ಮೈಸೂರು: ಅಕ್ಕ ಮಹಾದೇವಿ ವಿವಾಹ ನಿರಾಕರಣೆ ಮಾಡಿದವರಲ್ಲ. ಬದಲಿಗೆ ದಾಂಪತ್ಯದ ಒಳಗಡೆಯಿರುವ ಅಧಿಕಾರದ ಸಂಬಂಧದ ಬಗ್ಗೆ ವಿರೋಧ ವ್ಯಕ್ತಮಾಡಿ, ಆರೋಗ್ಯಕಾರಿ ಸಂಬಂಧದ ಬಗ್ಗೆ ಧ್ವನಿಯೆತ್ತಿದ್ದರು. ಸಮಾಜ ಇದನ್ನು ಮರೆಮಾಚಿದೆ ಎಂದು ವಿಜಯಪುರದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಸಬೀಹಾ ಭೂಮಿಗೌಡ ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅಕ್ಕ ಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಪೀಠ ಆಯೋಜಿಸಿದ್ದ ವರ್ತಮಾನಕ್ಕೂ ಸಲ್ಲುವ ಅಕ್ಕನ ವಚನಗಳು ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಭಕ್ತಿಪಂಥ: ವಿವಾಹವೇ ಹೆಣ್ಣು ಮಕ್ಕಳ ಅಂತಿಮ ಗುರಿಯಲ್ಲ ಎಂದು ಪ್ರತಿಪಾದಿಸಿದ್ದ ಅಕ್ಕ ಮಹಾದೇವಿಗೆ ಈ ಸಮಾಜ ವಿರಾಗಿಣಿಯ ಚಿತ್ರಣ ನೀಡಿದೆ. ಭಕ್ತಿಪಂಥದಲ್ಲಿ ಸಾಗಿದ ಅಕ್ಕ ಮಹಾದೇವಿ ವಿವಾಹ ನಿರಾಕರಣೆ ಮಾಡಿದವರಲ್ಲ. ದಾಂಪತ್ಯದಲ್ಲಿ ಸಖ-ಸಖೀಯ ಸಂಬಂಧ ಮುಖ್ಯವಾಯಿತು. ಅಕ್ಕನ ಬದುಕು ಜೀವನ ಧೋರಣೆ ಇಟ್ಟುಕೊಂಡು ವರ್ತಮಾನದ ಬದುಕಿಗೆ ಅನ್ವಯವಾಗಲಿದೆ ಎಂದು ತಿಳಿಸಿದರು. ಅಕ್ಕ ಮಹಾದೇವಿಯ ವಚನಗಳಿಗೆ ಮುಖಾಮುಖೀಯಾದಾಗ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಅರ್ಥಗಳು, ಬೇರೆ ಬೇರೆ ಸಾಧ್ಯತೆಗಳನ್ನು ತೆರೆದಿಡುತ್ತಿದೆ ಎಂದು ಹೇಳಿದರು.
ವಚನ: ಅಕ್ಕನ ವಚನಗಳು ಜನ ಸಾಮಾನ್ಯರಿಗೆ ಅರ್ಥವಾಗುವಂತಿದ್ದು, ವಚನಗಳೊಳಗಿನ ಅರ್ಥದ ಮಗ್ಗಲುಗಳನ್ನು ಗಮನಿಸಿದಾಗ ಕೇವಲ ಮಾತುಗಳ ಒಳಗಡೆ ತುಂಬಿರುವ ಅರ್ಥದ ಪರಂಪರೆಯನ್ನು ತೆರೆದಿಡುತ್ತದೆ. ಸಾಹಿತ್ಯಿಕ ವಿಮರ್ಶೆಗೆ ಒಡ್ಡಿದಾಗ ನೋಡುವ ಕ್ರಮವೇ ಬೇರೆ ಇದೆ ಎನಿಸುತ್ತದೆ ಎಂದರು.
ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಿಂದಲೇ ಅಕ್ಕ ಮಹಾದೇವಿಯ ವಚನಗಳನ್ನು ಓದಿಕೊಂಡು ಬಂದಿದ್ದು, ಪ್ರಾಥಮಿಕ ದಿಂದ ಸ್ನಾತಕ ಶಿಕ್ಷಣದವರೆಗೆ ಶೈಕ್ಷಣಿಕ ಶಿಸ್ತು ಉತ್ತಮವಾಗಿರಲಿದ್ದು, ವಚನ ಅಂದರೇನು, ಅದರ ಹಿನ್ನೆಲೆ ಏನು, ಅದರ ಕಠಿಣ ಪದಗಳ ಅರ್ಥಗಳೇನು ಎಂಬುದನ್ನು ವಿವರಿಸಿ ಅವರ ಲೋಕದೃಷ್ಟಿಯನ್ನು ಭೂತಕಾಲದಲ್ಲಿಟ್ಟು ನೋಡುತ್ತೇವೆಯೇ ಹೊರತು ವರ್ತಮಾನಕ್ಕೆ ಅನ್ವಯಿಸಿ ನೋಡುವ ಕೆಲಸ ವಾಗುತ್ತಿಲ್ಲ ಎಂದು ವಿಷಾದಿಸಿದರು.
ಕಾರ್ಯಕ್ರಮದಲ್ಲಿ ಮುಕ್ತ ವಿವಿ ಕುಲಪತಿಪ್ರೊ.ಎಸ್.ವಿದ್ಯಾಶಂಕರ್ ಅಧ್ಯಕ್ಷತೆವಹಿಸಿದ್ದರು. ಪರೀಕ್ಷಾಂಗ ಕುಲಸಚಿವ ಪ್ರೊ.ಎ.ರಂಗಸ್ವಾಮಿ, ಪ್ರೊ.ಬಸವರಾಜು, ಖಾದರ್ ಪಾಷ, ತಿಪ್ಪೇಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.