ವಿಜಯಪುರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ವಿರುದ್ಧ ಅಖೀಲ ಭಾರತ ಕಾರ್ಮಿಕರ ಪ್ರತಿಭಟನೆ ಕರೆ ಮೇರೆಗೆ ಸೋಮವಾರ ವಿಜಯಪುರ ಜಿಲ್ಲೆಯಲ್ಲಿ ಕಾರ್ಮಿಕರು ಆನ್‌ಲೈನ್‌ನಲ್ಲಿ ಪ್ರತಿಭಟನೆ ನಡೆಸಿದರು.
ಎಐಯುಟಿಯುಸಿ ಸಂಘಟನೆಯ ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರು, ಹಾಸ್ಟೇಲ್ ನೌಕರರು ಆನ್‌ಲೈನ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶಿಕ್ಷಣ ನೀತಿ ಜನ ವಿರೋ ಧಿ ಹಾಗೂ ಶಿಕ್ಷಣ ವಿರೋ ಧಿ ನೀತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ದೇಶ ಕೋವಿಡ್ ವಿರುದ್ಧ ಹೋರಾಡುತ್ತಿರುವ ಸಮಯ ದುರುಪಯೋಗ ಮಾಡಿಕೊಂಡು ರಾಷ್ಟ್ರೀಯ ಶಿಕ್ಷಣ ನೀತಿ-2020 ದೇಶದ ಮೇಲೆ ಹೇರಲು ಹೊರಟಿದೆ. ಈ ರಾಷ್ಟ್ರೀಯ ಶಿಕ್ಷಣ ನೀತಿ ಇಡಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ, ಸರಕು ಮಾಡುತ್ತದೆ. ಸಾರ್ವಜನಿಕ ಶಿಕ್ಷಣ, ತರಭೇತಿ, ಸಂಶೋಧನೆ ಸಂಸ್ಥೆಗಳನ್ನು ಲಾಭ ಮಾಡಿಕೊಳ್ಳುವ ಕಾರ್ಪೋರೆಟ್ ಮನೆತನಗಳಿಗೆ ಒಪ್ಪಿಸುವ ಹುನ್ನಾರವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವೋದಯದ ಹರಿಕಾರರು, ಸ್ವಾತಂತ್ರ ಹೋರಾಟಗಾರರು ಎತ್ತಿ ಹಿಡಿದ ಜನತಾಂತ್ರಿಕ, ವೈಜ್ಞಾನಿಕ ಮತ್ತು ಧರ್ಮ ನಿರಪೇಕ್ಷ ಶಿಕ್ಷಣವನ್ನು ಗಾಳಿಗೆ ತೂರಿ ಶಿಕ್ಷಣ ಖಾಸಗೀಕರಣ, ವ್ಯಾಪಾರೀಕರಣ ಹಾಗೂ ಕೋಮುವಾದೀಕರಣ ಮಾಡುವ ಹೀನ ಪಿತೂರಿಯಿಂದಲೇ ಅತ್ಯಂತ ಅಪ್ರಜಾಸತ್ತಾತ್ಮಕ ರೀತಿಯಲ್ಲಿ ನೂತನ ಶಿಕ್ಷಣ ನೀತಿ ಜಾರಿಗೆ ತರಲು ಹೋರಟಿದೆ ಎಂದು ಹರಿಹಾಯ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ನೀತಿ ಬಡ, ದುಡಿಯುವ ಜನರ ಮಕ್ಕಳಿಗೆ ಉನ್ನತ ಶಿಕ್ಷಣ ಕೈಗೆಟುಕದೆ ದುಬಾರಿಯಾಗಿದೆ. ಕೇವಲ ಕೈಗಾರಿಕೆ, ಕಚೇರಿಗಳಲ್ಲಿ ದುಡಿಯಲು ಬೇಕಾಗುವಷ್ಟು ವೃತ್ತಿ ಶಿಕ್ಷಣ ನೀಡುವ, ಫಿಟ್ಟರ್, ಹೆಲ್ಪರ್ ಗಳಂತಗಹ ಚಾಕರಿ ಮಾಡುವ ವಿದ್ಯೆ ಮಾತ್ರ ನೀಡಲು ಉದ್ದೇಶಿಸಲಾಗಿದೆ. ಹಳೆಯ ಮೌಡ್ಯ ಬಿತ್ತುವ, ಕೋಮುವಾದಿ ವಿಚಾರಗಳನ್ನು ನಮ್ಮ ಮಕ್ಕಳ ಮನಸ್ಸಿನಲ್ಲಿ ಬಿತ್ತಿ ಕುರುಡು ರಾಷ್ಟ್ರಭಕ್ತಿ ಮೂಡಿಸಿ ,ಯಂತ್ರ ಮಾನವರನ್ನಾಗಿ ಮಾಡುವ ಹುನ್ನಾರ ಇದರಲ್ಲಿದೆ ಎಂದು ದೂರಿದರು.
ಸರ್ವ ಜನ ವಿಭಾಗವು ಸೇರಿದಂತೆ ವಿಶಾಲ ತಳಹದಿ ಮೇಲೆ ಜನ ಹೋರಾಟವನ್ನು ಬೆಳೆಸಲು ಎಲ್ಲ ದುಡಿಯುವ ಜನರು ಮುಂದೆ ಬರಬೇಕು. ಈ ಕರಾಳ ನೀತಿ ವಿರುದ್ಧ ಶಿಕ್ಷಣ ಉಳಿಸಿ ಸಮಿತಿ ಪ್ರತಿಭಟನಾ ಸಪ್ತಾಹ ನಡೆಸಲು ದೇಶದ ವಿವಿಧ ವಿಭಾಗದ ಜನರಿಗೆ ಕರೆ ನೀಡಿತ್ತು. ಇದೀಗ ಕಾರ್ಮಿಕರ ಪ್ರತಿಭಟನೆ ದಿನ ಆಚರಿಸಲು ಕರೆ ನೀಡಿದೆ. ದೇಶದ ಪ್ರಗತಿಪರರು, ಶಿಕ್ಷಣ ತಜ್ಞರು, ಸಾಹಿತಿಗಳು, ವಿಜ್ಞಾನಿಗಳು ಶಿಕ್ಷಣ ಉಳಿಸಿ ಸಮಿತಿ ಮೂಲಕ ಹೋರಾಟ ನಡೆಸುತ್ತಿದ್ದಾರೆ ಎಂದರು. ಎಐಯುಟಿಯುಸಿ ಜಿಲ್ಲಾಧ್ಯಕ್ಷ ಎಚ್.ಟಿ. ಮಲ್ಲಿಕಾರ್ಜುನ, ಕಾರ್ಯದರ್ಶಿ ಸುನೀಲ ಸಿದ್ರಾಮಶೆಟ್ಟಿ, ಮಹಾದೆವಿ ಧರ್ಮಶೆಟ್ಟಿ, ಕಾಶಿಬಾಯಿ ಜನಗೊಂಡ, ಲಕ್ಷ್ಮೀ ಲಕ್ಷಟ್ಟಿ, ನಿಂಗಮ್ಮ ಮಠ, ಭಾರತಿ ದೇವಕತೆ, ಅಂಬಿಕಾ ಒಳಸಂಗ, ಜಿ.ಟಿ. ಕಾಶಿಬಾಯಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.