Advertisement

ಸಂಕಷ್ಟದಲ್ಲಿದ್ದರೂ ಜವಾಬ್ದಾರಿ ಅರಿತ ಹಳ್ಳಿ ಮಂದಿ

01:05 PM Mar 22, 2022 | Team Udayavani |

ಬೆಳಗಾವಿ: ಪ್ರವಾಹ ಮತ್ತು ಕೊರೊನಾ ಸಂಕಷ್ಟದಿಂದ ತತ್ತರಿಸಿದ್ದ ಬೆಳಗಾವಿ ಜಿಲ್ಲೆಯ ಹಳ್ಳಿಗರು ಈ ಬಾರಿ ತಮ್ಮ ಜವಾಬ್ದಾರಿ ಅರಿತು ಎಲ್ಲರೂ ಕಡ್ಡಾಯವಾಗಿ ತೆರಿಗೆ ಕಟ್ಟುವ ಮೂಲಕ ಸ್ಥಳೀಯ ಸಂಸ್ಥೆಗಳನ್ನು ಆರ್ಥಿಕವಾಗಿ ಬಲಪಡಿಸಲು ಕೈಜೋಡಿಸಿದ್ದು, ಜಿಲ್ಲೆಯಲ್ಲಿ ಈ ಬಾರಿ ಶೇ. 100ರಷ್ಟು ಕರ ವಸೂಲಾತಿ ಆಗಿದ್ದು ದಾಖಲೆ ಆಗಿದೆ.

Advertisement

ಎರಡು ವರ್ಷಗಳಿಂದ ಸಾರ್ವಜನಿಕರು ಕೋವಿಡ್‌ -19 ಹಾಗೂ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದರು. ಕರ ವಸೂಲಾತಿ ಆಗುವುದು ಕಷ್ಟಕರ ಆಗಿತ್ತು. ಆದರೆ ಕೋವಿಡ್‌ ಸೋಂಕಿನ ಪ್ರಮಾಣ ಇಳಿಮುಖ ಆಗಿದ್ದರಿಂದ ಉದ್ಯೋಗ, ವ್ಯವಹಾರ ಚಟುವಟಿಕೆಗಳು ಗತಿ ಪಡೆದುಕೊಂಡಿವೆ. ಹೀಗಾಗಿ ಜನರು ಹಳ್ಳಿಯ ಜನರು ಕರ ಕಟ್ಟಿ ಗ್ರಾಮ ಪಂಚಾಯಿತಿಗಳನ್ನು ಬಲಪಡಿಸಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಶೇ. 100ರಷ್ಟು ಕರ ವಸೂಲಾತಿ ಆಗಿದ್ದು ಹಳ್ಳಿಗರೇ ಸ್ಟ್ರಾಂಗು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಗ್ರಾಮ ಪಂಚಾಯಿತಿಗಳನ್ನು ಸ್ವಾಯತ್ತ ಆಡಳಿತ ಸಂಸ್ಥೆಗಳೆಂದು ಕರೆಯಲಾಗುತ್ತದೆ. ತನ್ನ ವ್ಯಾಪ್ತಿಯ ಆಡಳಿತ, ಅಭಿವೃದ್ಧಿಯನ್ನು ನೇರವಾಗಿ ನಿರ್ವಹಿಸಲು ಕರ ವಸೂಲಾತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ತಮ್ಮ ಜವಾಬ್ದಾರಿಯನ್ನು ಮನದಟ್ಟು ಮಾಡಿಕೊಂಡು ಸರ್ಕಾರದ ನಿಯಮಾನುಸಾರ ತೆರಿಗೆಯನ್ನು ತುಂಬಿದ್ದಾರೆ.

ಜಿಲ್ಲೆಯ 14 ತಾಲೂಕುಗಳಲ್ಲಿ ಮಾ. 21ರ ವರೆಗೆ ಒಟ್ಟು ಶೇ. 100.21ರಷ್ಟು ಕರ ವಸೂಲಾತಿ ಆಗಿದೆ. ಶೇ. 109.50ರಷ್ಟು ಕರ ವಸೂಲಾತಿ ಮಾಡಿದ ತಾಲೂಕು ಎಂಬ ಹೆಗ್ಗಳಿಕೆ ಗೋಕಾಕಕ್ಕೆ ಸಿಕ್ಕಿದೆ. ಹುಕ್ಕೇರಿ ಅತಿ ಕಡಿಮೆ ಶೇ. 93.71ರಷ್ಟು ಕರ ವಸೂಲಾತಿ ಮಾಡಿದೆ.

ಮೂಲ ಸೌಕರ್ಯಕ್ಕೆ ಬಳಕೆ: ದಶಕದಲ್ಲಿ ಇದೇ ಪ್ರಥಮ ಬಾರಿಗೆ ಜಿಲ್ಲೆಯು ಚಾಲ್ತಿ ಬೇಡಿಕೆಯ ನೂರರಷ್ಟು ತೆರಿಗೆ ಸಂಗ್ರಹ ಮಾಡಿದ ಶ್ರೇಯಸ್ಸಿಗೆ ಪಾತ್ರವಾಗಿದೆ. ಸಂಗ್ರಹವಾದ ತೆರಿಗೆಯಲ್ಲಿ ಗ್ರಾಮದಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವುದರ ಜತೆಗೆ ವಿವಿಧ ಯೋಜನೆಗಳ ನಿರ್ವಹಣೆಗೆ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಗ್ರಾಮೀಣ ಬಡಜನರಿಗೆ ಅಕುಶಲ ಉದ್ಯೋಗ ಕಲ್ಪಿಸಿ ಮಹಿಳೆಯರು, ಪುರುಷರು ಹಾಗೂ ವಯೋವೃದ್ಧರನ್ನು ಆರ್ಥಿಕವಾಗಿ ಸ್ವಾವಲಂಬಿ ಮಾಡಿ ಉದ್ಯೋಗ ಕಲ್ಪಿಸಲಾಗುತ್ತಿದೆ. ಸ್ವತ್ಛ ಭಾರತ ಅಭಿಯಾನ ಯೋಜನೆಯಡಿ ಪ್ರತಿ ಮನೆಗೂ ಶೌಚಾಲಯ ನಿರ್ಮಿಸುವುದು. ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಗಂಗೆ ಪ್ರತಿ ಮನೆಗೆ 55 ಎಲ್‌ಪಿಸಿಡಿ ನೀರು ಪೂರೈಸುವುದನ್ನು ನಿರ್ವಹಣೆ ಮಾಡುವುದಕ್ಕಾಗಿ ತೆರಿಗೆಯನ್ನು ಬಳಸಿಕೊಳ್ಳಲಾಗುತ್ತಿದೆ.

Advertisement

ಗ್ರಾಮೀಣ ಭಾಗದಲ್ಲಿಯ ಬೀದಿ ದೀಪಗಳ ನಿರ್ವಹಣೆ, ಸಮುದಾಯ ಆಸ್ತಿಗಳ ನಿರ್ವಹಣೆ, ಮೂಲ ಸೌಕರ್ಯಗಳನ್ನು ಒದಗಿಸುವುದು, ಶಾಲೆ, ಆಸ್ಪತ್ರೆ, ಮೈದಾನ, ಅಂಗನವಾಡಿಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡುವುದಾಗಿದೆ. ಜಿಲ್ಲೆಯ ಎಲ್ಲ ಗ್ರಾಪಂಗಳು ಸಕ್ರಿಯವಾಗಿ ಹಾಗೂ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿದ್ದನ್ನು ಅರಿತು ಜನರು ತೆರಿಗೆ ಕಟ್ಟುವ ಮೂಲಕ ಆರ್ಥಿಕ ಪ್ರಗತಿಗೆ ಕೈ ಜೋಡಿಸಿದ್ದಾರೆ.

ಕರ ವಸೂಲಾತಿ ಪ್ರಕ್ರಿಯೆ: ತೆರಿಗೆ ವಸೂಲಾತಿ ಶೇ. ನೂರರಷ್ಟು ಆಗಲು ಎಲ್ಲ ಮೇಲ ಧಿಕಾರಿಗಳಿಂದ ಹಿಡಿದು ಕೆಳ ಹಂತದ ಸಿಬ್ಬಂದಿಯವರ ಪಾತ್ರ ಬಹಳಷ್ಟಿವೆ. ಜಿಪಂ ಸಿಇಒ ಜಿಲ್ಲೆಯ ಮೇಲ್ವಿಚಾರಣೆ ಮಾಡುತ್ತಾರೆ. ಅದರಂತೆ ಉಪಕಾರ್ಯದರ್ಶಿ (ಅಭಿವೃದ್ಧಿ) ಅವರು ಎಲ್ಲ ತಾಲೂಕಿನ ಇಒ, ಪಿಡಿಒ ಮತ್ತು ಕರ ವಸೂಲಿಗಾರರೊಂದಿಗೆ ಸಮನ್ವಯತೆ ಸಾಧಿಸಿ, ಪ್ರತಿ ದಿನ ವೈಯಕ್ತಿಕವಾಗಿ ಗಮನಹರಿಸಿ ವಸೂಲಾತಿ ಪ್ರಗತಿಯಲ್ಲಿ ನಿರ್ವಹಣೆ ಮಾಡುತ್ತಾರೆ. ಗ್ರಾಪಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರರು, ವಾಟರ್‌ವೆುನ್‌, ಡಾಟಾ ಎಂಟ್ರಿ ಆಪರೇಟರ್‌ ಸೇರಿ ಎಲ್ಲ ಸಿಬ್ಬಂದಿಗಳ ಸಹಯೋಗದೊಂದಿಗೆ ತೆರಿಗೆ ವಸೂಲಿ ಮಾಡಿಕೊಂಡು ಪಂಚತಂತ್ರಾಂಶದಲ್ಲಿ ತೆರಿಗೆ ವಸೂಲಾತಿ ಪೂರ್ಣಗೊಳಿಸುತ್ತಾರೆ.

ಅಶ್ವಾಸನೆ ನಿಧಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ಗ್ರಾಮ ಪಂಚಾಯತ್‌ ನೌಕರರು ಕೋವಿಡ್‌-19 ಸಾಂಕ್ರಾಮಿಕ ರೋಗದಿಂದ ಮರಣ ಹೊಂದಿದಲ್ಲಿ ಅವರಿಗೆ ಪರಿಹಾರ ನೀಡುವ ಬಗ್ಗೆ ಹಾಗೂ ಅನಾರೋಗ್ಯಗೊಂಡಲ್ಲಿ ಅಂತಹ ನೌಕರರ ವೈದ್ಯಕೀಯ ವೆಚ್ಚವನ್ನು ಭರಿಸಲು ಜಿಲ್ಲಾ ಪಂಚಾಯತ್‌ ಹಂತದಲ್ಲಿ ಆಶ್ವಾಸನೆ ನಿಧಿ ರಚಿಸಲಾಗಿದೆ. ತೆರಿಗೆ ಸಂಗ್ರಹದಲ್ಲಿಯ ಇಂತಿಷ್ಟು ಹಣ ಗ್ರಾಪಂದಿಂದ ನೀಡಿ ಇದನ್ನು ಸಂಬಂಧಿಸಿದ ಕುಟುಂಬಕ್ಕೆ ನೀಡಲು ಬಳಸಿಕೊಳ್ಳಲಾಗುತ್ತಿದೆ.

 

ತೆರಿಗೆ ವಸೂಲಾತಿ ಗ್ರಾಪಂನ ಪ್ರಾಥಮಿಕ ಪ್ರಕಾರಗಳಲ್ಲಿ ಒಂದು. ಆರ್ಥಿಕ ಸಂಕಷ್ಟದಲ್ಲಿದ್ದರೂ ಜನರು ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ತೆರಿಗೆ ತುಂಬಿದ್ದಾರೆ. ಜಿಲ್ಲೆಯ ಎಲ್ಲ ತಾಲೂಕುಗಳ ಗ್ರಾಪಂಗಳಲ್ಲಿ ಸರ್ಕಾರದ ನಿರ್ದೇಶನದಂತೆ ಈ ವರ್ಷದ ಚಾಲ್ತಿ ಬೇಡಿಕೆಯ ನೂರರಷ್ಟು ಕರ ವಸೂಲಿ ಆಗಿದ್ದು ಶ್ಲಾಘನೀಯ.

-ಬಸವರಾಜ ಹೆಗ್ಗನಾಯಕ, ಉಪಕಾರ್ಯದರ್ಶಿ(ಅಭಿವೃದ್ಧಿ), ಜಿಪಂ

-ಭೈರೋಬಾ ಕಾಂಬಳೆ

Advertisement

Udayavani is now on Telegram. Click here to join our channel and stay updated with the latest news.

Next