ಪರ್ತ್: ಭಾರತ ಮತ್ತು ಆಸೀಸ್ ನಡುವಿನ ಟೆಸ್ಟ್ ಸರಣಿ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಪರ್ತ್ ನಲ್ಲಿ ನಡೆಯಲಿರುವ ಮೊದಲ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡದ ಸಹಾಯಕ ಕೋಚ್ ಡೇನಿಯಲ್ ವೆಟೋರಿ (Daniel Vettori) ಅವರು ಅಲಭ್ಯರಾಗಲಿದ್ದಾರೆ. ಕಾರಣ ಐಪಿಎಲ್ ಮೆಗಾ ಹರಾಜು (IPL Mega Auction).
ಪರ್ತ್ ಟೆಸ್ಟ್ ಪಂದ್ಯವು ನ.22ರಂದು ಆರಂಭವಾಗಲಿದೆ. ಇದೇ ವೇಳೆ ಅಂದರೆ ನ.24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.
45ರ ಹರೆಯದ ಡೇನಿಯಲ್ ವೆಟೋರಿ ಅವರು ಆಸ್ಟ್ರೇಲಿಯಾದ ಸಹಾಯಕ ಕೋಚ್ ಅಲ್ಲದೆ ಐಪಿಎಲ್ ಫ್ರಾಂಚೈಸಿ ಸನ್ ರೈಸರ್ಸ್ ಹೈದರಾಬಾದ್ (SRH) ನ ಮುಖ್ಯ ಕೋಚ್ ಕೂಡ ಆಗಿದ್ದಾರೆ.
ಹೈದರಾಬಾದ್ ತಂಡದ ಪ್ರಮುಖ ಕೋಚ್ ಆಗಿರುವ ಡೇನಿಯಲ್ ಅವರ ಪಾತ್ರಕ್ಕೆ ನಾವು ಬೆಂಬಲಿಸುತ್ತೇವೆ. ಐಪಿಎಲ್ ಹರಾಜಿಗೆ ಹೋಗುವ ಮೊದಲು ಅವರು ಮೊದಲ ಟೆಸ್ಟ್ ಗೆ ಬೇಕಾದ ಎಲ್ಲಾ ತಯಾರಿ ಮಾಡಲಿದ್ದಾರೆ. ಬಾರ್ಡರ್ ಗಾವಸ್ಕರ್ ಟ್ರೋಫಿಯ ಉಳಿದ ಪಂದ್ಯಗಳಿಗೆ ಅವರು ಲಭ್ಯರಿರುತ್ತಾರೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ವಕ್ತಾರ ಹೇಳಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದ ಡೆವಲಪ್‌ಮೆಂಟ್ ಕೋಚ್ ಲಾಚ್ಲಾನ್ ಸ್ಟೀವನ್ಸ್ ಅವರು ವೆಟೋರಿ ಅವರ ಸ್ಥಾನ ತುಂಬಲಿದ್ದಾರೆ. ವೆಟೋರಿ ಮಾತ್ರವಲ್ಲದೆ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರು ಕೂಡಾ ಬಿಜಿಟಿ ಸರಣಿಯಲ್ಲಿ ಕಾಮೆಂಟರಿಯನ್ನು ಐಪಿಎಲ್ ಹರಾಜಿನ ಕಾರಣದಿಂದ ತಪ್ಪಿಸಿಕೊಳ್ಳಲಿದ್ದಾರೆ. ರಿಕಿ ಪಾಂಟಿಂಗ್ ಅವರು ಪಂಜಾಬ್ ಕಿಂಗ್ಸ್ ಕೋಚ್ ಆಗಿದ್ದರೆ, ಜಸ್ಟಿನ್ ಲ್ಯಾಂಗರ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಕೋಚ್ ಆಗಿದ್ದಾರೆ.