ನವದೆಹಲಿ: ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಯಾತ್ರಾರ್ಥಿಗಳ ವಾರ್ಷಿಕ ಅಮರನಾಥ ಯಾತ್ರೆಯನ್ನು ಸತತ ಎರಡನೇ ವರ್ಷವೂ ರದ್ದುಪಡಿಸಲಾಗಿದೆ ಎಂದು ವರದಿ ತಿಳಿಸಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಅಧ್ಯಕ್ಷತೆಯಲ್ಲಿ ನಡೆದ ದೇವಾಲಯ ಮಂಡಳಿ ಸಭೆಯಲ್ಲಿ ಅಮರನಾಥ ಯಾತ್ರೆಯನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ಡೀಸೆಲ್ ಗೆ ಪರ್ಯಾಯ: ಕೇರಳದಲ್ಲಿ ಪ್ರಥಮ LNG ಚಾಲಿತ ಬಸ್ ಗೆ ವಿಧ್ಯುಕ್ತ ಚಾಲನೆ… ಏನಿದು?
ಜನರ ಜೀವವನ್ನು ಕಾಪಾಡುವುದು ಮುಖ್ಯವಾದ ವಿಷಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ವರ್ಷದ ತೀರ್ಥಯಾತ್ರೆಯನ್ನು ನಡೆಸುವುದು ಸೂಕ್ತವಲ್ಲ. ಶ್ರೀ ಅಮರನಾಥಜೀ ದೇವಾಲಯ ಮಂಡಳಿಯು ಲಕ್ಷಾಂತರ ಭಕ್ತರ ಭಾವನೆಗಳನ್ನು ಗೌರವಿಸುವ ನಿಟ್ಟಿನಲ್ಲಿ ಪವಿತ್ರ ಗುಹಾ ದೇವಾಲಯದಲ್ಲಿನ ಬೆಳಗ್ಗೆ ಮತ್ತು ಸಂಜೆಯ ಆರತಿಯ ನೇರ ಪ್ರಸಾರ ಮುಂದುವರಿಸಲು ಮಂಡಳಿ ನಿರ್ಧರಿಸಿದೆ ಎಂದು ಗವರ್ನರ್ ತಿಳಿಸಿದ್ದಾರೆ.
ಯಾತ್ರಾರ್ಥಿಗಳ ವಾರ್ಷಿಕ ಯಾತ್ರೆ ಸಾಂಕೇತಿಕವಾಗಿ ಮಾತ್ರ ನಡೆಯಲಿದೆ ಎಂದು ಸಿನ್ಹಾ ಮಾಹಿತಿ ನೀಡಿದ್ದು, ಆದರೂ ಎಲ್ಲಾ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳನ್ನು ಹಿಂದಿನ ವರ್ಷದಂತೆ ನಡೆಯಲಿದೆ ಎಂದು ಹೇಳಿದರು.
ಹಿಮಾಲಯ ತಪ್ಪಲು ಗುಹೆಯಲ್ಲಿ ಬೆಳಗ್ಗೆ ಮತ್ತು ಸಂಜೆ ನಡೆಯುವ ಆರತಿಯಲ್ಲಿ ವರ್ಚುವಲ್ ಆಗಿ ಭಕ್ತರು ಭಾಗವಹಿಸಲು ವ್ಯವಸ್ಥೆ ಮಾಡುವಂತೆ ಸಿನ್ಹಾ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಇದರೊಂದಿಗೆ ಭಕ್ತರು ಪ್ರಯಾಣ ಮತ್ತು ಸೋಂಕು ತಗುಲುವುದನ್ನು ತಪ್ಪಿಸಲಿದೆ ಎಂದು ಗವರ್ನರ್ ತಿಳಿಸಿದ್ದಾರೆ.