Advertisement

WTC 25: ಸತತ ಎರಡು ಪಂದ್ಯ ಸೋತರೂ ಭಾರತಕ್ಕಿದೆ ಫೈನಲ್‌ ತಲುಪುವ ಅವಕಾಶ; ಹೀಗಿದೆ ಲೆಕ್ಕಾಚಾರ

09:41 AM Oct 27, 2024 | Team Udayavani |

ಪುಣೆ: ಮತ್ತೊಮ್ಮೆ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ (World Test Championship) ಫೈನಲ್‌ ತಲುಪುವ ಆಕಾಂಕ್ಷೆಯೊಂದಿಗೆ ಅಜೇಯವಾಗಿ ಸಾಗುತ್ತಿದ್ದ ಟೀಂ ಇಂಡಿಯಾಗೆ (Team India) ಸತತ ಎರಡು ಪಂದ್ಯಗಳಲ್ಲಿ ಸೋಲಾಗಿದೆ. ಪ್ರವಾಸಿ ನ್ಯೂಜಿಲ್ಯಾಂಡ್‌ ವಿರುದ್ದದ ತವರಿನ ಸರಣಿಯಲ್ಲೇ ರೋಹಿತ್‌ ಪಡೆ ಸೋಲು ಕಂಡಿದೆ.

Advertisement

ನ್ಯೂಜಿಲ್ಯಾಂಡ್‌ ವಿರುದ್ಧ 2ನೇ ಟೆಸ್ಟ್‌ ಪಂದ್ಯದಲ್ಲಿನ ಸೋಲಿನ ಬಳಿಕವೂ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲೇ ಉಳಿದಿದೆ. ಆದರೆ ಜಯದ ಪ್ರತಿಶತ ಲೆಕ್ಕಾಚಾರದಲ್ಲಿ ಕುಸಿತ ಕಂಡಿದೆ. 2ನೇ ಟೆಸ್ಟ್‌ಗೂ ಮುನ್ನ ಶೇ.68.06ರಷ್ಟಿದ್ದ ಪ್ರತಿಶತ ಪ್ರಮಾಣ ಸದ್ಯ ಶೇ.62.82ಕ್ಕಿಳಿದಿದೆ.

ಸದ್ಯ ಭಾರತ 13 ಪಂದ್ಯಗಳಿಂದ 98 ಅಂಕ ಹೊಂದಿದೆ. ಆದಾಗ್ಯೂ, ರೋಹಿತ್ ಪಡೆಯು ಇನ್ನೂ ಡಬ್ಲ್ಯುಟಿಸಿ (WTC) ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (62.50 ಅಂಕ) ವಿರುದ್ಧ ಸಣ್ಣ ಅಂತರದಿಂದ ಮುನ್ನಡೆ ಸಾಧಿಸಿದೆ.

2012ರ ಬಳಿಕ ಮೊದಲ ತವರು ಟೆಸ್ಟ್ ಸರಣಿಯ ಸೋಲನ್ನು ಅನುಭವಿಸಿದರೂ, ಲಾರ್ಡ್ಸ್‌ ನಲ್ಲಿ ನಡೆಯಲಿರುವ ಡಬ್ಲ್ಯೂಟಿಸಿ ಫೈನಲ್‌ ಗೆ ಭಾರತದ ಅವಕಾಶಗಳು ಇನ್ನೂ ಹಿಡಿತದಲ್ಲಿಯೇ ಉಳಿದಿವೆ. ಮುಂದಿನ ಕೆಲವು ಫಲಿತಾಂಶಗಳು ಭಾರತದ ದಾರಿಯಲ್ಲಿ ಹೋದರೆ, ಮತ್ತಷ್ಟು ಪಂದ್ಯಗಳನ್ನು ಕೈಚೆಲ್ಲದಿದ್ದರೆ, ಭಾರತ ಫೈನಲ್‌ ತಲುಪಬಹುದು.

Advertisement

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಇದು ನಡೆಯುತ್ತಿರುವ ಡಬ್ಲ್ಯೂಟಿಸಿ ಸೈಕಲ್‌ ನಲ್ಲಿ ಭಾರತದ ಕೊನೆಯ ತವರು ಟೆಸ್ಟ್ ಆಗಿರುತ್ತದೆ .ಈ ಪಂದ್ಯದ ನಂತರ ರೋಹಿತ್ ಶರ್ಮಾ ಮತ್ತು ಸಹ ಆಟಗಾರರು ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಾರೆ.

ಭಾರತ ಇತರರನ್ನು ಅವಲಂಬಿಸದೆ ಫೈನಲ್‌ಗೆ ಅರ್ಹತೆ ಪಡೆಯಲು ಬಯಸಿದರೆ, ತಂಡವು ತನ್ನ ಉಳಿದ ಆರು ಪಂದ್ಯಗಳಲ್ಲಿ ಮತ್ತೊಂದು ಸೋಲನ್ನು ಅನುಭವಿಸಲು ಸಾಧ್ಯವಿಲ್ಲ. ಕಿವೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಸೋತ ನಂತರ, ಭಾರತವು ಈಗ 71.05 ಅಂಕದೊಂದಿಗೆ ಫೈನಲ್‌ ತಲುಪಲು ಗರಿಷ್ಠ ಒಂದು ಡ್ರಾ ಮತ್ತು ಐದು ಗೆಲುವುಗಳನ್ನು ಮಾತ್ರ ನಿಭಾಯಿಸಬಲ್ಲದು.

ಸದ್ಯ ಭಾರತ, ಆಸ್ಟ್ರೇಲಿಯಾ, ದ.ಆಫ್ರಿಕಾಕಾ, ನ್ಯೂಜಿಲ್ಯಾಂಡ್‌ ತಂಡಗಳ ನಡುವೆ ಫೈನಲ್‌ಗೇರಲು ನೇರ ಪೈಪೋಟಿಯಿದೆ. ಭಾರತಕ್ಕಿನ್ನು 6 ಪಂದ್ಯಗಳು ಬಾಕಿಯಿದ್ದು, ಇದರಲ್ಲಿ 5 ಪಂದ್ಯ ಗೆದ್ದರೆ ನೇರವಾಗಿ ಫೈನಲ್‌ ಗೇರಲಿದೆ. ಇದರಲ್ಲಿ ವಿಫ‌ಲವಾದರೆ ಇತರೆ ತಂಡಗಳ ಪ್ರದರ್ಶನ ಆಧರಿಸಿ ಭಾರತದ ಫೈನಲ್‌ ಸ್ಥಾನ ನಿರ್ಧಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next