ನವದೆಹಲಿ: ನಾಗಾಲ್ಯಾಂಡ್ ನ ಮಾನ್ ಜಿಲ್ಲೆಯ ತಿರು ಗ್ರಾಮದಲ್ಲಿ ಶನಿವಾರ ಸೇನಾ ಕಾರ್ಯಾಚರಣೆ ವೇಳೆ ಬಂಡುಕೋರರು ಎಂದು ತಪ್ಪಾಗಿ ಭಾವಿಸಿ 14 ಮಂದಿ ನಾಗರಿಕರನ್ನು ಭದ್ರತಾ ಪಡೆಗಳು ಹತ್ಯೆಗೈದಿರುವ ಘಟನೆಗೆ ಕೇಂದ್ರ ಸರ್ಕಾರ ವಿಷಾದ ವ್ಯಕ್ತಪಡಿಸಿರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ(ಡಿಸೆಂಬರ್ 06) ಲೋಕಸಭೆಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಗರ್ಭಿಣಿ ಸಹೋದರಿಯ ಶಿರಚ್ಛೇದ ಮಾಡಿ ಸೆಲ್ಫಿ ತೆಗೆದ ಸಹೋದರ : ಕೃತ್ಯಕ್ಕೆ ಸಾಥ್ ನೀಡಿದ ತಾಯಿ
ಎಸ್ ಐಟಿಯನ್ನು ರಚಿಸಿ ಈ ಘಟನೆಗೆ ಸಂಬಂಧಿಸಿದಂತೆ ಪೂರ್ಣ ಪ್ರಮಾಣದಲ್ಲಿ ಒಂದು ತಿಂಗಳೊಳಗೆ ತನಿಖೆಯನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಲಾಗಿದೆ. ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು, ಇದೀಗ ನಿಯಂತ್ರಣಕ್ಕೆ ತರಲಾಗಿದೆ ಎಂದರು.
ಇನ್ನು ಮುಂದೆ ಯಾವತ್ತೂ ಇಂತಹ ಘಟನೆ ನಡೆಯುವುದಿಲ್ಲ ಎಂಬ ಭರವಸೆ ನೀಡಲಾಗಿದೆ ಎಂದು ಶಾ ಹೇಳಿದರು. ತಮ್ಮ ಹೇಳಿಕೆಯನ್ನು ನೀಡಿದ ನಂತರ ವಿರೋಧ ಪಕ್ಷಗಳು ಘೋಷಣೆ ಕೂಗಿ, ಆಕ್ಷೇಪ ವ್ಯಕ್ತಪಡಿಸಿದ್ದವು. ಈ ಘಟನೆ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಬೇಕೆಂದು ಆಗ್ರಹಿಸಿದ್ದವು.
14 ನಾಗರಿಕರ ಹತ್ಯೆ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಉಪಸ್ಥಿತರಿರಬೇಕು ಎಂದು ಕಾಂಗ್ರೆಸ್ ಪಕ್ಷ ಕೂಡಾ ಆಗ್ರಹಿಸಿದೆ. ಆದರೆ ಪ್ರಧಾನಿ ಮೋದಿ ಅವರು ಕಲಾಪದಿಂದ ದೂರ ಉಳಿದಿದ್ದಾರೆ ಎಂದು ಕಾಂಗ್ರೆಸ್ ದೂರಿದೆ.
ಘಟನೆ ಹಿನ್ನೆಲೆ: ಮ್ಯಾನ್ಮಾರ್ ಮೂಲದ ಉಗ್ರರ ಚಲನವಲನಗಳ ಕುರಿತು ಗುಪ್ತಚರ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಸ್ಸಾಂ ರೈಫಲ್ಸ್ ನ ವಿಶೇಷ ಪಡೆಯು ಈ ಪ್ರದೇಶದಲ್ಲಿ ಕಾರ್ಯಾಚರಣೆ ಕೈಗೊಂಡಿತ್ತು. ಆದರೆ, ಅದೇ ಸಮಯದಲ್ಲಿ ಕಲ್ಲಿದ್ದಲು ಗಣಿಯಲ್ಲಿ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಸಂಜೆ ಪಿಕಪ್ ವ್ಯಾನ್ ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಅವರನ್ನೇ ಉಗ್ರರು ಎಂದು ಭಾವಿಸಿದ ಯೋಧರು ಏಕಾಏಕಿ ಗುಂದಿನ ದಾಳಿ ನಡೆಸಿದ್ದು, ವ್ಯಾನ್ ನಲ್ಲಿದ್ದ ಎಲ್ಲಾ 14 ಕಾರ್ಮಿಕರು ಸಾವನ್ನಪ್ಪಿದ್ದರು.