ದಾವಣಗೆರೆ: ಅಮರನಾಥ ಯಾತ್ರೆಗೆ ತೆರಳಿದ ಭಕ್ತರ ಮೇಲೆ ಅಮಾನುಷವಾಗಿ ಗುಂಡಿನ ದಾಳಿ ನಡೆಸಿದ ಉಗ್ರರ ಕೃತ್ಯವನ್ನು ಕೋಮು ಸೌಹಾರ್ದ ವೇದಿಕೆ ಕಾರ್ಯಕರ್ತರು ತೀವ್ರವಾಗಿ ಖಂಡಿಸಿದ್ದಾರೆ.
ಶುಕ್ರವಾರ ಉಪವಿಭಾಗಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಮಾಯಿಸಿದ ಕಾರ್ಯಕರ್ತರು, ಅಮರನಾಥ ಯಾತ್ರಿಗಳ ಮೇಲಿನ ದಾಳಿ ಮತ್ತು ಕರಾವಳಿಯಲ್ಲಿ ನಡೆದ ಅಮಾಯಕ ಯುವಕನ ಹತ್ಯೆ ಘಟನೆಯನ್ನು ಖಂಡಿಸಿದರಲ್ಲದೆ, ಎರಡೂ ಘಟನೆಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮನವಿ ಸಲ್ಲಿಕೆಗೂ ಮುನ್ನ ಮಾತನಾಡಿದ ವೇದಿಕೆ ಗೌರವಾಧ್ಯಕ್ಷ ಅನೀಸ್ ಪಾಷ, ಅಮರನಾಥ ಯಾತ್ರಾರ್ಥಿಗಳ ಮೇಲೆ ಕಳೆದ 11ರಂದು ಉಗ್ರರು ಅಮಾನುಷ
ರೀತಿಯಲ್ಲಿ ಗುಂಡಿನ ದಾಳಿ ಮಾಡಿದ್ದು ಖಂಡನೀಯ. ಇದೇ ವೇಳೆ ಕರಾವಳಿಯಲ್ಲಿ ಮೂಲಭೂತವಾದಿ ಸಂಘಟನೆಗಳು,
ರಾಜಕಾರಣಿಗಳಿಂದಾಗಿ ಅಮಾಯಕನೊಬ್ಬ ಬಲಿಯಾಗಿದ್ದು ನಿಜಕ್ಕೂ ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯವಾಗಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಕರಾವಳಿ ಪ್ರದೇಶಗಳಲ್ಲಿ ಕೆಲವು ಮೂಲಭೂತವಾದಿ ಸಂಘಟನೆಗಳು ಹಾಗೂ ರಾಜಕೀಯ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಸಾಮಾನ್ಯ ಯುವಕರನ್ನು ಬಲಿಪಶು ಮಾಡುತ್ತಿದ್ದರೆ, ಅತ್ತ ಪಾಕಿಸ್ತಾನ ಪ್ರೇರಿತ ಉಗ್ರವಾದಿಗಳು ಭಾರತ ದೇಶದೊಳಗೆ ನುಸುಳಿ ಬಂದು ಅಮಾನವೀಯ ಕೃತ್ಯವನ್ನು ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಸೂಕ್ರ ಕ್ರಮ ವಹಿಸಬೇಕು ಎಂದರು.
ಇನ್ನು ಕೆಲವು ರಾಜಕಾರಣಿಗಳು ಅಮಾಯಕರ ಸಾವಿನ ಘಟನೆಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದು ಅಸಹ್ಯಕರ ಸಂಗತಿ. ಇನ್ನು ಸಾಮಾನ್ಯ ವ್ಯಕ್ತಿಯೂ ಕೇಳಲು ಆಗದಂತಹ ಭಾಷೆಯನ್ನ ಬಳಸುತ್ತಿರುವ ರಾಜಕಾರಣಿಗಳ ನಡೆ ನಾಚಿಕೆಪಡುವಂತದ್ದು. ವೈರತ್ವ ಹುಟ್ಟಿಸುವಂತಹ ರಾಜಕೀಯ ವ್ಯಕ್ತಿಗಳು, ಮೂಲಭೂತವಾದಿ ಸಂಘಟನೆಗಳನ್ನು ಸರ್ಕಾರ ಆಯಾ ಕಾಲಕ್ಕೆ ನಿರ್ಬಂಧಿಸದ್ದಿದ್ದರೆ ಅಥವಾ ಮಟ್ಟ ಹಾಕದ್ದಿದ್ದರೆ ದೇಶದಲ್ಲಿ ಇಂತಹ ಘಟನೆ ನಡೆಯುತ್ತಿರಲಿಲ್ಲ. ಈಗಲಾದರೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಮೂಲಭೂತವಾದಿ ಸಂಘಟನೆಗಳನ್ನು ನಿಷೇಧಿಸಿದಲ್ಲಿ ಮುಂದಿನ ದಿನಗಳಲ್ಲಿ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಬಲ್ಲೂರು ರವಿಕುಮಾರ್, ಹೆಗ್ಗೆರೆ ರಂಗಪ್ಪ, ಇಸ್ಮಾಯಿಲ್ ದೊಡ್ಡಮನಿ, ವಿಜಯಕುಮಾರ್, ಕಬ್ಬಳ್ಳಿ ಪರಸಪ್ಪ, ಖಾದರ್ ಬಾಷ, ಗುಮ್ಮನೂರು ರಾಮಚಂದ್ರಪ್ಪ, ಕರಿಬಸಪ್ಪ, ಈರನಾಯ್ಕ, ಅನ್ವರ್ ಮತ್ತಿತರರು ಮನವಿ ಸಲ್ಲಿಸುವ ವೇಳೆ ಇದ್ದರು.