ಲಂಡನ್: ಭಾರತದ ಹಿರಿಯ ಬ್ಯಾಟರ್ ಅಜಿಂಕ್ಯ ರಹಾನೆ ಅವರು ಒಂದು ವರ್ಷದ ನಂತರ ಭಾರತೀಯ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡಿದ್ದು, ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಲ್ಲಿ ತಮ್ಮ ಐಪಿಎಲ್ ಫಾರ್ಮ್ ಮುಂದುವರಿಸುವತ್ತ ಗಮನಹರಿಸಿದ್ದಾರೆ.
ಪುನರಾಗಮನವನ್ನು ತನಗೆ ಮತ್ತು ತನ್ನ ಕುಟುಂಬಕ್ಕೆ ಭಾವನಾತ್ಮಕ ಕ್ಷಣ ಎಂದು ಬಣ್ಣಿಸಿದ ರಹಾನೆ, ಭಾರತ ತಂಡಕ್ಕೆ ಮರಳಲು ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ಉತ್ತಮ ದೇಶೀಯ ಋತು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ನಲ್ಲಿ ಪವರ್ ಫುಲ್ ಪ್ರದರ್ಶನದ ನಂತರ ಓವಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಗೆ ರಹಾನೆ ಭಾರತದ 15 ಸದಸ್ಯರ ಟೆಸ್ಟ್ ತಂಡಕ್ಕೆ ಮರಳಲಿದ್ದಾರೆ. ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ ರಹಾನೆ 326 ರನ್ ಗಳಿಸಿದರು, ಅದರಲ್ಲೂ 172.49. ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
2022 ರ ಜನವರಿಯಲ್ಲಿ ಕೊನೆಯದಾಗಿ ಟೆಸ್ಟ್ ಆಡಿದ್ದ ರಹಾನೆ, ಮಧ್ಯಮ ಕ್ರಮಾಂಕದ ಆಟಗಾರರಾದ ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಗಾಯಗೊಂಡ ಕಾರಣ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ:Rajasthan ಕೋಪದಲ್ಲಿ ಜಿಲ್ಲಾಧಿಕಾರಿಯತ್ತ ಮೈಕ್ ಬಿಸಾಡಿದ ಸಿಎಂ ಗೆಹ್ಲೊಟ್! Video
“18-19 ತಿಂಗಳ ನಂತರ ಭಾರತ ತಂಡಕ್ಕೆ ಮರಳಲು ನಿಜವಾಗಿಯೂ ಸಂತೋಷವಾಗಿದೆ. ಇದು ನನಗೆ ನಿಜವಾಗಿಯೂ ವಿಶೇಷವಾದ ವಿಚಾರ. ನಾನು ನನ್ನ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿಸಲು ಬಯಸುತ್ತೇನೆ. ಟಿ 20 ಅಥವಾ ಟೆಸ್ಟ್ ಕ್ರಿಕೆಟ್ ಬಗ್ಗೆ ಹೆಚ್ಚು ಯೋಚಿಸಲು ಬಯಸುವುದಿಲ್ಲ. ನಾನು ಈಗ ಬ್ಯಾಟಿಂಗ್ ಮಾಡುತ್ತಿರುವ ರೀತಿ, ನಾನು ವಿಷಯಗಳನ್ನು ಸಂಕೀರ್ಣಗೊಳಿಸಲು ಬಯಸುವುದಿಲ್ಲ. ಇದು ನನಗೆ ಭಾವನಾತ್ಮಕ ಕ್ಷಣವಾಗಿತ್ತು. ನಾನು ತಂಡದಿಂದ ಡ್ರಾಪ್ ಆದಾಗ ನನ್ನ ಕುಟುಂಬದ ಬೆಂಬಲವು ದೊಡ್ಡದಾಗಿತ್ತು” ಎಂದು ಅಜಿಂಕ್ಯ ರಹಾನೆ ಬಿಸಿಸಿಐ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.