Advertisement
ಬೊಮ್ಮಾಯಿ ಅವರು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಒಂದೆಡೆ ಮುಖ್ಯಮಂತ್ರಿಗೆ ಆತ್ಮಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದರೆ, ಇನ್ನೊಂದೆಡೆ ಪಕ್ಷಕ್ಕೆ ಮತ್ತು ರಾಜ್ಯಕ್ಕೆ ಸಂದೇಶವನ್ನೂ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
Related Articles
Advertisement
ಕಾರ್ಯಕ್ರಮದಲ್ಲಿ ಅಮಿತ್ ಶಾ ಅವರ ಮಾತುಗಳು ಒಂದು ರೀತಿಯಲ್ಲಿ ಜಾಣ್ಮೆಯ ನಡೆ ಎಂದೇ ವ್ಯಾಖ್ಯಾನಿಸಲಾಗುತ್ತಿದ್ದು, “ರಾಜಕೀಯ ಚಾಣಕ್ಯ’ ಖ್ಯಾತಿಯ ಅಮಿತ್ ಶಾ ಅವರು ಪ್ರತಿಯೊಂದು ಮಾತನ್ನೂ ಸಾಕಷ್ಟು ಅಳೆದು ತೂಗಿ ಮಾತನಾಡುವುದರಿಂದ ಅವರ ಈ ಹೇಳಿಕೆ ಹೆಚ್ಚು ಪ್ರಾಮುಖ್ಯತೆ ಪಡೆದುಕೊಂಡಿದೆ. ಅಮಿತ್ ಶಾ ಅವರಈ ಹೇಳಿಕೆ ರಾಜ್ಯದ ಪ್ರತಿಪಕ್ಷಗಳ ನಾಯಕರ ಬಾಯಿ ಮುಚ್ಚಿಸುವ ಜತೆಗೆ ರಾಜಕೀಯ ವಲಯದ ಹಲವು ಊಹಾಪೋಹಗಳಿಗೆ ತೆರೆ ಎಳೆದಂತಾಗಿದೆ.
ಬಸವರಾಜ ಬೊಮ್ಮಾಯಿ ಅವರು ಬಿ.ಎಸ್. ಯಡಿಯೂರಪ್ಪ ಅವರ ನೆರಳಾಗಿ (ಶ್ಯಾಡೋ ಸಿಎಂ) ಅಧಿಕಾರ ನಡೆಸುತ್ತಿದ್ದು ಬಹಳ ದಿನ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂದು ಪ್ರತಿಪಕ್ಷಗಳ ನಾಯಕರ ಹೇಳಿಕೆಗೂ ಇದು ಒಂದು ರೀತಿಯ ತಿರುಗೇಟು. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಹೇಳುವ ಮೂಲಕ ಅವರಿಗೂ ಸಂದೇಶ ತಲುಪಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಸವರಾಜ ಬೊಮ್ಮಾಯಿ ಅವರಿಗೂ ನಿಮ್ಮದೇ ನಾಯಕತ್ವ, ನಿಮ್ಮದೇ ನೇತೃತ್ವ. ಸರ್ಕಾರಕ್ಕೆ ಒಳ್ಳೆಯ ಹೆಸರು ಬರುವಂತೆ ನೋಡಿಕೊಂಡು ಪಕ್ಷ ಹಾಗೂ ಸರ್ಕಾರದ ನಡುವೆ ಸಮನ್ವಯತೆ ಸಾಧಿಸಿ ಮುನ್ನಡೆಯಬೇಕು ಎಂಬ ಸೂಚನೆಯನ್ನೂ ಪರೋಕ್ಷವಾಗಿ ಕೊಟ್ಟಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಬಸವರಾಜ ಬೊಮ್ಮಾಯಿ ಅವರ ನಂತರ ಬೇರೊಬ್ಬರಿಗೆ ನಾಯಕತ್ವ ವಹಿಸಲಾಗುವುದು ಎಂಬ ಊಹಾಪೋಹಗಳಿಗೂ ತೆರೆ ಎಳೆಯುವಂತೆ ಅಮಿತ್ ಶಾ ಪಕ್ಷದ ಮನದಾಳ ಬಿಚ್ಚಿಟ್ಟಿದ್ದಾರೆ. ಇದರಿಂದ ಬಸವರಾಜ ಬೊಮ್ಮಾಯಿ ಅವರ ಮುಂದಿನ ಹಾದಿಯೂ ಸ್ಪಷ್ಟವಾಗಿರಲಿದೆ ಎಂದು ಹೇಳಲಾಗಿದೆ.
ಎಚ್.ಕೆ. ನಟರಾಜ