ಹೊಸದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದಲ್ಲಿ ಖಲಿಸ್ತಾನಿ ಉಗ್ರರನ್ನು ಗುರಿಯಾಗಿಸಲು ಆದೇಶಿಸಿದ್ದಾರೆ ಎಂಬ ಕೆನಡಾದ ಸಚಿವರ ಹೇಳಿಕೆಯನ್ನು ತಳ್ಳಿಹಾಕಿದ ಭಾರತ, ಅದನ್ನು “ಅಸಂಬದ್ಧ ಮತ್ತು ಆಧಾರರಹಿತ” ಎಂದು ಹೇಳಿದೆ. ಅಲ್ಲದೆ ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್ ನೀಡಲಾಗಿದೆ.
ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ಅವರು ಮಂಗಳವಾರ ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತೆಯ ಸ್ಥಾಯಿ ಸಮಿತಿಯ ಸದಸ್ಯರನ್ನು ಉದ್ದೇಶಿಸಿ ಮಾತನಾಡುವಾಗ ಈ ಆರೋಪಗಳನ್ನು ಮಾಡಿದ್ದರು.
ಶನಿವಾರದಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಶುಕ್ರವಾರ ಕೆನಡಾದ ಹೈಕಮಿಷನ್ ನ ಪ್ರತಿನಿಧಿಯನ್ನು ಕರೆಸಲಾಗಿದೆ, ರಾಜತಾಂತ್ರಿಕ ಟಿಪ್ಪಣಿಯನ್ನು ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಉಪ ಸಚಿವ ಡೇವಿಡ್ ಮಾರಿಸನ್ ಅವರು ಸಮಿತಿಯ ಮುಂದೆ ಭಾರತದ ಕೇಂದ್ರ ಗೃಹ ಸಚಿವರಿಗೆ ಮಾಡಿದ ಅಸಂಬದ್ಧ ಮತ್ತು ಆಧಾರರಹಿತ ಉಲ್ಲೇಖಗಳಿಗೆ ಭಾರತ ಸರ್ಕಾರವು ತೀವ್ರವಾಗಿ ಪ್ರತಿಭಟಿಸುತ್ತದೆ ಎಂದು ಟಿಪ್ಪಣಿಯಲ್ಲಿ ತಿಳಿಸಲಾಗಿದೆ ಎಂದು ಜೈಸ್ವಾಲ್ ಹೇಳಿದರು.
ತನ್ನ ಅಧಿಕಾರಿಗಳು ವಾಷಿಂಗ್ಟನ್ ಪೋಸ್ಟ್ಗೆ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂದು ಕೆನಡಾ ಒಪ್ಪಿಕೊಂಡಿದೆ ಮತ್ತು ಅಂತಹ ಕ್ರಮಗಳು ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳಿಗೆ ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ.