Advertisement

Waqf Notice: ʼವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ತಕ್ಷಣ ಸ್ಥಗಿತಗೊಳಿಸಲು ಸಿಎಸ್‌ಗೆ ಸೂಚಿಸಿʼ

06:28 PM Nov 04, 2024 | Team Udayavani |

ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒಂದೆಡೆ ಉಪಚುನಾವಣೆ ಕಾವು ಏರುತ್ತಿದ್ದರೆ, ಮತ್ತೊಂದೆಡೆ ವಕ್ಫ್ ಬೋರ್ಡ್‌ ಆಸ್ತಿ ವಿವಾದ ತೀವ್ರ ಸ್ವರೂಪ ಪಡೆಯುವ ಜೊತೆಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಬೀದಿಗಿಳಿದು ಪ್ರತಿಭಟನೆ ನಡೆಸಿತು.

Advertisement

ಈ ಮಧ್ಯೆ, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್  ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಸಂಸತ್‌ ಜಂಟಿ ಸದನ ಸಮಿತಿ (ಜೆಪಿಸಿ) ಅಧ್ಯಕ್ಷ  ಜಗದಾಂಬಿಕಾ ಪಾಲ್ ಅವರಿಗೆ ಪತ್ರ ಬರೆದಿದ್ದು, ತಕ್ಷಣವೇ ವಕ್ಫ್ ಬೋರ್ಡ್‌ಗೆ ಆಸ್ತಿ ನೋಂದಣಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್‌)ಗೆ ಸೂಚಿಸುವಂತೆ ಮನವಿ ಮಾಡಿದ್ದಾರೆ.

ತರಾತುರಿಯಲ್ಲಿ ವಕ್ಫ್​​ ಮಂಡಳಿಗೆ ನೋಂದಣಿ: 
ಕರ್ನಾಟಕದಲ್ಲಿ ರಾಜ್ಯ ಸರ್ಕಾರ ಮತ್ತು ವಕ್ಫ್‌ ಮಂಡಳಿಯು ಕಂದಾಯ ದಾಖಲೆಗಳ ತಿದ್ದುವ ಹಾಗೂ ರೈತರ ಜಮೀನುಗಳ ಮಾಲೀಕತ್ವ ವರ್ಗಾಯಿಸಿಕೊಳ್ಳುವ ಪ್ರಯತ್ನ ಆರಂಭವಾಗಿದೆ. ಈ ರೀತಿ ತರಾತುರಿಯಲ್ಲಿ ಜಮೀನುಗಳ ವಕ್ಫ್​​ ಮಂಡಳಿ ನೋಂದಾಯಿಸಿಕೊಳ್ಳುತ್ತಿರುವ ಪರಿಣಾಮ ಸಾವಿರಾರು ಬಡವರು ಹಾಗೂ ರೈತರು ವಂಶಪಾರಂಪರ್ಯವಾಗಿ ಬಂದ ಭೂಮಿಯ ಕಳೆದುಕೊಳ್ಳುತ್ತಿದ್ದಾರೆ. ಜೆಪಿಸಿಯು ವಕ್ಫ್ ಕಾಯಿದೆಗೆ ತರಬಹುದಾದ ತಿದ್ದುಪಡಿಯ ನಿರೀಕ್ಷೆಯಲ್ಲಿ ವಕ್ಫ್ ಮಂಡಳಿಯು ರೈತರ ಜಮೀನುಗಳ ನೋಂದಾಯಿಸಲು “ತರಾತುರಿ ಪ್ರಯತ್ನಗಳು” ನಡೆಸುತ್ತಿದೆ ಎಂದು ವಿಪಕ್ಷ ನಾಯಕರು ಪತ್ರದಲ್ಲಿ ಆರೋಪಿಸಿದ್ದಾರೆ.

ನೂರಾರು ರೈತರಿಗೆ ನೋಟಿಸ್‌: 
ವಿಜಯಪುರ ಜಿಲ್ಲೆಯಲ್ಲಿ 15,000 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ ಎಂದು ನೂರಾರು ರೈತರು ಹೇಳಿದ ಬಳಿಕ ಈ ಸಂಗತಿ ಬೆಳಕಿಗೆ ಬಂದಿದೆ. ಎಲ್ಲಾ ಜಿಲ್ಲೆಗಳಲ್ಲಿ ತಲಾ 10,000 ಎಕರೆ ಜಮೀನನ್ನು ವಕ್ಫ್​ ನೋಂದಣಿ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ವಕ್ಫ್​ ಮಂಡಳಿಯು ದೇವಸ್ಥಾನ, ಮಠ ಹಾಗೂ ಇತರೆ ಹಿಂದೂ ಧಾರ್ಮಿಕ ಸಂಸ್ಥೆಗಳ ಜಮೀನುಗಳ ಕೂಡ ತನ್ನದು ಎಂದು ಹೇಳಿಕೊಂಡಿದೆ. ಹಿಂದೂ ಶ್ಮಶಾನ ಕೂಡ ತನ್ನದು ಎಂದು ವಕ್ಫ್​ ಉಲ್ಲೇಖಿಸಿರುವುದು ಇನ್ನಷ್ಟು ಆಘಾತದ ಸಂಗತಿ ಎಂದು ಆರ್. ಅಶೋಕ್ ಹೇಳಿದ್ದಾರೆ.

Advertisement

“ಇದಲ್ಲದೆ, ವಕ್ಫ್ ಮಂಡಳಿಯು ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯ ಮೇಲೂ ಹಕ್ಕು ಸಾಧಿಸುತ್ತಿದೆ. 13ನೇ ಶತಮಾನದಷ್ಟು ಇತಿಹಾಸ ಹೊಂದಿರುವ ವಿರಕ್ತ ಮಠಕ್ಕೆ ಸೇರಿದ ಸಿಂದಗಿಯ 1.28 ಎಕರೆ ಜಮೀನು, ವಿಜಯಪುರದ ಐತಿಹಾಸಿಕ ಸೋಮೇಶ್ವರ ದೇವಾಲಯ, ಕಲಬುರ್ಗಿಯ ಬೀರದೇವರ ಗುಡಿ ಸೇರಿದಂತೆ ಅನೇಕ ಜನಪ್ರಿಯ ಸ್ಥಳಗಳನ್ನು ಕೂಡ ವಕ್ಫ್​ ತನ್ನದೆಂದು ಘೋಷಿಸಿಕೊಂಡಿದೆ. ಇದು ಜನರಲ್ಲಿ ಆತಂಕ ಉಂಟುಮಾಡಿದ್ದು, ಹಾವೇರಿಯಲ್ಲಿ ಹಿಂಸಾಚಾರ, ಗಲಭೆ ಕೂಡ ನಡೆದಿದೆ. ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ, ಜಂಟಿ ಸಮಿತಿ ಕೂಡಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಜೊತೆ ಮಾತನಾಡಬೇಕು. ವಕ್ಫ್​ಗೆ ಸಂಬಂಧಿಸಿದ ಜಮೀನು ನೋಂದಣಿ ಸ್ಥಗಿತಗೊಳಿಸಲು ಸೂಚಿಸಬೇಕು ಎಂದು ಪತ್ರದ ಮೂಲಕ ಆರ್‌.ಅಶೋಕ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next