ಗದಗ: ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ ಜಿಲ್ಲೆಯಲ್ಲಿ ಗುರುತಿಸಿದ ಎಲ್ಲ ಫಲಾನುಭವಿಗಳಿಗೆ ಲಸಿಕೆ ತಲುಪಬೇಕು ಎಂದು ಜಿಲ್ಲಾ ಕಾರಿ ಮನೋಜ್ ಜೈನ್ ಹೇಳಿದರು.
ಗ್ರಾಮ ಸ್ವರಾಜ್ಯ ಯೋಜನೆಯಡಿ ಇಂದ್ರಧನುಷ್ ಲಸಿಕಾ ಕಾರ್ಯಕ್ರಮ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ನಿಮಿತ್ತ ಜಿಲ್ಲಾಡಳಿತ ಭವನದಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಶಿಸ್ತುಬದ್ಧವಾಗಿ ನಿರ್ವಹಿಸಬೇಕು. ಜಿಲ್ಲೆಯಲ್ಲಿ ಗುರುತಿಸಿದ ಆಯಾ ತಾಲೂಕಿನ ಹಳ್ಳಿಗಳಿಗೆ ಸಂಬಂಧಿಸಿದ ಕಾರ್ಯಕ್ರಮದ ಅ ಧಿಕಾರಿಗಳು ಈ ಸಾರ್ವತ್ರಿಕ ಲಸಿಕೆಯ ಗುರುತಿಸಿದ ಎಲ್ಲ ಫಲಾನುಭವಿಗಳಿಗೆ ತಲುಪವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ ಮೇ 28 ರಿಂದ ಜೂ. 9 ವರೆಗೆ ಐಡಿಸಿಎಫ್ ಕಾರ್ಯಕ್ರಮವು ಜರುಗಲಿದ್ದು, 0-5 ವರ್ಷದೊಳಗಿನ ಮಕ್ಕಳು ಅತಿಸಾರಭೇದಿಯಿಂದ ಮರಣ ಹೊಂದಬಾರದೆಂಬ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿ ಗುರುತಿಸಲಾದ 5 ವರ್ಷದೊಳಗಿನ ಒಟ್ಟು 1,32,424 ಮಕ್ಕಳಿರುವ ಮನೆಗಳಿಗೆ ಭೇಟಿ ನೀಡಿ ಓಆರ್‌ಎಸ್ ಹಾಗೂ ಜಿಂಕ್ ಮಾತ್ರೆ ನೀಡಿ ಉಪಚಾರ ಮಾಡಿ, ಗುಣಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶುಚಿತ್ವ ಕಾಯ್ದುಕೊಳ್ಳಬೇಕು. ಮೇಲಿಂದ ಮೇಲೆ ಕೈತೊಳೆದುಕೊಳ್ಳುವ ಕುರಿತು ಹಾಗೂ ಗ್ರಾಮ, ನಗರ ಪ್ರದೇಶ, ಎಲ್ಲ ಆಸ್ಪತ್ರೆಗಳ ಹಾಗೂ ಶಾಲೆಗಳಲ್ಲಿಯ ನೀರಿನ ಟ್ಯಾಂಕ್‌ಗಳನ್ನು ಶುಚಿಗೊಳಿಸಲು ಹಾಗೂ ಜಿಲ್ಲೆಯ ಎಲ್ಲ ನೀರಿನ ಮೂಲಗಳನ್ನು ತಪಾಸಣೆ ಮಾಡಿ, ರೋಗ ಹರಡದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಗೆ ತಿಳಿಸಿದರು.
ಜಿಲ್ಲಾ ಆರ್.ಸಿ.ಎಚ್ ಅಧಿ ಕಾರಿ ಡಾ| ಎಸ್.ಎನ್. ಹೊನಕೇರಿ ಮಾತನಾಡಿ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹೊರತುಪಡಿಸಿ, ಇನ್ನುಳದ 28 ಜಿಲ್ಲೆಗಳ 625 ಹಳ್ಳಿಗಳಲ್ಲಿ ಈ ಅಭಿಯಾನ ಜರುಗಲಿದೆ. ಜಿಲ್ಲೆಯ ನರಗುಂದ ತಾಲೂಕು ಹೊರತುಪಡಿಸಿ ಉಳಿದ ನಾಲ್ಕು ತಾಲೂಕುಗಳ 22 ಗ್ರಾಮಗಳಲ್ಲಿ ಈ ಅಭಿಯಾನ ನಡೆಯಲಿದೆ. ಎರಡು ವರ್ಷದೊಳಗಿನ 247, 5-6 ವರ್ಷದೊಳಗಿನ 60 ಮಕ್ಕಳಿಗೆ ಹಾಗೂ 65 ಗರ್ಭಿಣಿಯರಿಗೆ ಈ ಚುಚ್ಚುಮದ್ದು ನೀಡಲಾಗುವುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ಪಿ.ಎಚ್.ಕಬಾಡಿ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮಕೃಷ್ಣ ಪಡಗಣ್ಣವರ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ| ಪಲ್ಲೇದ, ಶಿಕ್ಷಣ ಇಲಾಖೆಯ ಜಿ.ಎಲ್. ಬಾರಾಟಕ್ಕೆ, ತಾಲೂಕಾ ವೈದ್ಯಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.