ರಾಜಸಮಂದ್, ರಾಜಸ್ಥಾನ: ‘ರಾಜಸ್ಥಾನದಲ್ಲಿ ಬಿಜೆಪಿ ಏನು ಕೆಲಸ ಮಾಡಿದೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ನಾನು, ಒಂದೊಮ್ಮೆ ನನಗೆ ಇಟಾಲಿಯನ್ ಭಾಷೆ ಗೊತ್ತಿದ್ದರೆ, ಆ ಭಾಷೆಯಲ್ಲೇ ಉತ್ತರಿಸುತ್ತಿದ್ದೆ’ ಎಂದು ಬಿಜೆಪಿ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ. ಆ ಮೂಲಕ ಅವರು ರಾಹುಲ್ ಗಾಂಧಿ ಅವರ ತಾಯಿ ಸೋನಿಯಾ ಗಾಂಧಿ ಅವರ ಇಟಲಿ ಮೂಲವನ್ನು ಕೆದಕಿದ್ದಾರೆ.
ರಾಜಸ್ಥಾನದ ರಾಜಸಮಂದ್ ನಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅಮಿತ್ ಶಾ, “ರಾಜಸ್ಥಾನದ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ 116 ಯೋಜನೆಗಳನ್ನು ಆರಂಭಿಸಿದೆ; ಇದನ್ನು ತಿಳಿಯದ ರಾಹುಲ್ ಬಾಬಾ, ಬಿಜೆಪಿ ಏನು ಮಾಡಿದೆ ಎಂದು ಪ್ರಶ್ನಿಸುತ್ತಿದ್ದಾರೆ. ಆತನಿಗೆ ಇದನ್ನು ತಿಳಿಸಲು ನನಗೆ ಇಟಾಲಿಯನ್ ಭಾಷೆ ಗೊತ್ತಿಲ್ಲ’ ಎಂದು ಹೇಳಿದರು.
“ರಾಹುಲ್ ಬಾಬಾ ಗೆ ಎಣಿಸುವ ಕಲೆಯೂ ಗೊತ್ತಿಲ್ಲ. ಅತನಿಗೆ ಸರಿಯಾಗಿ ಎಣಿಸುವುದು ಗೊತ್ತಿರುತ್ತಿದ್ದರೆ ರಾಜಸ್ಥಾನದಲ್ಲಿ ಬಿಜೆಪಿ, ಜನರಿಗೆ 116 ಯೋಜನೆಗಳನ್ನು ಆರಂಭಿಸಿರುವುದನ್ನು ತಿಳಿದುಕೊಳ್ಳುವುದು ಸಾಧ್ಯವಿತ್ತು’ ಎಂದು ಅಮಿತ್ ಶಾ ಹೇಳಿದರು.
ಅಮಿತ್ ಶಾ ಅವರು ರಾಜಸಮಂದ್‌ನ ಚಾರ್‌ಭುಜನಾಥ್ ದೇವಸ್ಥಾನದಿಂದ ಹೊರಡುವ 58 ದಿನಗಳ “ರಾಜಸ್ಥಾನ್ ಗೌರವ್ ಯಾತ್ರಾ” ಗೆ ಹಸಿರು ನಿಶಾನೆ ತೋರಿದರು. ರಾಜಸ್ಥಾನ ವಿಧಾನಸಭಾ ಚುನಾವಣೆ ಈ ವರ್ಷಾಂತ್ಯ ನಡೆಯಲಿದೆ.
ರಾಜೆ ಮತ್ತು ಅಮಿತ್ ಶಾ ಅವರು ರಾಜಸ್ಥಾನ ಗೌರವ ಯಾತ್ರೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಬಸ್ಸನ್ನು ಏರುವ ಮುನ್ನ ಅವರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.