Advertisement

ಬೊಂದೇಲ್‌ನ ಏರ್‌ಪೋರ್ಟ್‌ ರಸ್ತೆಯಲ್ಲಿ  ಸ್ವಚ್ಛತಾ  ಅಭಿಯಾನ

10:29 AM Jul 09, 2018 | |

ಮಹಾನಗರ: ರಾಮಕೃಷ್ಣ ಮಿಷನ್‌ ನೇತೃತ್ವದ ‘ಸ್ವತ್ಛ ಮಂಗಳೂರು’ ಅಭಿಯಾನದ 39ನೇ ಶ್ರಮದಾನವನ್ನು ಬೊಂದೇಲ್‌ನ ಏರ್‌ಪೋರ್ಟ್‌ ರಸ್ತೆಯಲ್ಲಿ ಆಯೋಜಿಸಲಾಗಿತ್ತು. ಸಂತ ಅಲೋಶಿಯಸ್‌ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಡಾ| ಹರೀಶ್‌ ಜೋಶಿ ಹಾಗೂ ಇನ್ಫೋಸಿಸ್‌ ಉದ್ಯೋಗಿ ಶ್ರೀನಿವಾಸ ಅಮ್ಮಾಡಿ ಅವರು ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು. ಬಾಲಕೃಷ್ಣ ರೈ, ಮಸಾಹಿರೊ, ಸತೀಶ್‌ ಟಿ. ಎಕ್ಕೂರು, ಹಿಮ್ಮತ್‌ ಸಿಂಗ್‌, ಸಂತೋಷ ಸುವರ್ಣ, ದೀಪಕ್‌ ಮೇಲಾಂಟ ಮೊದಲಾದವರು ಉಪಸ್ಥಿತರಿದ್ದರು.

Advertisement

ಡಾ| ಹರೀಶ್‌ ಜೋಶಿ ಮಾತನಾಡಿ, ಪರಿಸರ ಸಂರಕ್ಷಣೆ ಪ್ರತಿಯೋರ್ವನ ಕರ್ತವ್ಯ. ಪ್ರಕೃತಿಯಿಂದ ಸಕಲವನ್ನೂ ಪಡೆಯುವ ಅದನ್ನು ಹಾಳು ಮಾಡದೇ ರಕ್ಷಿಸಬೇಕಿದೆ. ಪ್ರಕೃತಿಯ ನಾಶದಿಂದ ವಿಕೃತಿಯತ್ತ ಸಾಗಿ, ಸಂಸ್ಕೃತಿ ನಾಶಮಾಡುವ ಪರಕಾಷ್ಠೆ ತಲುಪುತ್ತಿರುವುದು ಖೇದದ ಸಂಗತಿ. ಈ ದಿಸೆಯಲ್ಲಿ ಸ್ವಚ್ಛ ಮಂಗಳೂರು ಅಭಿಯಾನ ಸ್ವಚ್ಛ ಸುಂದರ ಪರಿಸರವನ್ನು ರಕ್ಷಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ ಎಂದರು.

ಬೊಂದೇಲ್‌ನ ಲೋಕೊಪಯೋಗಿ ಇಲಾಖೆಯ ಕಚೇರಿ ಸಮೀಪದ ಅಶ್ವತ್ಥಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಶ್ರಮದಾನ ಮಾಡಲಾಯಿತು. ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ನೂತನವಾಗಿ ನಿರ್ಮಿಸಲಾದ ಬಸ್‌ ಪ್ರಯಾಣಿಕರ ತಂಗುದಾಣದ ಸುತ್ತಮುತ್ತ ಗುಡಿಸಿ ಸ್ವಚ್ಛಗೊಳಿಸಲಾಯಿತು. ಅನಂತರ ಕಾರ್ಯಕರ್ತರು ಅಭಿಯಾನದ ಪ್ರಧಾನ ಸಂಯೊಜಕ ದಿಲ್‌ರಾಜ್‌ ಆಳ್ವ ಮಾರ್ಗದರ್ಶನದಲ್ಲಿ ಬೇರೆ ಬೇರೆ ತಂಡಗಳಾಗಿ ಏರ್‌ಪೋರ್ಟ್‌ ರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಂಡರು. ಕಾಂಕ್ರೀಟ್‌ ರಸ್ತೆಯ ಮೇಲೆ ಸೇರಿಕೊಂಡಿದ್ದ ಹೊಗೆ ಹಾಗೂ ಮಣ್ಣು ತೆಗೆದರು. ಚರಂಡಿಗಳನ್ನು ಶುಚಿಗೊಳಿಸಿದರು. ಪ್ರಮುಖವಾಗಿ ಮೂಲೆಯೊಂದರಲ್ಲಿ
ಇದ್ದ ತ್ಯಾಜ್ಯ ಹಾಗೂ ಮಣ್ಣಿನ ರಾಶಿಯನ್ನು ತೆರವು ಮಾಡಲಾಯಿತು. ಅಶ್ವತ್ಥ ಕಟ್ಟೆಯ ಮುಂಭಾಗದ ರಸ್ತೆಯ ಬದಿಗಳಲ್ಲಿದ್ದ ಹುಲ್ಲು ಕತ್ತರಿಸಿ ತೆಗೆಯಲಾಯಿತು. ಅನಂತರ ಕಾಲುದಾರಿಯ ಮೇಲೆ ಸೇರಿಕೊಂಡಿದ್ದ ಮಣ್ಣು ತೆಗೆದು ದಾರಿಹೋಕರಿಗೆ ಅನುಕೂಲ ಕಲ್ಪಿಸಿಕೊಡಲಾಯಿತು. ಏರ್‌ ಪೋರ್ಟ್‌ ರಸ್ತೆಯ ಹಲವು ಕಡೆಯಲ್ಲಿ ಹಾಕಿದ್ದ ಬ್ಯಾನರ್‌ ತೆರವು ಕಾರ್ಯಾಚರಣೆ ಮುಂದುವರೆಯಿತು.

ಹಸಿಕಸ-ಒಣಕಸ ನಿರ್ವಹಣೆ
ಸ್ವಚ್ಛ ಮಂಗಳೂರು ಅಭಿಯಾನದ ಕಾರ್ಯಕರ್ತರು ನಗರದ ವಿವಿಧೆಡೆ ಮನೆಗಳಿಗೆ ತೆರಳಿ ಒಣಕಸ ಹಸಿ ಕಸ ಒಣಕಸದ ವಿಂಗಡಣೆ ಹಾಗೂ ಪುನರ್‌ಬಳಕೆ ಮರುಬಳಕೆಗಳ ಮಹತ್ವ ತಿಳಿಸುತ್ತಿದ್ದಾರೆ. ಹಸಿಕಸವನ್ನು ಮಣ್ಣಿನ ಮಡಕೆಯಲ್ಲಿ ಹಾಕಿ ಕಾಂಫೋಸ್ಟ್‌ ತಯಾರಿಸುವ ಸರಳ ವಿಧಾನವನ್ನು ತಿಳಿಸಿಕೊಡಲಾಯಿತು. ಜತೆಗೆ ಮಡಕೆ, ಒಣಕಸವನ್ನು ಸಂಗ್ರಹಿಸಲು ದೊಡ್ಡ ಬ್ಯಾಗ್‌ಗಳನ್ನು ಒದಗಿಸಲಾಗುತ್ತಿದೆ. ಕಸ ತುಂಬಿದ ಬಳಿಕ ತಿಂಗಳಿಗೊಂದು ದಿನ ಮನೆಯಿಂದ ಸಂಗ್ರಹಿಸಿ, ಸಂಗ್ರಹವಾದ ಒಣತ್ಯಾಜ್ಯಕ್ಕೆ ಸೂಕ್ತ ಬೆಲೆ ನೀಡುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಪ್ಪು ಹಾಗೂ ಮಂಗಳಾ ನಗರದ ಕೆಲವೆಡೆ ಮಾಡಲಾಯಿತು. ಅಭಿಷೇಕ್‌ ವಿ. ಎಸ್‌, ರತ್ನಾ ಆಳ್ವ, ಯಶೋದಾ ರೈ ಭಾನುಮತಿ, ತೇಜಸ್ವಿನಿ ಮೊದಲಾದವರು ನೇತೃತ್ವ ವಹಿಸಿದ್ದರು.

ರಾಕೇಶ್‌ ಜಯರಾಮ್‌ ಸುವರ್ಣ, ಪ್ರವೀಣ ಶೆಟ್ಟಿ, ಯೋಗೀಶ್‌ ಕಾಯರ್ತಡ್ಕ, ಪುನೀತ್‌ ಪೂಜಾರಿ, ಸತೀಶ್‌ ಕೆಂಕನಾಜೆ, ಮೋಕ್ಷಿತಾ ಎಚ್‌. ಪಿ. ಭಾಗವಹಿಸಿದ್ದರು. ಈ ಎಲ್ಲ ಕಾರ್ಯಕ್ರಮಗಳಿಗೆ ಎಂಆರ್‌ ಪಿಎಲ್‌ ಸಂಸ್ಥೆ ಹಾಗೂ ನಿಟ್ಟೆ ಸಂಸ್ಥೆಗಳು ಪ್ರಾಯೋಜಕತ್ವ ವಹಿಸಲಾಗಿತ್ತು.

Advertisement

ತ್ಯಾಜ್ಯ ರಾಶಿಗೆ ಮುಕ್ತಿ; ಮಧ್ಯರಾತ್ರಿ ಕಾರ್ಯಾಚರಣೆ
ಕಳೆದ ರವಿವಾರ ಬಿಕರ್ನಕಟ್ಟೆಯಲ್ಲಿ ಶ್ರಮದಾನ ಮಾಡಿ, ತ್ಯಾಜ್ಯದ ರಾಶಿಯನ್ನು ತೆರವು ಮಾಡಲಾಗಿತ್ತು. ಅನಂತರ ಅಲ್ಲಿಯ ಬೀದಿ ಬದಿ ಅಂಗಡಿಗಳಿಗೆ ಸ್ವಚ್ಛತೆ ಅರಿವು ನೀಡಲಾಗಿತ್ತು. ಅಂದಿನಿಂದ ಕಾರ್ಯಕರ್ತರು ಬೆಳಗ್ಗೆ ಹಾಗೂ ಸಂಜೆ ನಿರಂತರವಾಗಿ ಯಾರೂ ತ್ಯಾಜ್ಯ ಸುರಿಯದಂತೆ ಜಾಗ್ರತೆ ವಹಿಸಿ, ಗಸ್ತು ತಿರುಗುತ್ತಿದ್ದರು. ಪರಿಣಾಮವಾಗಿ ತ್ಯಾಜ್ಯ ಬೀಳುವುದು ನಿಂತಿತ್ತು. ಆದರೆ ಖಚಿತ ಮಾಹಿತಿಯ ಮೇರೆಗೆ ಮಧ್ಯರಾತ್ರಿ ಹನ್ನೆರಡು ಗಂಟೆಗೆ ಹೊಟೇಲ್‌ನಿಂದ ತಂದು ಸುರಿದ ತ್ಯಾಜ್ಯವನ್ನು ಅವರಿಂದಲೇ ತೆಗೆಸಿದ ಅಪರೂಪದ ಘಟನೆ ರಾತ್ರಿ ನಡೆಯಿತು. 

ಪದವಿನಂಗಡಿ ಹಾಗೂ ಬೊಂದೇಲ್‌ ಚರ್ಚ್‌ ಮಧ್ಯದಲ್ಲಿರುವ ಕೊರಗಜ್ಜನ ಗುಡಿಯ ಹತ್ತಿರವಿರುವ ಸ್ಥಳವೊಂದರಲ್ಲಿ ತ್ಯಾಜ್ಯದ ರಾಶಿಯನ್ನು ತೆರವುಗೊಳಿಸಿ, ಸ್ವಚ್ಛಗೊಳಿಸಲಾಗಿದೆ. ಸುಮಾ ಕೋಡಿಕಲ್‌, ಚೇತನಾ ಹಾಗೂ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೇ ಶ್ರಮದಾನ ಮಾಡಿದರು. ಸುರೇಶ್‌ ಶೆಟ್ಟಿ ಹಾಗೂ ನಿವೇದಿತಾ ಬಳಗದ ಸದಸ್ಯರು ಸುತ್ತಮುತ್ತಲಿನ ಮನೆ ಮನೆಗೆ ತೆರಳಿ ಸ್ವಚ್ಛತಾ ಜಾಗೃತಿ ಕಾರ್ಯ ಕೈಗೊಂಡರು.

ನೂತನ ಬಸ್‌ ತಂಗುದಾಣ ಲೋಕಾರ್ಪಣೆ 
ಲೋಕೋಪಯೋಗಿ ಕಚೇರಿ ಸಮೀಪದ ಅಶ್ವತ್ಥ ಕಟ್ಟೆ ಬಳಿ ನೂತನವಾಗಿ ಬಸ್‌ ತಂಗುದಾಣ ನಿರ್ಮಾಣ ಮಾಡಲಾಗಿದ್ದು ಇದರ ಲೋಕಾರ್ಪಣೆ ನಡೆಯಿತು. ಪ್ರಯಾಣಿಕರು ಅಶ್ವತ್ಥ ಮರದಡಿ ನಿಂತು ಬಿಸಿಲು-ಮಳೆಗಳಿಂದ ರಕ್ಷಣೆ ಪಡೆಯುತ್ತಿದ್ದುದರಿಂದ ಹಾಗೂ ಸ್ಥಳೀಯರ ಅಪೇಕ್ಷೆಯಂತೆ ಈ ತಂಗುದಾಣವನ್ನು ನಿರ್ಮಿಸಲಾಗಿದೆ. ಈ ಹಿಂದಿನ ಸ್ವಚ್ಛ  ಮಂಗಳೂರು ತಂಗುದಾಣಗಳಂತೆ ಎಲ್ಲ ಸೌಲಭ್ಯಗಳನ್ನು ತಂಗುದಾಣ ಒಳಗೊಂಡಿದೆ. ನಿರ್ಮಾಣ ಕಾರ್ಯದಲ್ಲಿ ಸುಭೋದಯ ಆಳ್ವ, ಉಮಾನಾಥ ಕೋಟೆಕಾರ್‌, ಅಶೋಕ ಸುಬ್ಬಯ್ಯ ವಿಶೇಷ ಪರಿಶ್ರಮವಹಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next