ಬೆಂಗಳೂರು: ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಪೂರ್ಣ ನಿರ್ಮೂಲನೆಗೆ ಜನ ಸಮುದಾಯದಲ್ಲಿ ಅರಿವು ಮೂಡಿಸುವುದು ಕೂಡ ಅವಶ್ಯಕ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
2025 ಕ್ಕೆ ಮಲೇರಿಯಾ ಮುಕ್ತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಲೇರಿಯಾ ಹೆಚ್ಚಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅಲ್ಲಿ ಜನರೇ ಮುನ್ನೆಚ್ಚರಿಕೆ ಕ್ರಮ ವಹಿಸಲು ತಿಳಿಸಿಕೊಡಬೇಕು ಎಂದು ಸೂಚನೆ ನೀಡಿದರು.
ಮಲೇರಿಯಾಗೆ ಹಿಂದೆ ಸರಿಯಾದ ತಪಾಸಣಾ ವ್ಯವಸ್ಥೆಯೇ ಇರಲಿಲ್ಲ. ಇದರಿಂದಾಗಿ ಸಾವುಗಳು ಸಂಭವಿಸುತ್ತಿತ್ತು. 80 ಹಾಗೂ 90 ರ ದಶಕದಲ್ಲಿ ಯಾವುದೇ ಜ್ವರ ಬಂದರೂ ಮೊದಲು ಮಲೇರಿಯಾ ತಪಾಸಣೆ ಮಾಡಲು ಆರಂಭವಾಯಿತು. ಈ ರೀತಿ ಸರ್ಕಾರ ತಪಾಸಣೆ ಹಾಗೂ ಅರಿವು ಕಾರ್ಯಕ್ರಮಗಳ ಮೂಲಕ ಕ್ರಮ ವಹಿಸುತ್ತಿದೆ. ಯಾವುದೇ ರೋಗದ ಬಗ್ಗೆ ಸಮಾಜದಲ್ಲಿ ಅರಿವು ಮೂಡಿಸುವುದು ಹೆಚ್ಚು ಅಗತ್ಯ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ನವ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದಾರೆ. ಆರೋಗ್ಯ ಕರ್ನಾಟಕ ನಿರ್ಮಿಸಿದಾಗ ಮಾತ್ರ ಇದು ಸಾಧ್ಯ. ಮಲೇರಿಯಾ ಮಾತ್ರವಲ್ಲದೆ, ಕ್ಷಯ ರೋಗವನ್ನು ಕೂಡ ನಿರ್ಮೂಲನೆ ಮಾಡಬೇಕಿದೆ.
ಮಲೇರಿಯಾ ನಿರ್ಮೂಲನೆಗೆ 2030 ರ ಗುರಿಯನ್ನು ಕೇಂದ್ರ ಸರ್ಕಾರ ನೀಡಿದೆ. ಆದರೆ ನಮ್ಮ ರಾಜ್ಯದಲ್ಲಿ 2025 ರ ಗುರಿ ಇರಿಸಿಕೊಳ್ಳಲಾಗಿದೆ. ಸರ್ಕಾರದ ಕೆಲಸ, ಸಂಘ, ಸಂಸ್ಥೆಗಳ ನೆರವು ಹಾಗೂ ಜನರ ಸಹಭಾಗಿತ್ವದಿಂದ ಇದು ಸಾಧ್ಯವಾಗುತ್ತದೆ. ಪ್ರತಿ ನಾಗರಿಕರು ತಮ್ಮ ಮನೆಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ಈ ಬಗ್ಗೆ ಹೆಚ್ಚು ಅರಿವು ಮೂಡಿಸಬೇಕು ಎಂದು ತಿಳಿಸಿದರು.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಮಲೇರಿಯಾ ಹೆಚ್ಚಿರುವ ಕಡೆಗಳಿಗೆ ಹೋಗಿ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿ ಜನರು ಸಂಕಷ್ಟದಲ್ಲಿರುವಾಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅದ್ದೂರಿಯಾಗಿ ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಸರಿಯೋ ತಪ್ಪು ಅವರಿಗೆ ಬಿಡುತ್ತೇವೆ. ನಾವು ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸಿದರೆ, ಅವರು ಅವರದ್ದೇ ಜನ್ಮದಿನ ಆಚರಣೆ ಮಾಡಿಕೊಳ್ಳುತ್ತಾರ. ನಮ್ಮ ಪಕ್ಷದಲ್ಲಿ ವ್ಯಕ್ತಿಪೂಜೆ, ಪಲ್ಲಕ್ಕಿ ಪೂಜೆಗೆ ಅವಕಾಶ ಇಲ್ಲ. ಕಾಂಗ್ರೆಸ್‌ನಲ್ಲಿ ಅದೇ ಮುಖ್ಯ.
-ಡಾ.ಕೆ.ಸುಧಾಕರ್