ನವದೆಹಲಿ: ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿರುವ ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಜೇಶನ್ ಚುನಾವಣೆ ಬಹಿಷ್ಕಾರದ ಕರೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಏ.18) ನಾಗಾಲ್ಯಾಂಡ್ ನ ಆರು ಜಿಲ್ಲೆಗಳಲ್ಲಿ ಈವರೆಗೆ ಶೂನ್ಯ ಮತದಾನವಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
ಆರು ಜಿಲ್ಲೆಗಳಲ್ಲಿ ಈವರೆಗೆ ಒಂದೇ ಒಂದು ಮತದಾನ ನಡೆದಿಲ್ಲ. ಈ ನಿಟ್ಟಿನಲ್ಲಿ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿ, ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಜೇಶನ್ ಗೆ ನೋಟಿಸ್ ಜಾರಿ ಮಾಡಿದೆ.
ಸಾರ್ವತ್ರಿಕ ಚುನಾವಣೆಯಲ್ಲಿ ಪೂರ್ವ ನಾಗಾಲ್ಯಾಂಡ್ ಪ್ರದೇಶದಲ್ಲಿ ವಾಸವಾಗಿರುವ ನಿವಾಸಿಗಳ ಮೇಲೆ ಪ್ರಭಾವ ಬೀರುವ ಮೂಲಕ ಮುಕ್ತವಾಗಿ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ ಎಂದು ಚುನಾವಣಾ ಅಧಿಕಾರಿ ಆರೋಪಿಸಿದ್ದಾರೆ.
ಹಲವಾರು ಸಂಘಟನೆಗಳ ಜತೆಗಿನ ಮಾತುಕತೆ ನಂತರ ಚುನಾವಣೆ ಬಹಿಷ್ಕಾರಿಸುವಂತೆ ಘೋಷಿಸಲಾಗಿದೆ. ನಮ್ಮ ಗುರಿ ಪ್ರತ್ಯೇಕ ಸ್ವಾಯತ್ತೆ ಪಡೆಯುವುದಾಗಿದೆ. ಜನರೇ ಸ್ವಯಂ ಆಗಿ ಚುನಾವಣೆ ಬಹಿಷ್ಕರಿಸಿದ್ದಾರೆ. 171 ಸಿ ಕಲಂ ನಮಗೆ ಅನ್ವಯವಾಗುವುದಿಲ್ಲ, ನಾವು ಯಾವುದೇ ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿಲ್ಲ ಎಂದು ಇಎನ್ ಪಿಒ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ನಾಗಾಲ್ಯಾಂಡ್ ಒಂದು ಲೋಕಸಭಾ ಸ್ಥಾನವನ್ನು ಹೊಂದಿದೆ. 2018ರ ಉಪಚುನಾವಣೆಯಲ್ಲಿ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗೆಸಿವ್ ಪಕ್ಷದ ಟೋಖೆಹೊ ಯೆಪ್ದೋಮಿ ಗೆಲುವು ಸಾಧಿಸಿದ್ದು, ಎನ್ ಡಿಪಿಪಿ ಬಿಜೆಪಿಯ ಮಿತ್ರಪಕ್ಷವಾಗಿದೆ.