Advertisement

ಮೈತ್ರಿಗೆ ರಾಮಲಿಂಗಾರೆಡ್ಡಿಯೇ ಸಂಜಿವೀನಿ?

11:31 PM Jul 14, 2019 | Lakshmi GovindaRaj |

ಬೆಂಗಳೂರು: ಅಲ್ಪಮತಕ್ಕೆ ಕುಸಿದಿರುವ ಸರ್ಕಾರವನ್ನು ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳ ನಾಯಕರು ಸಂಜೀವಿನಿಯಾಗಿ ಬಿಟಿಎಂ ಲೇಔಟ್‌ ಕ್ಷೇತ್ರದ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ನೆಚ್ಚಿಕೊಂಡಿದ್ದಾರೆ.

Advertisement

ಅವರ ಮನವೊಲಿಕೆ ಯಶಸ್ವಿಯಾದರೆ, ಮುಂಬೈನಲ್ಲಿರುವ ಅರ್ಧಕ್ಕೂ ಹೆಚ್ಚು ಶಾಸಕರು ವಾಪಸ್‌ ಬಂದು ಸರ್ಕಾರದ ಬೆನ್ನಿಗೆ ನಿಲ್ಲುತ್ತಾರೆಂಬ ನಂಬಿಕೆ ಹಿನ್ನೆಲೆಯಲ್ಲಿ ಮೈತ್ರಿ ಪಕ್ಷಗಳ ನಾಯಕರು ರಾಮಲಿಂಗಾರೆಡ್ಡಿ ಅವರ ಮನವೊಲಿಕೆಗೆ ಸರತಿ ಸಾಲಿನಲ್ಲಿ ತೆರಳಿ ಪ್ರಯತ್ನ ನಡೆಸಿದರು.

ಪಕ್ಷದ ಹಿರಿಯ ನಾಯಕ ಎಚ್‌.ಕೆ.ಪಾಟೀಲ್‌ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಜಂಟಿಯಾಗಿ ರಾಮಲಿಂಗಾರೆಡ್ಡಿ ಅವರ ನಿವಾಸಕ್ಕೆ ತೆರಳಿ, ಆಗಿರುವ ಲೋಪವನ್ನು ಸರಿಪಡಿಸಿಕೊಂಡು ಹೋಗಲು ತಮ್ಮ ರಾಜೀನಾಮೆ ವಾಪಸ್‌ ಪಡೆಯುವಂತೆ ಮನವರಿಕೆ ಮಾಡುವ ಪ್ರಯತ್ನ ನಡೆಸಿದರು.

ಆದರೂ, ರಾಮಲಿಂಗಾರೆಡ್ಡಿ ಅವರು ತಮ್ಮ ಅಸಮಾಧಾನದ ಮೂಲ ಕಾರಣವನ್ನು ನಾಯಕರ ಮುಂದಿಟ್ಟು ತಮಗಾಗಿರುವ ಅವಮಾನಕ್ಕೆ ನ್ಯಾಯ ದೊರಕಿಸಿ ಕೊಡಲಾಗುತ್ತದೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಆದರೆ, ಅವರು ರಾಜೀನಾಮೆ ವಾಪಸ್‌ ಪಡೆದರೆ ಅವರ ಬೇಡಿಕೆಗಳಿಗೆ ಹಂತ ಹಂತವಾಗಿ ಪರಿಹಾರ ಕಲ್ಪಿಸಲು ಸಾಧ್ಯವಿದೆ ಎಂಬ ಆಶಾಭಾವನೆಯನ್ನು ಇಬ್ಬರೂ ನಾಯಕರು ಹೊಂದಿದ್ದು, ಈ ಬಗ್ಗೆ ಪಕ್ಷದ ನಾಯಕರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Advertisement

ಅವರ ಭೇಟಿಯ ನಂತರ ನಗರದ ಮನೆಯಿಂದ ತೋಟದ ಮನೆಗೆ ತೆರಳಿದ್ದ ರಾಮಲಿಂಗಾ ರೆಡ್ಡಿ ಅವರ ಮನವೊಲಿಕೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸೇರಿದಂತೆ ಮೈತ್ರಿ ಪಕ್ಷಗಳ ನಾಯಕರು ಜಂಟಿಯಾಗಿ ತೆರಳಿದ್ದರು.

ಸುಮಾರು ಎರಡು ಗಂಟೆಗಳ ಕಾಲ ಮೈತ್ರಿ ಪಕ್ಷಗಳ ನಾಯಕರು ರಾಮಲಿಂಗಾರೆಡ್ಡಿ ಅವರ ಮನವೊಲಿಕೆ ಕಸರತ್ತು ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸೋಮವಾರ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಕರೆದಿರುವ ವಿಚಾರಣೆಗೆ ಹಾಜರಾಗಿ ತಮ್ಮ ನಿಲುವು ತಿಳಿಸುವುದಾಗಿ ಅವರು ಹೇಳಿದ್ದಾರೆ ಎನ್ನಲಾಗಿದೆ.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿಯ ದೊಡ್ಡವರು ಇಲ್ಲಿಗೆ ಬರಬಾರದಿತ್ತು. ಅವರು ಕರೆದಿದ್ದರೇ ನಾನೇ ಹೋಗುತ್ತಿದ್ದೆ. ಕಾಂಗ್ರೆಸ್‌ ಹಿರಿಯ ನಾಯಕರ ಜೊತೆ ಮಾತುಕತೆ ನಡೆಸಿದ್ದೇನೆ. ಅದೆಲ್ಲವನ್ನೂ ಮಾಧ್ಯಮಗಳ ಮುಂದೆ ಹೇಳಲಾಗುವುದಿಲ್ಲ. ಸೋಮವಾರ ವಿಧಾನಸಭೆ ಕಲಾಪಕ್ಕೆ ಹಾಜರಾಗುತ್ತೇನೆ. ಸಚಿವ ಸ್ಥಾನಕ್ಕಾಗಿ ನಾನು ಯಾವತ್ತೂ ಲಾಬಿ ಮಾಡಿಲ್ಲ. ಜುಲೈ 15 ರವರೆಗೂ ಯಾವುದೇ ರಾಜಕೀಯ ವಿಷಯ ಮಾತನಾಡುವುದಿಲ್ಲ.
-ರಾಮಲಿಂಗಾರೆಡ್ಡಿ, ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next