Advertisement

ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಅಮಿತ್‌ ಶಾ

09:00 AM Nov 15, 2018 | Team Udayavani |

ಮಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದು ಮಣ್ಣಗುಡ್ಡದ ಸಂಘನಿಕೇತನದಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್‌ನ ದಕ್ಷಿಣ ಭಾರತದ ಬೈಠಕ್‌ನಲ್ಲಿ ಭಾಗವಹಿಸಿದರು. ಸಂಜೆ 5.45ಕ್ಕೆ ಆಗಮಿಸಬೇಕಿದ್ದ ವಿಶೇಷ ವಿಮಾನ 8.30ಕ್ಕೆ ಮಂಗಳೂರು ತಲುಪಿದ್ದು, ಸಂಸದ ನಳಿನ್‌ ಕುಮಾರ್‌ ಕಟೀಲು, ಬಿಜೆಪಿ ಶಾಸಕರು ಹಾಗೂ ಪ್ರಮುಖರು ಸ್ವಾಗತಿಸಿದರು. ಅಲ್ಲಿಂದ ನೇರವಾಗಿ ಸಂಘನಿಕೇತನಕ್ಕೆ ಆಗಮಿಸಿದ ಶಾ ಅವರು ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಪಾಲ್ಗೊಂಡರು. ಬಿಜೆಪಿಯ ರಾಷ್ಟ್ರೀಯ ನಾಯಕರು ಜತೆಗಿದ್ದರು.

Advertisement

ಪೊಲಿಟಿಕಲ್‌ ಪ್ಲ್ಯಾನಿಂಗ್‌
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ರಾಜಕೀಯ ಲೆಕ್ಕಾಚಾರ ಆರಂಭವಾಗಿರುವಾಗಲೇ, ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಬಿಜೆಪಿ ರಾಷ್ಟ್ರೀಯಾಧ್ಯಕ್ಷರು ಪಾಲ್ಗೊಂಡು ರಾಜಕೀಯ ಮಾರ್ಗದರ್ಶನ ಪಡೆದುಕೊಂಡರು. ಯಾವ ವಿಚಾರ ಧಾರೆಯ ಮೂಲಕ ಮುಂದಿನ ಚುನಾ ವಣೆ ಎದುರಿಸಬೇಕು ಎಂಬ ಬಗ್ಗೆ ಹಾಗೂ ಬಿಜೆಪಿಯ ರಾಜಕೀಯದ ಮುಂದಿನ ಕಾರ್ಯತಂತ್ರಗಳು ಹೇಗಿರಬೇಕು ಎಂಬ ಕುರಿತು ಬೈಠಕ್‌ನಲ್ಲಿ ಅಮಿತ್‌ ಶಾಗೆ ಆರ್‌ಎಸ್‌ಎಸ್‌ ಪ್ರಮುಖರು ಮಾರ್ಗದರ್ಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಂದು ಸಮಾರೋಪ
ಆರ್‌ಎಸ್‌ಎಸ್‌ ಸಂಘಟನೆ ಕಾರ್ಯಯೋಜನೆಗಳ ಬಗ್ಗೆ ಚರ್ಚೆಗೆ ಪ್ರಮುಖವಾಗಿರುವ ದಕ್ಷಿಣ ಭಾರತದ ಬೈಠಕ್‌ ನ. 10ರಿಂದ ಆರಂಭಗೊಂಡಿದ್ದು, ಗುರುವಾರ ಸಮಾರೋಪಗೊಳ್ಳಲಿದೆ. ಆರ್‌ಎಸ್‌ಎಸ್‌ ಕಾರ್ಯವಾಹ ಭಯ್ನಾಜಿ (ಸುರೇಶ್‌ ಜೋಶಿ) ಮುಂತಾದ ಪ್ರಮುಖ ನಾಯಕರು ಇಲ್ಲಿ ಪಾಲ್ಗೊಂಡಿದ್ದಾರೆ. ಉತ್ತರ ಭಾರತದ ಬೈಠಕ್‌ ವಾರಾಣಸಿಯಲ್ಲಿ ಆಯೋಜನೆಗೊಂಡಿದೆ.

ಶಬರಿಮಲೆ ವಿಚಾರ ಚರ್ಚೆ
ಬುಧವಾರ ಬೆಳಗ್ಗೆ 6ರಿಂದ ಬೈಠಕ್‌ ಆರಂಭಗೊಂಡಿದ್ದು, ರಾತ್ರಿಯವರೆಗೂ ಮುಂದುವರಿದಿತ್ತು. ಶಬರಿಮಲೆ ಅಯ್ಯಪ್ಪ ಕ್ಷೇತ್ರಕ್ಕೆ ಎಲ್ಲ ವಯೋಮಾನದ ಮಹಿಳೆಯರ ಪ್ರವೇಶ ಕುರಿತಂತೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಬಗ್ಗೆ ಬೈಠಕ್‌ನಲ್ಲಿ ವಿಶೇಷ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು ನಡೆದ ಬೈಠಕ್‌ನಲ್ಲಿ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ನಳಿನ್‌ ಕುಮಾರ್‌ ಕಟೀಲು, ಶಾಸಕ ಸಿ.ಟಿ. ರವಿ, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಬಿಜೆಪಿ ಪ್ರಮುಖರಾದ ಅರುಣ್‌ ಕುಮಾರ್‌ ಮೊದಲಾದವರು ಭಾಗವಹಿಸಿದ್ದರು.

19 ಪ್ರಾಂತದ 300 ಸಂಘ ಪ್ರಮುಖರು
ನ. 10ರಿಂದ ಮಂಗಳೂರಿನ ಸಂಘನಿಕೇತನದಲ್ಲಿ ಆಯೋಜನೆಗೊಂಡಿರುವ ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ದಕ್ಷಿಣ ಭಾರತದ 19 ಪ್ರಾಂತದ ಸುಮಾರು 300 ಸಂಘ ಪ್ರಮುಖರು ಪಾಲ್ಗೊಂಡಿದ್ದರು. ವಿವಿಧ ವಿಷಯಾಧಾರಿತ ವಾಗಿ ಇಲ್ಲಿ ಸಭೆ ನಡೆಯುತ್ತಿದ್ದು, ಸಂಘದ ಪ್ರಮುಖರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶವಿಲ್ಲ. ಬೆಳಗ್ಗೆ 6 ಗಂಟೆಗೆ ಆರಂಭವಾಗುವ ಬೈಠಕ್‌ ರಾತ್ರಿ 10ರ ವರೆಗೆ ನಡೆಯಿತು. ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್‌, ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಮಧ್ಯಪ್ರದೇಶ ಸೇರಿದಂತೆ ದಕ್ಷಿಣ ಭಾರತದ ಆರ್‌ಎಸ್‌ಎಸ್‌ ಪ್ರಮುಖ ನೇತಾರರು ಬೈಠಕ್‌ನಲ್ಲಿ ಪಾಲ್ಗೊಂಡಿದ್ದಾರೆ.

Advertisement

ಮಂಗಳೂರಿನಲ್ಲಿ ವಾಸ್ತವ್ಯ
ಸಂಘನಿಕೇತನದಲ್ಲಿ ನಡೆದ ಆರ್‌ಎಸ್‌ಎಸ್‌ ಬೈಠಕ್‌ನಲ್ಲಿ ಬುಧವಾರ ರಾತ್ರಿ ಭಾಗವಹಿಸಿದ ಅಮಿತ್‌ ಶಾ ಖಾಸಗಿ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿದರು. ಬಿಜೆಪಿ ಪ್ರಮುಖರು ಈ ವೇಳೆ ಉಪಸ್ಥಿತರಿದ್ದು, ಕರಾವಳಿ ಭಾಗದಲ್ಲಿ ಪಕ್ಷ ಬಲವರ್ಧನೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಗುರುವಾರ ಬೆಳಗ್ಗೆ 10ಕ್ಕೆ ಅವರು ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ. ಈ ಹಿಂದೆ ಫೆ. 19ರಂದು ದ.ಕ. ಜಿಲ್ಲೆಗೆ ಆಗಮಿಸಿದ ಅಮಿತ್‌ ಶಾ ಅವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next