ಅಂಬರೀಶ್ ಅಗಲಿ ಎರಡು ತಿಂಗಳು ಕಳೆದಿದೆ. ಅವರ ಅಭಿಮಾನಿಗಳಲ್ಲಿ ಇನ್ನೂ ಆ ನೆನಪು ಮಾಸಿಲ್ಲ. ಹಲವು ಕಡೆಗಳಲ್ಲಿ ಅಂಬರೀಶ್ ಅವರ ಅಭಿಮಾನಿಗಳು ತಮ್ಮ ಪ್ರೀತಿಯ ನಾಯಕನಿಗಾಗಿ ಒಂದಷ್ಟು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಅವರನ್ನು ನೆನಪಿಸಿಕೊಂಡಿದ್ದಾರೆ. ಈಗ ಬಸವನಗುಡಿಯ ನ್ಯಾಷನಲ್ ಕಾಲೇಜು ಆವರಣದಲ್ಲೂ ಸಹ ಅವರನ್ನು ನೆನಪಿಸಿಕೊಳ್ಳುವಂತಹ ದೊಡ್ಡ ಕಾರ್ಯಕ್ರಮ ನಡೆಸಲು ತಯಾರಿ ನಡೆಸಲಾಗುತ್ತಿದೆ.
ಹೌದು, ಅಂಬರೀಶ್ ಅವರ ಸ್ಮರಣಾರ್ಥ ಮಾರ್ಚ್ 3ರ ಭಾನುವಾರ ಸಂಜೆ 5.30ಕ್ಕೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ “ಅಂಬಿ ನಮನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಅಭಿನಯದ ಆಯ್ದ ಜನಪ್ರಿಯ ಗೀತೆಗಳನ್ನು ಹಿರಿಯ ಗಾಯಕ ಎಸ್.ಪಿ ಬಾಲಸುಬ್ರಮಣ್ಯಂ ನೇತೃತ್ವದಲ್ಲಿ ಗಾಯಕರು ಪ್ರಸ್ತುತಪಡಿಸಲಿದ್ದಾರೆ. ಸಂಗೀತ ನಿರ್ದೇಶಕ ಹಂಸಲೇಖ, ಗುರುಕಿರಣ್, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಹಾಜರಿರಲಿದ್ದು, ಅಂಬರೀಶ್ ಅಭಿನಯದ ಆಯ್ದ ಗೀತೆಗಳಿಗೆ ಯುವ ಕಲಾವಿದರು ನೃತ್ಯ ಪ್ರದರ್ಶನವನ್ನು ಸಹ ನೀಡಲಿದ್ದಾರೆ.
ಸದ್ಯ ಈ ಕಾರ್ಯಕ್ರಮದ ರೂಪುರೇಷೆ ಮತ್ತು ತಯಾರಿಗೆ ಚಾಲನೆ ದೊರೆತಿದ್ದು, ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಮೂಡಿಬಂದಿರದ ರೀತಿಯಲ್ಲಿ ಅದ್ಧೂರಿಯಾಗಿ “ಅಂಬಿ ನಮನ’ ಕಾರ್ಯಕ್ರಮವನ್ನು ಆಯೋಜಿಸಲು “ಸಮರ್ಥನಂ ಅಂಗವಿಕಲರ ಸಂಸ್ಥೆ’ ಸಿದ್ಧತೆ ಮಾಡಿಕೊಳ್ಳುತ್ತಿದೆ. ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮತ್ತು ಹಿರಿಯ ನಟ ಶಿವರಾಮ್ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದು, ಕಾರ್ಯಕ್ರಮದಿಂದ ಸಂಗ್ರಹವಾಗುವ ಹಣವನ್ನು ಅಂಗವಿಕಲರ ಶ್ರೇಯೋಭಿವೃದ್ದಿಗೆ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಈ ಕುರಿತಂತೆ ವಿವರ ಕೊಡುವ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿರುವ ಹಿರಿಯ ನಟ ಶಿವರಾಮ್, “ಮೊದಲಿನಿಂದಲೂ ಅಂಬರೀಶ್ ಅವರು ಸಮರ್ಥನಂ ಸಂಸ್ಥೆಯ ಅನೇಕ ಕಾರ್ಯಗಳಲ್ಲಿ ನೆರವಾಗುತ್ತಿದ್ದರು. ಹಾಗಾಗಿ ಈಗ ಅವರ ಹೆಸರಿನಲ್ಲಿ “ಅಂಬಿ ನಮನ’ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಅಂಬರೀಶ್ ಅವರ ಕುಟುಂಬ ವರ್ಗ, ಅವರ ಅಭಿಮಾನಿಗಳು, ಕನ್ನಡ ಚಿತ್ರರಂಗದ ಅನೇಕ ಕಲಾವಿದರು, ತಂತ್ರಜ್ಞರು ಭಾಗವಹಿಸಲಿದ್ದಾರೆ.
ಮೊದಲು ಈ ಕಾರ್ಯಕ್ರಮವನ್ನು ಬೇರೆ ಕಡೆ ಮಾಡುವ ಯೋಜನೆಯಿತ್ತು. ಆದರೆ ಹೆಚ್ಚು ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಅಂತಿಮವಾಗಿ ಇದನ್ನು ಬೆಂಗಳೂರಿನಲ್ಲೇ ನಡೆಸಲು ಯೋಜಿಸಲಾಗಿದೆ’ ಎಂಬ ಮಾಹಿತಿ ಕೊಡುತ್ತಾರೆ ಅವರು. ಅಂದಹಾಗೆ, “ಅಂಬಿ ನಮನ’ ಕಾರ್ಯಕ್ರಮದ ಸ್ವರೂಪ ಕುರಿತಂತೆ ಇಷ್ಟರಲ್ಲೇ ಇನ್ನಷ್ಟು ಮಾಹಿತಿ ನೀಡುವುದಾಗಿ ಹೇಳುತ್ತಾರೆ ಅವರು.