Advertisement

ದೇವರನಾಡಿಗೆ ಕೇಸರಿ ಲಗ್ಗೆ

10:06 AM Oct 04, 2017 | Team Udayavani |

ಪಯ್ಯನೂರ್‌: ಕೇರಳದಲ್ಲಿ ಬಿಜೆಪಿಯನ್ನು ಬಲಿಷ್ಠಗೊಳಿ ಸುವ ಪಣ ತೊಟ್ಟಿರುವ ಬಿಜೆಪಿ ಮಂಗಳವಾರದಿಂದ 15 ದಿನಗಳ ಪಾದಯಾತ್ರೆ ಕೈಗೊಂಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರೇ “ಜನ ರಕ್ಷಾ ಯಾತ್ರೆ’ ಎಂಬ ಹೆಸರಲ್ಲಿ ಪಾದಯಾತ್ರೆ ಆರಂಭಿಸಿದ್ದು, ಸಿಪಿಎಂ ಭದ್ರಕೋಟೆಯಲ್ಲಿ ಕಮಲವನ್ನು ಅರಳಿಸುವ ಯತ್ನಕ್ಕೆ ಕೈಹಾಕಿದ್ದಾರೆ.

Advertisement

ಪಯ್ಯನೂರಿನ ಗಾಂಧಿ ಪ್ರತಿಮೆ ಮುಂದೆ “ಎಲ್ಲರೂ ಬದುಕಬೇಕು: ಜಿಹಾದಿ-ಕೆಂಪು ಉಗ್ರರ ಹಾವಳಿಯನ್ನು ಮೆಟ್ಟಿನಿಂತು’ ಎಂಬ ಘೋಷಣೆಯೊಂದಿಗೆ ಯಾತ್ರೆಗೆ ಚಾಲನೆ ನೀಡಲಾಯಿತು. ಈ ವೇಳೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ವಿರುದ್ಧ ವಾಗ್ಧಾಳಿ ನಡೆಸಿದ ಶಾ, “ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ಹತ್ಯೆಗಳಿಗೆ ಸಿಎಂ ವಿಜಯನ್‌ ಅವರೇ ಕಾರಣ’ ಎಂದು ಆರೋಪಿಸಿದರು. ಜತೆಗೆ, ಎಲ್ಲ ರಾಜ್ಯಗಳ ರಾಜಧಾನಿಗಳಲ್ಲೂ ರಾಜಕೀಯ ಹತ್ಯೆ ಖಂಡಿಸಿ 15 ದಿನಗಳ ಪಾದಯಾತ್ರೆ ನಡೆಯಲಿದೆ ಎಂದು ಘೋಷಿಸಿದರು.  ಪಾದಯಾತ್ರೆಯಲ್ಲಿ ಕೇಂದ್ರ ಸಚಿವ ಆಲೊನ್ಸ್‌ ಕಣ್ಣಂಥಾನಮ್‌, ಸಂಸದರಾದ ಸುರೇಶ್‌ ಗೋಪಿ, ರಿಚರ್ಡ್‌ ಹೇ, ಕರ್ನಾಟಕದ ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಪಾಲ್ಗೊಂಡಿದ್ದರು. ಪಯ್ಯನೂರಿನಲ್ಲಿ ಆರಂಭವಾಗಿರುವ ಯಾತ್ರೆಯು ಕೇರಳದ ಹಲವು ಭಾಗಗಳನ್ನು ದಾಟಿ 17ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ.

ಇಂದು ಯೋಗಿ ಆಗಮನ: ಬುಧವಾರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರೂ ಕೇರಳಕ್ಕೆ ಆಗಮಿಸಲಿದ್ದು, ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿಎಂ ವಿಜಯನ್‌ರ ಹುಟ್ಟೂರು ಹಾಗೂ ಹಿಂಸಾಚಾರದ ಕೇಂದ್ರ ತಾಣವಾದ ಕೀಚೇರಿಯಿಂದ ಕಣ್ಣೂರಿನವರೆಗೆ ನಡೆಯಲಿರುವ ಯಾತ್ರೆಯಲ್ಲಿ ಅವರು ಭಾಗಿಯಾಗಲಿದ್ದಾರೆ. 

ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಶಾ ಪ್ರವಾಸಕ್ಕೆ ಮುನ್ನ ಅಂದರೆ ಸೋಮವಾರ ರಾತ್ರಿ ಬಿಜೆಪಿಯ ಮೂವರು ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಇಲ್ಲಿನ ನೀಲೇಶ್ವರಂನಲ್ಲಿ ಯಾತ್ರೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಪರಾರಿಯಾಗಿದ್ದಾರೆ. ಇದು ಸಿಪಿಎಂ ಕಾರ್ಯಕರ್ತರದ್ದೇ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.

ಸಿಪಿಎಂ ನಾಶವಾದರೆ ಹಿಂಸೆಯೂ ನಾಶ
ಕೇರಳ, ಪಶ್ಚಿಮ ಬಂಗಾಲ ಅಥವಾ ತ್ರಿಪುರಾ ಹೀಗೆ ಸಿಪಿಎಂ ಎಲ್ಲೆಲ್ಲಿ ಅಧಿಕಾರದಲ್ಲಿದೆಯೋ ಅಲ್ಲೆಲ್ಲ ರಾಜಕೀಯ ಹತ್ಯೆಗಳು, ಹಿಂಸಾಚಾರಗಳು ನಡೆಯುತ್ತಿವೆ. ಸಿಪಿಎಂ ಅನ್ನು ಸಂಪೂರ್ಣವಾಗಿ ನಾಶ ಮಾಡಿದರಷ್ಟೇ ಹಿಂಸೆಯನ್ನು ನಾಶಮಾಡಿದಂತೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೇಳಿದ್ದಾರೆ. ಜತೆಗೆ, ಬಿಜೆಪಿ ಕಾರ್ಯಕರ್ತರೆಲ್ಲರೂ ಒಂದಾಗಿ ಹಿಂಸೆಯನ್ನು ಕೊನೆಗಾಣಿಸಬೇಕು ಎಂದು ಕರೆ ನೀಡಿದ್ದಾರೆ. ಸಿಪಿಎಂ ಜಗತ್ತಿನ ನಕ್ಷೆಯಿಂದ ಕಾಣೆಯಾಗುತ್ತಿರುವುದಕ್ಕೆ ಕಾರಣವೇನು ಎಂಬುದನ್ನು ಆ ಪಕ್ಷವೇ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಅದೀಗ ಭಾರತದಿಂದಲೂ ಕಣ್ಮರೆ ಯಾಗಲಿದೆ. ಹಿಂಸಾಚಾರದ ಕೆಸರು ಹೆಚ್ಚಿದಷ್ಟು, ಕಮಲ ಅರಳುತ್ತದೆ ಎನ್ನುವುದು ನೆನಪಿರಲಿ ಎಂದಿದ್ದಾರೆ ಶಾ.

Advertisement

ಸಿಎಂ ಯೋಗಿ ಆದಿತ್ಯನಾಥ್‌ ಅವರೇ, ನಿಮಗಿದೋ ಕೇರಳಕ್ಕೆ ಸ್ವಾಗತ. ಆಸ್ಪತ್ರೆಗಳನ್ನು ಹೇಗೆ ಸಮರ್ಪಕವಾಗಿ ನಿರ್ವಹಿಸಬೇಕು ಎಂಬುದನ್ನು ಕೇರಳಕ್ಕೆ ಬಂದು ನೋಡಿ, ಕಲಿಯಿರಿ.
ಸಿಪಿಎಂ ಕೇರಳ

Advertisement

Udayavani is now on Telegram. Click here to join our channel and stay updated with the latest news.

Next