ಹೊಸದಿಲ್ಲಿ : ಲೋಕಸಭೆಯಲ್ಲಿ ಇದೇ ಶುಕ್ರವಾರ ನಡೆಯಲಿರುವ ವಿಶ್ವಾಸ ಮತಕ್ಕೆ ಮುನ್ನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಇಂದು ಗುರುವಾರ ಶಿವಸೇನೆಯ ಮುಖ್ಯಸ್ಥ ಉದ್ಧವ ಠಾಕರೆ ಜತೆಗೆ ಮಾತನಾಡಿ ಶಿವಸೇನೆಯ ಬೆಂಬಲವನ್ನು ಖಾತರಿಪಡಿಸಿಕೊಂಡರು.
ಉದ್ಧವ್ ಠಾಕರೆ ಅವರು ಲೋಕಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ ಎಂದು ಅಮಿತ್ ಶಾ ಸುದ್ದಿಗಾರರಿಗೆ ತಿಳಿಸಿದರು.
ಆದರೆ ಶಿವಸೇನೆಯ ಸಂಸದ ಸಂಜಯ್ ರಾವತ್ ಅವರು ವಿಶ್ವಾಸ ಮತ ಚರ್ಚೆಯ ವೇಳೆ ಶಿವಸೇನೆಗೆ ಬಹಳಷ್ಟು ವಿಷಯಗಳನ್ನು ಹೇಳಲಿಕ್ಕಿದೆ ಎಂದು ಹೇಳಿದರು.
“ನೀವು 24 ತಾಸು ಕಾಯಬೇಕು; ಸದನದಲ್ಲಿ ಶುಕ್ರವಾರ ಚರ್ಚೆ ನಡೆಯಲಿ. ಶಿವಸೇನೆಗೂ ಬಹಳಷ್ಟು ವಿಷಯಗಳನ್ನು ಹೇಳುವುದಕ್ಕಿದೆ. ವಿರೋಧ ಪಕ್ಷಗಳ ಮಾತುಗಳನ್ನು ಸರಕಾರ ಆಲಿಸಬೇಕು; ಪ್ರಜಾಸತ್ತೆಯಲ್ಲಿ ಇದು ಬಹಳ ಮುಖ್ಯ’ ಎಂದು ರಾವತ್ ಹೇಳಿದರು.
ನಂಬರ್ ಗೇಮ್ ಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಬಿಜೆಪಿ ಸುಭದ್ರ ಸ್ಥಿತಿಯಲ್ಲಿದೆ. ಲೋಕಸಭೆಯ ಸದನ ಬಲ ಈಗ 533ಕ್ಕೆ ಇಳಿದಿದೆ. ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಈಚೆಗೆ ಬಿಜೆಡಿ ಸಂಸದ ಬೈಜಯಂತ್ ಜಯ ಪಂಡಾ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಮತ್ತು ಕೇರಳ ಕಾಂಗ್ರೆಸ್ (ಎಂ) ನ ಜೋಸ್ ಕೆ ಮಾಣಿ ಅವರು ರಾಜ್ಯಸಭೆಗೆ ನಾಮಾಂಕಿತರಾಗಿದ್ದಾರೆ. ಹತ್ತು ಸೀಟುಗಳು ಖಾಲಿ ಇವೆ; ಆದುದರಿಂದ ಬಹುಮತದ ಸಂಖ್ಯೆ 266 ಆಗಿದೆ.
ಬಿಜೆಪಿಯ ಕೈಯಲ್ಲಿ 274 ಸ್ಥಾನಗಳು ಮತ್ತು ಶಿವಸೇನೆಯ ಕೈಯಲ್ಲಿ 18 ಸ್ಥಾನಗಳು ಇವೆ. ಎನ್‌ಡಿಎ ಕೂಟದ ಒಟ್ಟು ಬಲ ಸದನದಲ್ಲಿ 314 ಇದೆ. ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದ ನಾಲ್ಕು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ವಿಶ್ವಾಸ ಮತ ಎದುರಾಗಿದೆ.