ಗಾಂಧಿನಗರ: ಮುಂದುವರಿದ ರಾಷ್ಟ್ರಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಭಾರತದಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ನೀತಿ ರೂಪಿಸುತ್ತಿದೆ. ಅದಕ್ಕಾಗಿ ವಿಧಿವಿಜ್ಞಾನ ಪರೀಕ್ಷೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
6 ವರ್ಷಕ್ಕಿಂತ ಜಾಸ್ತಿ ಶಿಕ್ಷೆಯಾಗುವ ಪ್ರಕರಣಗಳಿದ್ದರೆ, ವಿಧಿವಿಜ್ಞಾನ ಪರೀಕ್ಷೆ ಕಡ್ಡಾಯ ಮಾಡುವ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ ಪ್ರತಿ ಜಿಲ್ಲೆಗೂ ಸಂಚಾರಿ ವಿಧಿವಿಜ್ಞಾನ ಪ್ರಯೋಗಾಲಯ ನೀಡಲಾಗುತ್ತದೆ. ಇದಕ್ಕೆ ಪೂರಕವಾಗಿ ನೀತಿಗಳನ್ನು ಸಿದ್ಧಪಡಿಸಲಾಗುತ್ತದೆ ಎಂದು ಅಮಿತ್ ಹೇಳಿದ್ದಾರೆ.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಕೇಂದ್ರ ಸರ್ಕಾರ, ಭಾರತೀಯ ದಂಡಸಂಹಿತೆ(ಐಪಿಸಿ), ಅಪರಾಧ ಪ್ರಕ್ರಿಯೆ ಸಂಹಿತೆ (ಸಿಆರ್‌ಪಿಸಿ), ಸಾಕ್ಷ್ಯ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ನಿರ್ಧರಿಸಿದೆ.
ಇವುಗಳನ್ನೆಲ್ಲ ಯಾರೂ ಭಾರತೀಯ ಪರಿಸ್ಥಿತಿಯ ದೃಷ್ಟಿಯಿಂದ ನೋಡದಿರುವುದರಿಂದ ಈ ಬದಲಾವಣೆಗೆ ನಿರ್ಧರಿಸಲಾಗಿದೆ ಎಂದು ಶಾ ಹೇಳಿದ್ದಾರೆ.
ಅವರು ಗುಜರಾತ್‌ನ ಗಾಂಧಿನಗರದಲ್ಲಿರುವ ಎನ್‌ಎಫ್ಎಸ್‌ಯುನ (ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ) ಮೊದಲನೇ ಘಟಿಕೋತ್ಸವದಲ್ಲಿ ಮಾತನಾಡಿದರು.