ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವ ಸಾರಿಗೆ ನಿಗಮದ ಮುಂದೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಶಾಂತಿನಗರ ಕೆಎಸ್ಸಾರ್ಟಿಸಿ ಘಟಕ -2ರಲ್ಲಿ ಬುಧವಾರ ನಡೆದ ನಿಗಮದ 63ನೇ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಬಸ್ ಪ್ರಯಾಣ ದರ ಏರಿಕೆ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಈ ಬಗ್ಗೆ ಸಂಸ್ಥೆಯ ಒಳಗೆ ಚರ್ಚೆ ಕೂಡ ಆಗಿಲ್ಲ. ಬಸ್ ಪ್ರಯಾಣ ದರ ಏರಿಕೆ ಮಾಡುವ ಪ್ರಸ್ತಾವ ಇಲ್ಲ ಎಂದು ಸ್ಪಷ್ಪಪಡಿಸಿದರು.
ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳಲ್ಲಿ ಸುಮಾರು 10 ಸಾವಿರ ಮಂದಿಗೆ ಉದ್ಯೋಗ ನೀಡುವ ಕೆಲಸ ನಡೆದಿದೆ. ನಾಲ್ಕೂ ನಿಗಮಗಳಲ್ಲಿ 9,000 ಹುದ್ದೆಗಳ ನೇಮಕಾತಿಗೆ ಅನುಮತಿ ನೀಡಿದ್ದು ಈ ಪೈಕಿ 1,183 ಚಾಲಕ ಕಂ ನಿರ್ವಾಹಕ ಹಾಗೂ ತಾಂತ್ರಿಕ ಸಿಬಂದಿಗೆ ನೇಮಕಾತಿ ಆದೇಶ ನೀಡಲಾಗಿದೆ. 6,500 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಸರಕಾರ ರಸ್ತೆ ಸಾರಿಗೆ ನಿಗಮಗಳಿಗೆ 5,800 ಹೊಸ ಬಸ್‌ಗಳನ್ನು ಸೇರ್ಪಡೆಗೆ ಅನುಮೋದನೆ ನೀಡಿದೆ ಎಂದರು.
3 ಕುಟುಂಬಗಳಿಗೆ ತಲಾ 1 ಕೋಟಿ ರೂ.:
ಇದಕ್ಕೂ ಮೊದಲು ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಾರಿಗೆ ಸಂಸ್ಥೆಯ ನೌಕರರ ಕುಟುಂಬದವರಿಗೆ 1 ಕೋಟಿ ರೂ.ವಿಮೆ ವಿತರಿ ಸಿದರು. ಕಾರ್ಯ ನಿರ್ವಹಿಸುವ ವೇಳೆ ಅಪಘಾತದಲ್ಲಿ ಸಾವಿಗೀಡಾದ 3 ಕುಟುಂಬಗಳಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ತಲಾ 1 ಕೋಟಿ ರೂ. ಅಪಘಾತ ವಿಮಾ ಚೆಕ್ ನೀಡಿದರು.