ಬೆಂಗಳೂರು : ಬಿಜೆಪಿಯಿಂದ ಜನಸಾಮಾನ್ಯರಿಗೆ 1,25,407.20 ಕೋಟಿ ರೂ. ಬೆಲೆ ಏರಿಕೆ ಉಡುಗೊರೆ ನೀಡಿದ್ದಾರೆ, ಚುನಾವಣೆಯ ಗೆಲುವು ಲೂಟಿಗೆ ಸಿಕ್ಕ ಪರವಾನಿಗೆ ಎಂದು ಬಿಜೆಪಿ ಸರಕಾರ ಭಾವಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,’ದುಬಾರಿ’ಯಿಂದ ಪ್ರತಿಯೊಂದು ಮನೆಯಲ್ಲಿ ಬದುಕು ದುಸ್ತರವಾಗಿದೆ. ಆದರೆ ಬಿಜೆಪಿ ಹಾಗೂ ಮೋದಿ ಸರ್ಕಾರವು ನಿತ್ಯವೂ ‘ದುಬಾರಿ’ಯನ್ನು ಸಂಭ್ರಮಿಸುವ ಮೂಲಕ ಜನರ ಜೀವನವನ್ನು ಅಣಕ ಮಾಡುತ್ತಿದೆ ಎಂದು ಆರೋಪಿಸಿದರು.
ದೇಶದಾದ್ಯಂತ ಪ್ರತಿಭಟನೆ ಮಾಡಿದ ಕಾರಣಕ್ಕೆ ಮೋದಿ ಸರ್ಕಾರ ದೇಶದ ಅನ್ನದಾತನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. 50 ಕೆ.ಜಿಯ ಡಿಎಪಿ ರಸಗೊಬ್ಬರ ಚೀಲದ ಬೆಲೆ 150 ರೂ. ಹೆಚ್ಚಾಗಿದ್ದು, ಅದರ ಬೆಲೆ 1350 ರೂ. ಆಗಿದೆ. ಇನ್ನು ಚೀಲಕ್ಕೆ ಹೆಚ್ಚುವರಿಯಾಗಿ 3 ರೂ. ದರ ಏರಿಸಲಾಗಿದೆ. ದೇಶದ ರೈತರು 1.20 ಕೋಟಿ ಟನ್ ಗಳಷ್ಟು ಡಿಎಪಿ ರಸಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹೀಗಾಗಿ ರೈತರ ಮೇಲೆ ಹೆಚ್ಚುವರಿಯಾಗಿ 3600 ಕೋಟಿ ರೂ. ಹೊರೆ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
50 ಕೆ.ಜಿಯ ಎನ್ ಕೆಪಿಎಸ್ ಚೀಲದ ದರ 110 ರೂ ಹೆಚ್ಚಳ ಮಾಡಲಾಗಿದ್ದು, 1290ರಿಂದ 1400 ರೂ. ಆಗಿದೆ. ಇದರಿಂದ ರೈತರಿಗೆ ಹೆಚ್ಚುವರಿಯಾಗಿ 3,740 ಕೋಟಿ ರೂ. ಹೊರೆಯಾಗಲಿದೆ ಎಂದರು.
ಭಾರತ ಸರ್ಕಾರದ ಪೆಟ್ರೋಲಿಯಂ ಯೋಜನಾ ಹಾಗೂ ವಿಶ್ಲೇಷಣಾ ಘಟಕದ ಪ್ರಕಾರ ದೇಶದಲ್ಲಿ 2020-21ರಲ್ಲಿ ಸುಮಾರು 27,384 ಸಾವಿರ ಮೆಟ್ರಿಕ್ ಟನ್ ಗಳಷ್ಟು ಪೆಟ್ರೋಲ್ ಬಳಕೆಯಾಗಿದೆ. ಈಗ 140.50 ರೂ. ಬೆಲೆ ಏರಿಕೆಯಿಂದ ದೇಶದ ಜನರ ಮೇಲೆ ಸುಮಾರು 27,095 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ ಎಂದು ಕಳವಳ ವ್ಯಕ್ತಪಡಿಸಿದರು.