Advertisement

Ajekar ಬಸ್‌ ತಂಗುದಾಣ ನಾಯಿಗಳ ವಾಸಸ್ಥಾನ; ರಾತ್ರಿ-ಹಗಲು ಅಲ್ಲೇ ವಾಸ

02:52 PM Oct 18, 2024 | Team Udayavani |

ಅಜೆಕಾರು: ಗ್ರಾಮೀಣ ಭಾಗವಾಗಿದ್ದು ವೇಗವಾಗಿ ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಅಜೆಕಾರು ಪೇಟೆ ಜನ ಸಂಚಾರದ ಪ್ರಮುಖ ಸ್ಥಳವಾಗಿದೆ. ಅಜೆಕಾರು ಪೇಟೆಯ ಹೃದಯ ಭಾಗದಲ್ಲಿರುವ ಬಸ್‌ ತಂಗುದಾಣದಲ್ಲಿ ಹತ್ತಾರು ಬೀದಿ ನಾಯಿಗಳು ರಾತ್ರಿ ಹಗಲು ವಾಸ ಮಾಡುತ್ತಿದ್ದು ಪ್ರಯಾಣಿಕರಿಗೆ ಸಂಕಷ್ಟ ಬಂದೊ ದಗಿದೆ. ಇತ್ತೀಚೆಗೆ ಇಬ್ಬರು ಪ್ರಯಾಣಿಕರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ.

Advertisement

ಅಜೆಕಾರು ಪೇಟೆಯು ಕಾರ್ಕಳ ಹೆಬ್ರಿ ರಾಜ್ಯ ಹೆದ್ದಾರಿ ಹಾಗೂ ಅಜೆಕಾರು ಮಿಯಾರು ರಾಜ್ಯ ಹೆದ್ದಾರಿ ಸಂಗಮ ಸ್ಥಳ ವಾಗಿದ್ದು ಗ್ರಾಮೀಣ ಭಾಗದ ಸಾವಿರಾರು ಜನ ನಿತ್ಯ ಸಂಚಾರ ಮಾಡುತ್ತಾರೆ. ಬಸ್‌ ತಂಗುದಾಣ ಬೀದಿ ನಾಯಿಗಳ ವಾಸ ಸ್ಥಾನವಾಗಿರುವುದರಿಂದ ಪ್ರಯಾಣಿಕರು ರಸ್ತೆ ಅಂಚಿನಲ್ಲಿಯೇ ಬಿಸಿಲು, ಮಳೆಗೆ ನಿಲ್ಲಬೇಕಾದ ಸ್ಥಿತಿಯಾಗಿದೆ.

ಅಂಡಾರು, ಶಿರ್ಲಾಲು, ಹೆರ್ಮುಂಡೆ, ಕಡ್ತಲ, ಎಣ್ಣೆಹೊಳೆ ಗ್ರಾಮಿಣ ಭಾಗದ ಜನರು ತಮ್ಮ ನಿತ್ಯ ವ್ಯವಹಾರಕ್ಕೆ ಅಜೆಕಾರು ಪೇಟೆಯನ್ನೇ ಅವಲಂಬಿಸಿದ್ದು ಖಾಸಗಿ ಬಸ್‌ಗಳ ಮೂಲಕ ಸಂಚರಿಸುವವರಾಗಿದ್ದಾರೆ. ಬಸ್‌ ಬರುವ ಸಮಯದವರೆಗೆ ವಿಶ್ರಾಂತಿ ಪಡೆಯಲು ಸ್ಥಳೀಯಾಡಳಿತ ನಿರ್ಮಿಸಿದ ಪ್ರಯಾಣಿಕರ ವಿಶ್ರಾಂತ ಸ್ಥಳ ಬೀದಿ ನಾಯಿಗಳ ವಾಸ ಸ್ಥಾನವಾಗುತ್ತಿರುವ ಬಗ್ಗೆ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ನೂರಾರು ವಿದ್ಯಾರ್ಥಿಗಳು ಈ ಬಸ್‌ತಂಗುದಾಣ ಮೂಲಕವೇ ತಮ್ಮ ಗ್ರಾಮೀಣ ಭಾಗದ ಊರುಗಳಿಗೆ ತೆರಳಬೇಕಾಗಿದ್ದು ಬೀದಿ ನಾಯಿಗಳು ಯಾವುದೇ ಸಂದರ್ಭದಲ್ಲಿ ದಾಳಿ ಮಾಡುವ ಭೀತಿ ಎದುರಾಗಿದೆ.

ಬಸ್‌ ತಂಗುದಾಣವನ್ನು ವಾಸಸ್ಥಾನವಾಗಿ ಮಾಡಿಕೊಂಡಿರುವ ನಾಯಿಗಳನ್ನು ತೆರವು ಮಾಡಿ ಪ್ರಯಾಣಿಕರ ಸಂಕಷ್ಟ ಪರಿಹಾರ ಮಾಡುವಂತೆ ನಾಗರಿಕರು ಮನವಿ ಮಾಡಿದ್ದಾರೆ.

Advertisement

ತೆರವಿಗೆ ಕಾನೂನಿನಲ್ಲಿ ಅವಕಾಶವಿಲ್ಲ
ಈಗಾಗಲೇ ಈ ಭಾಗದಲ್ಲಿರುವ ಬೀದಿನಾಯಿಗಳಿಗೆ ರೇಬಿಸ್‌ ವಿರೋಧಿ ಚುಚ್ಚು ಮದ್ದು ನೀಡಲಾಗಿದ್ದು, ತ್ವರಿತವಾಗಿ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲಾಗುತ್ತದೆ. ಆದರೆ ನಾಯಿಗಳನ್ನು ತೆರವು ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ .
-ತಿಲಕ್‌ ರಾಜ್, ಪಿಡಿಒ, ಮರ್ಣೆ ಗ್ರಾ.ಪಂ.

ವಾಹನ ಸವಾರರಿಗೆ ಸಂಕಷ್ಟ
ಬೀದಿ ನಾಯಿಗಳ ಹಾವಳಿಯಿಂದಾಗಿ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕಿಡಾಗುತ್ತಿದ್ದಾರೆ. ರಾತ್ರಿ ಸಮಯದಲ್ಲಿ ವಾಹನ ಚಲಾಯಿಸಿಕೊಂಡು ಬರುವ ವಾಹನ ಸವಾರರ ಮೇಲೂ ನಾಯಿಗಳು ದಾಳಿ ನಡೆಸಿದ ಘಟನೆ ಅಜೆಕಾರು ಪೇಟೆಯಲ್ಲಿ ನಡೆದಿದೆ. ಮುಂಜಾನೆ ಅಂಗಡಿ, ಮನೆಗಳಿಗೆ ಪತ್ರಿಕೆ, ಹಾಲು ಹಾಕುವ ಮಕ್ಕಳ ಮೇಲು ದಾಳಿ ನಡೆಸಲು ಮುಂದಾಗುವ ಈ ನಾಯಿಗಳು ಸ್ಥಳೀಯರಿಗೆ ಕಂಟಕವಾಗಿ ಪರಿಣಮಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next