Advertisement

ಅಮೃತ ಭಾರತಿಗೆ ಕನ್ನಡದ ಆರತಿ ಸಮಾರೋಪಕ್ಕೆ ಅಮಿತ್ ಶಾಗೆ ಆಹ್ವಾನ

05:53 PM May 14, 2022 | Team Udayavani |

ಬೆಂಗಳೂರು : ಸ್ವಾತಂತ್ರ್ಯ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿರುವ ” ಅಮೃತ ಭಾರತಿಗೆ ಕನ್ನಡದ ಆರತಿ” ಕಾರ್ಯಕ್ರಮದ ಸಮಾರೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲು ನಿರ್ಧರಿಸಲಾಗಿದ್ದು, ಬೆಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮಕ್ಕೆ ವೇದಿಕೆ ಸಿದ್ದವಾಗಿದೆ.

Advertisement

ದಾವಣಗೆರೆಯಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದ ಆರತಿ ಚಿಂತನಾ ಸಭೆ ಉದ್ಘಾಟಿಸಿ ಮಾತನಾಡಿದ ಕನ್ನಡ, ಸಂಸ್ಕೃತಿ ಮತ್ತು ಇಂಧನ ಸಚಿವ ವಿ.ಸುನೀಲ್ ಕುಮಾರ್ ಈ ವಿಷಯ ತಿಳಿಸಿದ್ದಾರೆ.

ಮೇ 28 ಸಾವರ್ಕರ್ ಜನ್ಮ ದಿನಾಚರಣೆ ದಿನದಂದೇ ಅಭಿಯಾನಕ್ಕೆ ಚಾಲನೆ ಸಿಗಲಿದೆ. ಆದರೆ ಎಲ್ಲಿ ವಿಧಾನ ಪರಿಷತ್ ಚುನಾವಣೆ ನೀತಿ ಸಂಹಿತೆ ಇರುತ್ತದೆಯೋ, ಅಂಥ ಜಿಲ್ಲೆಗಳಲ್ಲಿ ಜೂನ್ 24  ರಿಂದ ಕಾರ್ಯಕ್ರಮ ಆಯೋಜಿಸಬೇಕು. ಮೇ 28 ರಂದು 45 ಕಾರ್ಯಕ್ರಮ ಹಾಗೂ ಜೂನ್ 24 ರಂದು30 ಕಾರ್ಯಕ್ರಮ ಸೇರಿ 75  ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಸಬೇಕು. ನಮಗೆ ಇದೊಂದು ಭಾವನಾತ್ಮಕ ವಿಚಾರ. ದೇಶಕ್ಕೆ ಸ್ವಾತಂತ್ರ್ಯ ಕೇವಲ ಶಾಂತಿಯಿಂದ ಮಾತ್ರ ಸಿಕ್ಕಿದ್ದಲ್ಲ ಎಂದು ಹೇಳಿದರು.

ಜುಲೈ 1 ರಿಂದ 15 ರ ವರೆಗೆ ರಾಜ್ಯದ ಪ್ರಮುಖ ಸ್ವಾತಂತ್ರ್ಯ ಹೋರಾಟದ ತಾಣಗಳಲ್ಲಿ ” ಸ್ವಾತಂತ್ರ್ಯದ ನೆಲದಲ್ಲಿ ಒಂದು ದಿನ” ಎಂಬ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಸಂಘಟನೆಗಳು, ಸ್ವಸಹಾಯ ಸಂಘ, ವಿದ್ಯಾರ್ಥಿ ಸಮುದಾಯದ ಜತೆಗೆ ಈ ತಾಣಗಳಿಗೆ ತೆರಳಿ, ಒಂದೆರಡು ಗಂಟೆಗಳ ಕಾಲ ಕಳೆದು ಈ ಸ್ಥಳಗಳನ್ನು ಪ್ರಸಿದ್ಧಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.

ರಥಯಾತ್ರೆ 

Advertisement

ಆಗಷ್ಟ್ 1 ರಿಂದ ಆಗಷ್ಟ್ 8  ರ ವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ರಥಯಾತ್ರೆ ನಡೆಸಲಾಗುವುದು. ಇದಕ್ಕೆ ಸಂಬಂಧಪಟ್ಟ ರೂಟ್ ಮ್ಯಾಪ್ ಅನ್ನು ಸದ್ಯದಲ್ಲೇ ನೀಡಲಾಗುವುದು. ಆಡಳಿತ ಯಂತ್ರದ ಜತೆಗೆ ಸಂಘಟನಾ ಬಲವನ್ನೂ ಈ ಕಾರ್ಯಕ್ರಮಕ್ಕೆ ಬಳಸಿಕೊಳ್ಳೋಣ ಎಂದರು.

ಆಗಷ್ಟ್ 9 ರಿಂದ 11 ರವರೆಗೆ ಬೆಂಗಳೂರಿನಲ್ಲಿ ಸಮಾರೋಪ ಸಭೆ ನಡೆಯಲಿದೆ. ಆಗಷ್ಟ್ 11 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗುವುದು ಎಂದು ವಿವರಿಸಿದರು.

ಘರ್ ಘರ್ ಝಂಡಾ

ಕಾರ್ಯಕ್ರಮದ ಭಾಗವಾಗಿ ಆಗಷ್ಟ್ 9 ರಿಂದ ಘರ್ ಘರ್ ಝಂಡಾ ಅಭಿಯಾನ ನಡೆಸಲಾಗುವುದು. ಅಂದು ರಾಜ್ಯದ ಎಲ್ಲ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವಂತೆ ಕರೆ ನೀಡಲಾಗುವುದು. ರಾಷ್ಟ್ರ ಧ್ವಜ ಹಾರಿಸುವುದಕ್ಕೆ ಮೀನಾ ಮೇಷ ಎಣಿಸಿದರೆ ಅದನ್ನು ಆಮೇಲೆ ನೋಡಿಕೊಳ್ಳೋಣ ಎಂದು ಅಭಿಪ್ರಾಯಪಟ್ಟರು.

ಸಾವರ್ಕರ್ ಜಯಂತಿಯ ದಿನ ಕಾರ್ಯಕ್ರಮದ ಉದ್ಘಾಟನೆ, ಧ್ವಜ ಹಾರಿಸಬೇಕು ಎಂದ ಕೂಡಲೇ ಕೆಲವರಿಗೆ ಕಳವಳ ಆರಂಭವಾಗುತ್ತದೆ. ಎಲ್ಲವೂ ಒಂದೇ ಸಲ ಹೊರಬರಲಿ, ನೋಡೋಣ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next