Advertisement

ಹಸಿದವರ ಹೊಟ್ಟೆ ತುಂಬಿಸುತ್ತಿರುವ ಚಿತ್ರ ಕಲಾವಿದ

08:13 PM Jun 22, 2021 | Team Udayavani |

ವರದಿ: ಭೈರೋಬಾ ಕಾಂಬಳೆ

Advertisement

ಬೆಳಗಾವಿ: ಸುಮಾರು 20 ದಿನಗಳಿಂದ ಇಲ್ಲಿಯ ಚಿತ್ರಕಲಾವಿದನೋರ್ವ ಲಾಕ್‌ಡೌನ್‌ದಿಂದ ಸಂಕಷ್ಟಕ್ಕೆ ಸಿಲುಕಿ ಹಸಿದವರಿಗೆ ಅನ್ನ, ಉಪಹಾರ ಹಾಗೂ ಜಾನುವಾರುಗಳಿಗೆ ಮೇವು-ನೀರು ನೀಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ನಗರದ ಕಂಗ್ರಾಳ ಗಲ್ಲಿಯ ಆಕಾಶ ಹಲಗೇಕರ ಎಂಬ ಯುವ ಕಲಾವಿದ ಹಸಿದವರಿಗೆ ಅನ್ನ ನೀಡಿ ಹೊಟ್ಟೆ ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಿಂದ ತನಗೆ ಬಂದಿರುವ ಪ್ರಶಸ್ತಿ ಹಣದಿಂದಲೇ ಜನರಿಗೆ ಊಟ, ಉಪಹಾರ, ಚಹಾ, ಕಾಫಿ ನೀಡುತ್ತಿದ್ದಾರೆ.

ಚಿತ್ರ ಕಲೆ ಹಾಗೂ ಸ್ತಬ್ಧಚಿತ್ರಗಳ ಮೂಲಕ ಬೆಳಗಾವಿಯಲ್ಲಿ ಖ್ಯಾತರಾಗಿರುವ ಆಕಾಶ ಹಲಗೇಕರಗೆ ಜ್ಞಾನ ಯೋಗ ಟ್ರಸ್ಟ್‌ ವತಿಯಿಂದ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಮೊತ್ತ 25 ಸಾವಿರ ರೂ. ಬಂದಿತ್ತು. ಇದೇ ಹಣದಿಂದಲೇ ಆಕಾಶ 20 ದಿನಗಳಿಂದ ಜನರ ನೆರವಿಗೆ ನಿಂತಿದ್ದಾರೆ. ಗಾಂಧಿ  ನಗರ ಜೋಪಡಪಟ್ಟಿ, ಟೆಂಟ್‌ನಲ್ಲಿ ಇರುವವರು, ರಸ್ತೆ ಬದಿಯ ಭಿಕ್ಷುಕರು, ಕೇಂದ್ರ ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ, ಕೋಟೆ ಪ್ರದೇಶಗಳಲ್ಲಿ ಆಕಾಶ ಊಟ ಹಂಚುತ್ತಿದ್ದಾರೆ.

ಕೆಲವರಿಗೆ ಕಾಯಿಪಲ್ಲೆ, ಹಣ್ಣು ಹಂಪಲಗಳನ್ನು ವಿತರಿಸುತ್ತಿದ್ದಾರೆ. ಸ್ಲಂ ಪ್ರದೇಶದಲ್ಲಿ ಇರುವವರಿಗೆ ಅಲ್ಲಿಗೇ ಹೋಗಿ ಊಟದ ಪೊಟ್ಟಣ, ಹಣ್ಣುಗಳನ್ನು ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ.

Advertisement

ದಿನಾಲು 50 ಆಹಾರದ ಪೊಟ್ಟಣ: ತನ್ನ ಬಳಿ ಇರುವ ಹಣದಿಂದಲೇ ಸಹಾಯಕ್ಕೆ ನಿಂತಿರುವ ಆಕಾಶ ಹಲಗೇಕರ ಬೆಳಗ್ಗೆ ಉಪಹಾರ, ಟೀ-ಕಾಫಿ, ಮಧ್ಯಾಹ್ನ ಅಥವಾ ರಾತ್ರಿ ಹೊತ್ತಿನಲ್ಲಿ ದಿನಾಲೂ 50 ಉಟದ ಪೊಟ್ಟಣಗಳನ್ನು ಹಂಚುವ ಕಾರ್ಯ ಮಾಡುತ್ತಿದ್ದಾರೆ. ಬೆಳಗಿನ ಹೊತ್ತು ಜಾನುವಾರುಗಳಿಗೆ ಹಸಿರು ಮೇವು, ನೀರು ಕೊಡುತ್ತಾರೆ. ಸಣ್ಣ ನಾಯಿ ಮರಿಗಳಿಗೆ ಹಾಲು, ಬೀದಿ ನಾಯಿಗಳಿಗೆ ಬಿಸ್ಕೀಟ್‌, ಬ್ರೇಡ್‌, ಊಟ ನೀಡುತ್ತಿದ್ದಾರೆ. ಕುರಿ-ಮೇಕೆಗಳಿಗೆ ಚುರುಮುರಿ ತಿನ್ನಿಸುತ್ತಿದ್ದಾರೆ.

ಮಳೆಯನ್ನೂ ಲೆಕ್ಕಿಸದೇ ಸೇವೆ: ಆಕಾಶ ಹಲಗೇಕರ ಅವರು ತಮ್ಮ ಮನೆಯಲ್ಲಿಯೇ ಅಡುಗೆ ತಯಾರಿಸಿ ಆಹಾರ ಪೊಟ್ಟಣಗಳನ್ನು ಪ್ಯಾಕ್‌ ಮಾಡಿಕೊಂಡು ಅಗತ್ಯ ಇರುವವರಿಗೆ ಕೊಡುತ್ತಿದ್ದಾರೆ. ಹಿಂದಿನ ದಿನವೇ ಆ ಪ್ರದೇಶಕ್ಕೆ ಹೋಗಿ ಎಷ್ಟು ಜನರಿಗೆ ಊಟದ ಅಗತ್ಯ ಇದೆ ಎಂಬುದನ್ನು ನೊಡಿಕೊಂಡು ಬರುತ್ತಾರೆ. ಮರುದಿನ ತನ್ನ ಸ್ನೇಹಿತರನ್ನು ಕರೆದುಕೊಂಡು ಮಳೆಯನ್ನೂ ಲೆಕ್ಕಿಸದೇ ದ್ವಿಚಕ್ರ ವಾಹನದ ಮೇಲೆ ಜನರು ಇದ್ದಲ್ಲಿಗೇ ಹೋಗಿ ಊಟ ನೀಡುತ್ತಿದ್ದಾರೆ. ಬಹುತೇಕ ಮಂದಿಗೆ ಊಟದ ವ್ಯವಸ್ಥೆ ಆಗುತ್ತಿದೆ. ಹೀಗಾಗಿ ಕೆಲವರು ಹಾಸಿಗೆ, ಬಟ್ಟೆ ನೀಡುವಂತೆ ಕೇಳುತ್ತಿದ್ದಾರೆ. ಹೀಗಾಗಿ ನಾಳೆಯಿಂದ ಅಗತ್ಯ ಇರುವವರಿಗೆ ಬ್ಲ್ಯಾಂಕೆಟ್‌, ಬಟ್ಟೆ ನೀಡಲು ತಯಾರಿ ನಡೆಸುತ್ತಿದ್ದೇವೆ.

20 ದಿನಗಳಿಂದ ಸ್ವಂತ ಖರ್ಚಿನಲ್ಲಿಯೇ ಆಹಾರ ತಯಾರಿಸಿದ್ದು, ಇನ್ನು ಕೆಲವು ಸ್ನೇಹಿತರ ಸಹಾಯದಿಂದ ಬಟ್ಟೆ ವಿತರಿಸುವ ಕಾರ್ಯ ಮಾಡಲಾಗುವುದು ಎನ್ನುತ್ತಾರೆ ಆಕಾಶ ಹಲಗೇಕರ. ಆಕಾಶ ಅವರ ಸೇವೆಯನ್ನು ಮೆಚ್ಚಿ ಸ್ನೇಹಿತರಾದ ಶಂಕರ ಪಿರಗಾಣಿ, ಸಂತೋಷ ಹಲಗೇಕರ, ಅಮೂಲ್‌ ಚೌಗುಲೆ, ವಿನಾಯಕ ಚಂಪಣ್ಣವರ, ಲಕ್ಷ್ಮಣ ಚೌಗುಲೆ, ಅನುರಾಗ ಕರಲಿಂಗ, ಅನುರಾಗ ದೇವರಮಣಿ, ಸುನೀಲ ಕೋಲಕಾರ, ಅಭಿಷೇಕ ದೇವರಮನಿ ಸಹಾಯಕ್ಕೆ ನಿಂತಿದ್ದಾರೆ. ಕಂಗ್ರಾಳ ಗಲ್ಲಿ, ಗವಳಿ ಗಲ್ಲಿ, ಗಣಾಚಾರಿ ಗಲ್ಲಿ , ಗೋಂಧಳ್ಳಿ ಗಲ್ಲಿಯ ಅನೇಕರು ಸಹಾಯ ಮಾಡುತ್ತಿದ್ದಾರೆ. ಇವರ ಸಂಪರ್ಕ ಮೊ: 9739452214.

Advertisement

Udayavani is now on Telegram. Click here to join our channel and stay updated with the latest news.

Next