Advertisement
ಅಂಡಾರು ಮಲ್ಲಡ್ಕ ಪೇಟೆಯಿಂದ ಕಾಡುಹೊಳೆ ಜಂಕ್ಷನ್ ವರೆಗಿನ ಡಾಮಾರು ರಸ್ತೆಯಲ್ಲಿ ಡಾಮಾರು ಹುಡುಕಬೇಕಾದ ಸ್ಥಿತಿಯಾದರೆ. ಕಾಂಕ್ರೀಟ್ ಹಾಕಿದ ಭಾಗದಲ್ಲಿ ಸಿಮೆಂಟ್ ಹುಡುಕಿ ನೋಡಬೇಕಾಗಿದೆ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ಸಂಚಾರ ನಡೆಸುವುದು ಕಂಬಳದ ಗದ್ದೆಯಲ್ಲಿ ಓಡಿದಂತಾಗುತ್ತದೆ. ಈ ರಸ್ತೆ ಮುಖಾಂತರ ಸಂಚಾರಿಸುವ ವಿದ್ಯಾರ್ಥಿಗಳು ಕೆಸರಿನ ಬಟ್ಟೆಯಲ್ಲಿಯೇ ಶಾಲೆಗೆ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಕಾಡುಹೊಳೆಯಿಂದ ಕೊಂದಲಿಕೆ ವರೆಗೆ ದಶಕಗಳ ಹಿಂದೆ ಕಾಂಕ್ರೀಟ್ ಕಾಮಗಾರಿ ನಡೆದಿತ್ತಾದ್ದರೂ ರಸ್ತೆ ಒಂದೇ ತಿಂಗಳಿನಲ್ಲಿ ಹದಗೆಟ್ಟಿತ್ತು. ಆಗಲೇ ಗ್ರಾಮಸ್ಥರು ಕಳಪೆ ಕಾಮಾಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅಂದಿನಿಂದ ಇಂದಿನವರೆಗೆ ಕಾಂಕ್ರೀಟ್ ರಸ್ತೆಯ ಹೊಂಡಗಳ ಭಾಗಕ್ಕೆ ಡಾಮಾರು ಲೇಪನ ನಡೆಯುತ್ತಲೇ ಇದೆ.
Related Articles
Advertisement
ಗ್ರಾಮಸ್ಥರ ಮನವಿಗೆ ಬೆಲೆ ಇಲ್ಲಅಂಡಾರು ಗ್ರಾಮಸ್ಥರು ಕಳೆದ ಎರಡು ದಶಕಗಳಿಂದ ರಸ್ತೆ ಮರು ಡಾಮಾರಿಕರಣ ಮಾಡುವಂತೆ ನಿರಂತರ ಮನವಿ ಮಾಡಿದರು ಜನಪ್ರತಿನಿಧಿಗಳ ಸ್ಪಂದನೆ ಇಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಅಂಡಾರು ಗ್ರಾಮದ ಕಾರಣೀಕದ ಕೊಡಮಣಿತ್ತಾಯ ದೈವಸ್ಥಾನ, ಗರಡಿ, ಬೊಬರ್ಯಕಟ್ಟೆ, ರಾಮಾಂಜನೇಯ ಭಜನಾ ಮಂದಿರ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಇದಾಗಿದ್ದು ಭಕ್ತರು ಸಂಕಷ್ಟ ಪಡುವಂತಾಗಿದೆ. ಅಂಡಾರು ಹಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ, ಮುನಿಯಾಲು ಪಬ್ಲಿಕ್ ಸ್ಕೂಲ್ ಗೆ ವಿದ್ಯಾರ್ಥಿಗಳು ಹೊಂಡ ಗುಂಡಿಗೆ ಇಳಿದೆ ತೆರಳ ಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಕೇವಲ ಅಂಡಾರು ಗ್ರಾಮಸ್ಥರಿಗೆ ಸೀಮಿತವಾಗಿಲ್ಲ ಈ ರಸ್ತೆ. ಕೊಲ್ಲೂರಿನಿಂದ ಹೆಬ್ರಿಯಾಗಿ ಧರ್ಮಸ್ಥಳ ತಲುಪಲು ಬಹಳ ಹತ್ತಿರದ ರಸ್ತೆ ಇದಾಗಿದ್ದು, ಹಿಂದೆ ನೂರಾರು ವಾಹನಗಳು ಈ ರಸ್ತೆ ಮೂಲಕವೇ ಸಂಚಾರ ನಡೆಸುತ್ತಿದ್ದವು. ಇದರಿಂದಾಗಿ ಅಂಡಾರು ಗ್ರಾಮೀಣ ಭಾಗದ ಸಣ್ಣಪುಟ್ಟ ಅಂಗಡಿಯವರಿಗೂ ಸ್ವಲ್ಪ ಮಟ್ಟಿನ ಆದಾಯ ಬರುತ್ತಿತ್ತು, ಆದರೆ ಹದಗೆಟ್ಟ ರಸ್ತೆಯಿಂದಾಗಿ ಹೊರಗಿನ ಯಾವ ವಾಹನವು ಈ ರಸ್ತೆಯಲ್ಲಿ ಬರುತ್ತಿಲ್ಲ. ಗ್ರಾಮೀಣ ಭಾಗ ಮತ್ತಷ್ಟು ಕುಗ್ರಾಮವಾಗುವಂತೆ ಮಾಡಿದೆ ಈ ರಸ್ತೆ. ಮಳೆಗಾಲದಲ್ಲಿ ಮಳೆ ನೀರು ರಸ್ತೆಯಲ್ಲಿಯೇ ಹರಿಯುವುದರಿಂದ ರಸ್ತೆಯ ಹೊಂಡಗಳಲ್ಲಿ ನೀರು ನಿಂತು ಕೆಸರಿನಿಂದ ಕೂಡಿರುತ್ತದೆ, ಬೇಸಿಗೆಯಲ್ಲಿ ಧೊಳಿನಿಂದ ಸಂಚಾರ ನಡೆಸುವುದೇ ಅಸಾಧ್ಯವಾಗಿದೆ. ಪ್ರತಿ ವರ್ಷ ಕೆಸರು ಧೂಳಿನಿಂದಲೇ ಸಂಚಾರ ನಡೆಸ ಬೇಕಾಗಿದ್ದು ಇದಕ್ಕೆ ಕೊನೆ ಯಾವಾಗ ಎಂದು ಗ್ರಾಮಸ್ಥರು ಆಕ್ರೋಶಿತರಾಗಿ ನುಡಿಯುತ್ತಾರೆ. ಟೆಂಡರ್ ನಡೆದು ಒಂದೂವರೆ ವರ್ಷ
ಈ ರಸ್ತೆ ಅಭಿವೃದ್ಧಿಗೆ 2023 ರ ಮಾರ್ಚ್ 28 ರಂದು ಅಂದಿನ ಬಿಜೆಪಿ ಸರಕಾರದಿಂದ ಟೆಂಡರ್ ಪ್ರಕ್ರೀಯೆ ನಡೆಸಿ ಬೆಂಗಳೂರಿನ ಗುತ್ತಿಗೆದಾರರಿಗೆ ವಾರಾಹಿ ಯೋಜನೆಯಡಿ ಟೆಂಡರ್ ವಹಿಸಲಾಗಿತ್ತು. ಅಲ್ಲದೆ 5 ತಿಂಗಳ ಒಳಗೆ ಕಾಮಾಗಾರಿ ಪೂರ್ಣಗೊಳಿಸುವಂತೆ ಸೂಚಿಸಿತ್ತು. ಆದರೆ ಚುನಾವಣೆ ನಡೆದು ಕಾಂಗ್ರೆಸ್ ನೇತೃತ್ವದ ಸರಕಾರ ಆಡಳಿತಕ್ಕೆ ಬಂದು ಅನುದಾನ ಇಲ್ಲದ ಹಾಗೂ ಭೂಸ್ಬಾಧೀನ ಸಮಸ್ಯೆ ಇರುವ ಟೆಂಡರ್ ಆದ ಕಾಮಾಗಾರಿಯನ್ನು 2024 ರ ಮೇ. 23 ರಂದು ತಡೆ ಹಿಡಿದ ಪರಿಣಾಮ ಈ ರಸ್ತೆ ಕಾಮಾಗಾರಿ ನಡೆಯದೆ ಗ್ರಾಮಸ್ಥರು ಪರದಾಡುವಂತಾಗಿದೆ. ರಾಜಕೀಯದಾಟಕ್ಕೆ ನಾಗರಿಕರು ಹೈರಾಣ
ಕಳೆದ ಎರಡು ದಶಕಗಳಿಂದ ಕಾಂಗ್ರೇಸ್, ಬಿಜೆಪಿ ರಾಜಕೀಯ ಪಕ್ಷಗಳ ಮೇಲಾಟದಿಂದಾಗಿ ರಸ್ತೆ ಅಭಿವೃದ್ಧಿಗೊಂಡಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ರಾಜಕೀಯ ಪಕ್ಷಗಳ ಹಗ್ಗಜಗ್ಗಾಟದ ನೇರ ಪರಿಣಾಮ ಗ್ರಾಮಸ್ಥರು ಅನುಭವಿಸುವಂತಾಗಿದೆ. 5 ಕೋಟಿ ರೂ. ವೆಚ್ಚದ ಕಾಮಗಾರಿ
ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಡಾರು ಕೊಡಮಣಿತ್ತಾಯ ರಸ್ತೆ, ಬೈಲೂರು ಬೀದಿ ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ, ನಿಟ್ಟೆ ಕುಡಾರಿಕ್ಕು ರಸ್ತೆ, ಕಲ್ಕಾರು ಪಳ್ಳಿ ರಸ್ತೆ, ಕಾಂತವರ ಅಂಬೊಡಿ ರಸ್ತೆ ಸೇರಿದಂತೆ ಒಟ್ಟು 5 ರಸ್ತೆಗೆ ತಲಾ ಒಂದು ಕೋಟಿಯಂತೆ 5 ಕೋಟಿ ರೂ ವೆಚ್ಚದ ಕಾಮಾಗಾರಿಗೆ ಟೆಂಡರ್ ನಡೆದಿತ್ತು.
ಅಂಡಾರು ಗ್ರಾಮಸ್ಥರು ಸಂಚಾರಕ್ಕೆ ಪಡುತ್ತಿರುವ ಬವಣೆ ಅರಿತು ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು ಮೊದಲ ಆದ್ಯತೆಯಾಗಿ ಈ ರಸ್ತೆ ಅಭಿವೃದ್ಧಿಪಡಿಸುವಂತೆ ನಾಗರಿಕರು ಮನವಿ ಮಾಡಿದ್ದಾರೆ. ವಾರಕ್ಕೆ 2 ಬಾರಿಯಾದರೂ ರಿಪೇರಿ
ರಸ್ತೆ ಹದಗೆಟ್ಟು ಬಹಳ ವರ್ಷಗಳೆ ಕಳೆದಿವೆ. ಆದರೆ ರಸ್ತೆ ಅಭಿವೃದ್ಧಿ ಆಗುತ್ತಿಲ್ಲ. ಪ್ರತೀ ಚುನಾವಣೆ ಸಂದರ್ಭ ಬಾರಿ ಸದ್ದು ಮಾಡುವ ಈ ರಸ್ತೆ ಅನಂತರ ಮರೆತೇ ಬಿಡುತ್ತಾರೆ. ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿದೆ. ಈ ರಸ್ತೆಯಲ್ಲಿ ಅನಿವಾರ್ಯವಾಗಿ ಸಂಚಾರ ಮಾಡುವ ಆಟೋ, ಟೆಂಪೋಗಳು ವಾರಕ್ಕೆ ಕನಿಷ್ಠ ಎರಡು ಬಾರಿಯಾದರೂ ರಿಪೇರಿಗೆ ತೆರಳಬೇಕಾಗುತ್ತದೆ.
– ದೀಪಕ್ ರಾವ್, ಟೆಂಪೋ ಮಾಲಕರು, ಅಂಡಾರು ಸಂಸದರಿಗೆ ಮನವಿ
ಕೇಂದ್ರ ಸರಕಾರದ ಗ್ರಾಮಸಡಕ್ ಯೋಜನೆಯಡಿ ರಸ್ತೆಗೆ ಅನುದಾನ ಒದಗಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಮಾಡಲಾಗಿದೆ.
– ಸಂತೋಷ್ ಕುಮಾರ್, ಅಧ್ಯಕ್ಷರು ವರಂಗ ಗ್ರಾಮ ಪಂಚಾಯತ್ ಮಳೆ ಕಡಿಮೆಯಾದರೆ ಕಾಮಗಾರಿ
ಅಂಡಾರು ಕಾಡಹೋಳೆ ರಸ್ತೆಯ ತೀರಾಹದಗೆಟ್ಟ ಸುಮಾರು ಒಂದು ಕಿ.ಮೀ ಭಾಗಕ್ಕೆ ಪ್ರಕೃತಿ ವಿಕೋಪದ ಅನುದಾನ 4.50 ಲಕ್ಷ ರೂ. ವೆಚ್ಚದಲ್ಲಿ ಮಳೆ ಕಡಿಮೆ ಆದ ತತ್‌ಕ್ಷಣ ಡಾಮರು ಕಾಮಗಾರಿ ನಡೆಸಲಾಗುವುದು.
– ಮನೋಹರ ಪಾಟೀಲ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಾರ್ಕಳ -ಜಗದೀಶ್ ಅಂಡಾರು