ಕುಷ್ಟಗಿ: ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಹೊಸ ಪ್ರತಿಭೆ ಬೆಳಕಿಗೆ ಬರುವ ಸಾದ್ಯತೆ ಇದೆ. ಮುಂದೆ ಭವಿಷ್ಯದ ಜೀವನದಲ್ಲಿ ಜೀವನೋಪಾಯಕ್ಕೆ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.
ಶನಿವಾರ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ಕುಷ್ಟಗಿ ತಾಲೂಕು ಮಟ್ಟದ ಪ್ರಾಥಮಿಕ, ಪ್ರೌಢಶಾಲಾ ಪ್ರತಿಭಾ ಕಾರಂಜಿ, ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯಾರು ದಡ್ಡರಲ್ಲ. ಎಲ್ಲರೂ ಒಂದೊಂದು ಕ್ಷೇತ್ರಗಳಲ್ಲಿ ಪ್ರತಿಭಾನ್ವಿತರೇ ಆಗಿದ್ದು, ಅವರು ಮುಂದೆ ಬರಲು ಸಾದ್ಯವಿದೆ ಎಂದ ಅವರು ವಿದ್ಯಾರ್ಥಿ ದೆಸೆಯಲ್ಲಿ ಸಿಕ್ಕಿರುವ ಸದಾವಕಾಶವನ್ನು ಬಳಸಿಕೊಳ್ಳಬೇಕು ಎಂದರು.
ಕಳೆದೆರೆಡು ವರ್ಷಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳು ನಡೆದಿರಲಿಲ್ಲ. ಪ್ರಸಕ್ತ ವರ್ಷದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ1,300 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಗಮನಾರ್ಹವಾಗಿದ್ದು, ತಾಲೂಕು ಮಟ್ಟದಲ್ಲಿ ಪ್ರತಿನಿಧಿಸಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಯಶಸ್ವಿಗೊಳಿಸುವ ಆಶಯ ವ್ಯಕ್ತಪಡಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬ್ಳೆ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಾಲಜ್ಜ ಬಳಿಗಾರ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನೀಲನಗೌಡ ಹೊಸಗೌಡ್ರು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕುದರಿ, ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶ ಎಂ., ಎಂ.ಗೊಣ್ಣಾಗರ, ವಿರುಪಾಕ್ಷಪ್ಪ ಅಂಗಡಿ, ಹೈದರಾಲಿ ಜಾಲಿಹಾಳ, ಯಮನಪ್ಪ ಚೂರಿ, ಗುರುಪಾದಮ್ಮ ಭಂಡಾರಿ, ಎಸ್.ಡಿಎಂ.ಸಿ. ಅಧ್ಯಕ್ಷ ಕೇದಾರನಾಥ ತುರಕಾಣಿ, ಅಹ್ಮದ್ ಹುಸೇನ ಆದೋನಿ, ವಿಶ್ವನಾಥ ನುಗ್ಲಿ, ನಾಗಪ್ಪ ಬಿಳಿಯಪ್ಪನವರ, ಮುಖ್ಯ ಶಿಕ್ಷಕ ಶಿವಪ್ಪ ಭಜಂತ್ರಿ ಮತ್ತಿತರರಿದ್ದರು.
ಶಿಕ್ಷಣ ಸಂಯೋಜಕ ದಾವಲಸಾಬ್ ವಾಲೀಕಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ತೆಮ್ಮಿನಾಳ ನಿರೂಪಿಸಿದರು.
ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಿರಿಯ ಪ್ರಾಥಮಿಕ ವಿಭಾಗದ 16 ಸ್ಪರ್ಧೆಗಳಲ್ಲಿ 320 ವಿದ್ಯಾರ್ಥಿಗಳು, 48 ಜನ ನಿರ್ಣಾಯಕರು, ಬಾಲಕಿಯರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಷ್ಠಗಿಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ 16 ಸ್ಪರ್ಧೆಗಳು 380 ವಿದ್ಯಾರ್ಥಿಗಳು 56 ಜನ ನಿರ್ಣಾಯಕರು ಮತ್ತು ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಕುಷ್ಠಗಿಯಲ್ಲಿ ಪ್ರೌಢ ವಿಭಾಗದ ವೈಯಕ್ತಿಕ 16 ಸ್ಪರ್ಧೆಗಳಲ್ಲಿ ಮತ್ತು ಸಾಮೂಹಿಕ 2 ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಒಟ್ಟು 520 ವಿದ್ಯಾರ್ಥಿಗಳು, 54 ಜನ ನಿರ್ಣಾಯಕರು, ಭಾಗವಹಿಸುತ್ತಿದ್ದಾರೆ ಎಂದರು.