಾಜ್ಯ ಬಿಜೆಪಿ ನಾಯಕರಲ್ಲಿ ಸ್ವಲ್ಪ ಮಟ್ಟಿನ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಶಾರವರ ಭೇಟಿಯ ಮೊದಲ ದಿನವೇ ರಾಜ್ಯ ಪದಾಧಿಕಾರಿಗಳು, ವಿಭಾಗ ಮಟ್ಟದ ಸಂಘಟನಾ ಕಾರ್ಯದರ್ಶಿಗಳು, ಎಲ್ಲಾ ಜಿಲ್ಲೆಗಳ ಪ್ರಭಾರಿಗಳು, ಜಿಲ್ಲಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಪ್ರಕೋಷ್ಠಗಳ ಸಂಚಾಲಕರ ಜತೆ ಸಭೆ ನಡೆಸಲಿದ್ದಾರೆ. ಇದಾದ ಬಳಿಕ ವಿಧಾನ ಪರಿಷತ್‌ ಸದಸ್ಯರೂ ಸೇರಿದಂತೆ ಶಾಸಕರು, ಸಂಸದರೊಂದಿಗೆ ಸಮಾಲೋಚನೆ ನಡೆಸಲಿದ್ದು, ಪಕ್ಷದ ಕೋರ್‌ ಕಮಿಟಿ ಸಭೆಯನ್ನೂ ಮುಗಿಸಲಿದ್ದಾರೆ. ಆ ಮೂಲಕ ಮೊದಲ ದಿನವೇ ರಾಜ್ಯ ಬಿಜೆಪಿ ಮತ್ತು ಪ್ರಸ್ತುತ ರಾಜಕೀಯ ಪರಿಸ್ಥಿತಿ ಬಗ್ಗೆ ಒಟ್ಟಾರೆ ಚಿತ್ರಣಗಳನ್ನು ಪಡೆದುಕೊಳ್ಳಲಿರುವ ಅಮಿತ್‌ ಶಾ ನಂತರವಷ್ಟೇ ಮುಂದಿನ ಹೆಜ್ಜೆ ಇಡುತ್ತಾರೆ. ಈ ಸಂದರ್ಭದಲ್ಲಿ ಅವರು ಬಯಸಿದರೆ ಭಿನ್ನಮತದ ವಿಚಾರದಲ್ಲಿ ತಟಸ್ಥರಾಗಿರುವ ಕೆಲವು ನಾಯಕರನ್ನು ಮುಖಾಮುಖೀ ಕೂರಿಸಿಕೊಂಡು ಅವರ ಅಭಿಪ್ರಾಯ ಆಲಿಸುತ್ತಾರೆ. ನಂತರವಷ್ಟೇ ಅವರು ತಮ್ಮ ನಿಜವಾದ ಕೆಲಸ ಆರಂಭಿಸುತ್ತಾರೆ.

ಈ ಸಂದರ್ಭದಲ್ಲಿ ಮುಕ್ತ ಚರ್ಚೆಗೆ ಅವಕಾಶವಿದ್ದರೂ ಅದರಲ್ಲಿ ಯಾರೊಬ್ಬರ ವಿರುದ್ಧವೂ ವೈಯಕ್ತಿಕ ಆರೋಪಗಳಿಗೆ ಅವಕಾಶವಿರುವುದಿಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಕೈಗೊಳ್ಳಬೇಕಾದ ಕ್ರಮಗಳು, ಅದಕ್ಕೆ ಏನೆಲ್ಲಾ ಬದಲಾವಣೆಗಳನ್ನು ಮಾಡಿಕೊಳ್ಳ ಬೇಕು ಎಂಬ ಅಭಿಪ್ರಾಯವನ್ನು ಸಂಗ್ರಹಿಸುವ ಅವರು, ಬಳಿಕ ಸಂಘಟನೆಗೆ ಸಂಬಂಧಿಸಿದಂತೆ ಎಲ್ಲಾ ವಿಭಾಗಗಳು, ಸಂಘ ಸಂಸ್ಥೆಗಳ ಮುಖಂಡರು, ಜಾತಿ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚಿಸಿ ನಂತರ ತಮ್ಮ ಕಾರ್ಯತಂತ್ರಗಳನ್ನು ರೂಪಿಸುತ್ತಾರೆ. ಬಳಿಕ ಅದನ್ನು ಯಾವ ರೀತಿ ಅನುಷ್ಠಾನಗೊಳಿಸಬೇಕು ಎಂಬ ಬಗ್ಗೆ ವಿವರಿಸುತ್ತಾರೆ. ಅದುವರೆಗೆ ಯಾವುದನ್ನೂ ಅವರು ಬಹಿರಂಗಪಡಿಸುವುದಿಲ್ಲ. ಹೀಗಾಗಿ ಅಮಿತ್‌ ಶಾ ಅವರ ಮುಂದೆ ಯಾವ ರೀತಿ ತಮ್ಮ ಅಭಿಪ್ರಾಯ ತಿಳಿ ಸಬೇಕು ಎಂಬುದನ್ನು ತಿಳಿಯದೆ ರಾಜ್ಯ ಮುಖಂಡರು ಆತಂಕಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ರಾಜ್ಯ ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ 
ಈ ಮಧ್ಯೆ ಪಕ್ಷದಲ್ಲಿನ ಭಿನ್ನಮತ ಮತ್ತು ಅದಕ್ಕೆ ಕಾರಣರಾದವರ ವಿರುದ್ಧ ಅಮಿತ್‌ ಶಾ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲೇ ಭಿನ್ನಮತ ಶಮನಕ್ಕೆ ಮಾಡಿದ ಪ್ರಯತ್ನ ಪೂರ್ಣಮಟ್ಟದಲ್ಲಿ ಫ‌ಲ ನೀಡದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.  ಎರಡನೇ ಬಾರಿ ತಾವು ನೀಡಿದ ಖಡಕ್‌ ಸೂಚನೆಯಿಂದ ಮೇಲ್ನೋಟಕ್ಕೆ ಪಕ್ಷದಲ್ಲಿ ಎಲ್ಲವೂ ಸರಿ ಇದ್ದಂತೆ ಕಾಣಿಸುತ್ತಿದ್ದರೂ ಮುಖಂಡರು ಆಂತರಿಕವಾಗಿ ಇನ್ನೂ ಒಂದಾಗಿಲ್ಲ ಎಂಬ ಕೋಪ ಅಮಿತ್‌ ಶಾ ಅವರಲ್ಲಿದೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲ್ಪಟ್ಟಿರುವ ಯಡಿಯೂರಪ್ಪ ಅವರಿಗೆ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ  ಜವಾಬ್ದಾರಿ ವಹಿಸಿದ್ದಾರೆ. ಜೊತೆಗೆ ಭಿನ್ನಮತ ಮುಂದುವರಿಸಿದರೆ ನಿಮಗೇ ತೊಂದರೆ ಎಂಬ ಸೂಚನೆಯನ್ನೂ ಅಸಮಾಧಾನಿತರಿಗೆ ರವಾನಿಸಿದ್ದಾರೆ. ತಮ್ಮ ಪ್ರವಾಸದ ವೇಳೆ ಅಸಮಾಧಾನದ ಹೊಗೆ ಗೋಚರಿಸಿದರೆ ಅದಕ್ಕೆ ತಕ್ಕ ಮದ್ದು ಅರೆಯಲು ಕೂಡ ಅವರು ಸಿದ್ಧರಾಗಿಯೇ ಬರುತ್ತಿದ್ದು, ಆಗ ಯಾರಿಗೆ ಯಾವ ತೊಂದರೆಯಾಗಲಿದೆ ಎಂಬ ಭೀತಿ ಪಕ್ಷದ ಎಲ್ಲಾ ನಾಯಕರಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next