ಲಕ್ನೋ/ಅಹ್ಮದಾಬಾದ್: “ಬುಧವಾರ ದಿಂದ ಶುಕ್ರವಾರದ ವರೆಗೆ ಅಮೇಠಿಗೆ ಬರಬೇಡಿ. ನಿಮಗೆ ಭದ್ರತೆ ನೀಡಲು ಮತ್ತು ಕಾನೂನು ಸುವ್ಯವಸ್ಥೆ ಪಾಲನೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ನಿಮ್ಮ ಪ್ರವಾಸದಲ್ಲಿ ಬದಲು ಮಾಡಿಕೊಳ್ಳಿ’ ಹೀಗೆಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಮನವಿ ಮಾಡಿಕೊಂಡದ್ದು ಅಮೇಠಿ ಜಿಲ್ಲಾಡಳಿತ. ದಸರಾ ಮತ್ತು ಮೊಹರಂ ಹಿನ್ನೆಲೆಯಲ್ಲಿ ಈ ಮನವಿ ಮಾಡಿಕೊಳ್ಳಲಾಗಿದೆ.
ಅ.5ರ ಬಳಿಕವೇ ಪ್ರವಾಸ ಆಯೋಜನೆ ಮಾಡಿಕೊಳ್ಳುವಂತೆ ರಾಹುಲ್‌ಗೆ ಸೂಚಿಸಲಾ ಗಿದೆ. ಅದಕ್ಕೆ ಉತ್ತರ ಪ್ರದೇಶ ಕಾಂಗ್ರೆಸ್ ನಾಯಕ ಅಖೀಲೇಶ್ ಸಿಂಗ್ ಪ್ರತಿಕ್ರಿಯೆ ನೀಡಿ, ಬಿಜೆಪಿ ಸರಕಾರ ಪಕ್ಷದ ನಾಯಕನನ್ನು ಸ್ವಕ್ಷೇತ್ರ ಪ್ರವಾಸ ಕೈಗೊಳ್ಳದಂತೆ ತಡೆಯುತ್ತಿದೆ. ಸರಕಾರಕ್ಕೆ ಮುಜುಗರವಾಗುವ ವಿಚಾರವನ್ನು ರಾಹುಲ್ ಪ್ರಸ್ತಾವಿಸಲಿದ್ದಾರೆ. ಇದರಿಂದ ಆಗುವ ಮುಖಭಂಗ ತಪ್ಪಿಸಲು ಇಂಥ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂರಿದ್ದಾರೆ.
ಕಳೆದ ತಿಂಗಳಷ್ಟೇ ಅಮೇಠಿಯಲ್ಲಿ “ರಾಹುಲ್ ಗಾಂಧಿ ಕಾಣೆಯಾಗಿದ್ದಾರೆ’ ಎಂಬ ಬ್ಯಾನರ್‌ಗಳು ರಾರಾಜಿಸಿದ್ದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ಅವರು ಅಮೇಠಿಗೆ ಭೇಟಿ ನೀಡಲು ಮುಂದಾಗಿದ್ದರು.
ದೀಪಾವಳಿ ಬಳಿಕ ಪಟ್ಟ: ಇದೇ ವೇಳೆ ಸಂದರ್ಶನ ವೊಂದರಲ್ಲಿ ಮಾತನಾಡಿರುವ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಪೈಲಟ್, ದೀಪಾವಳಿ ಬಳಿಕ ರಾಹುಲ್ ಕಾಂಗ್ರೆಸ್ ಅಧ್ಯಕ್ಷರಾಗಲಿದ್ದಾರೆ ಎಂದಿದ್ದಾರೆ.
ಅಮಿತ್ ಶಾ “ಕಣ’ಕಹಳೆ: ಗುಜರಾತ್‌ನಲ್ಲಿ ಸದ್ಯದಲ್ಲೇ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರವಿವಾರ ರಾಜಕೀಯ ರಣಕಹಳೆಯನ್ನು ಊದುವ ಮೂಲಕ, ಪ್ರಚಾರಾಂದೋಲನಕ್ಕೆ ಅಧಿಕೃತ ಚಾಲನೆ ನೀಡಿದ್ದಾರೆ. ಈ ವೇಳೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಶಾ, “ಗುಜರಾತ್‌ನ ಅಭಿವೃದ್ಧಿಯನ್ನು ವ್ಯಂಗ್ಯವಾಡುತ್ತಿರುವ ಮಂದಿಗೆ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದಿದ್ದಾರೆ.