Advertisement
ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳ ತಂಡ ಕಳೆದ ಜನವರಿಯಲ್ಲಿ ಭೇಟಿದ ಬಳಿಕ ಇದೇ ವಿಚಾರವಾಗಿ ಪರಿಶೀಲನೆಗೆ ಈಗ ಭಾರತೀಯ ವಿಮಾನ ಪ್ರಾಧಿಕಾರದ (ಎಎಐ) ಐದು ಹಿರಿಯ ಅಧಿಕಾರಿಗಳ ತಂಡ ಜಿಲ್ಲೆಗೆ ಬರುತ್ತಿದೆ. ಇದರಲ್ಲಿ ಅಭಿಜಿತ್ ಬ್ಯಾನರ್ಜಿ, ಶೈಲೇಂದ್ರ ಮಾರ್ಕ್ ಇಕ್ಕಾ, ತರುಣಕುಮಾರ್ ಗುಪ್ತಾ, ಸಕ್ವಿಬ್ ಆಫ್ತಬ್ ಆಲಂ, ಎನ್. ಮೋಹನ್ ಇದ್ದಾರೆ. ತಂಡದ ಈ ಭೇಟಿ ವಿಮಾನ ನಿಲ್ದಾಣ ಸ್ಥಾಪನೆ ಕನಸು ಶೀಘ್ರ ಸಾಕಾರಗೊಳ್ಳುವ ನಿರೀಕ್ಷೆ ಗರಿಗೆದರಿದೆ. ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ವಿಚಾರವಾಗಿ ಈ ಹಿಂದೆ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳು ಜಿಲ್ಲೆಗೆ ಭೇಟಿ ನೀಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತ್ತು. ಜಿಲ್ಲೆಯಲ್ಲಿ ಏರ್ ಬಸ್ ಮಾದರಿಯ ವಿಮಾನ ನಿಲ್ದಾಣ ಮಾಡುವುದಾದರೆ 500ಎಕರೆ, ಕಾರ್ಗೋ ಮಾದರಿ ವಿಮಾನ ನಿಲ್ದಾಣ ಮಾಡುವುದಾದರೆ 600 ಎಕರೆ, ಎಟಿಆರ್-72 ಮಾದರಿ ವಿಮಾನ ನಿಲ್ದಾಣ ನಿರ್ಮಿಸುವುದಾದರೆ ಕನಿಷ್ಠ 350ಎಕರೆ ಜಮೀನು ಬೇಕಾಗುತ್ತದೆ ಎಂದು ಆಗ ಅಧಿಕಾರಿಗಳು ಮಾಹಿತಿ ನೀಡಿದ್ದರು. ಜತೆಗೆ ಜಿಲ್ಲೆಗೆ ಹತ್ತಿರದಲ್ಲಿ ಶಿವಮೊಗ್ಗ, ಬಳ್ಳಾರಿ, ಹುಬ್ಬಳ್ಳಿಗಳಲ್ಲಿ ವಿಮಾನ ನಿಲ್ದಾಣಗಳು ಇರುವುದರಿಂದ ದಾವಣಗೆರೆಗೆ ಎಟಿಆರ್-72 ಸೂಕ್ತ ಎಂದು ಸಹ ನೀಡಿದ್ದರು.
Related Articles
Advertisement
ಒಂದು ಕಡೆ ವಿಮಾನ ನಿಲ್ದಾಣ ಸ್ಥಾಪನೆಗೆ ಅಧಿಕಾರದಲ್ಲಿರುವವರು ಹೆಚ್ಚಿನ ಆಸಕ್ತಿ ತೋರಿದರೆ, ಮತ್ತೂಂದೆಡೆ ವಿಮಾನ ನಿಲ್ದಾಣ ಸ್ಥಾಪನೆಗೆ ಸರ್ಕಾರಿ ಜಾಗ ಇಲ್ಲವೇ ಬಂಜರು ಭೂಮಿಯನ್ನೇ ಹುಡುಕಿಕೊಳ್ಳಿ, ವಿಮಾನ ನಿಲ್ದಾಣಕ್ಕಾಗಿ ಫಲವತ್ತಾದ ಕೃಷಿ ಭೂಮಿಗೆ ಕೈ ಹಾಕಿ, ರೈತರಿಗೆ ತೊಂದರೆ ಕೊಡಬೇಡಿ ಎಂಬ ಕೂಗು ಸಹ ಎದ್ದಿತ್ತು. ಈ ನಡುವೆ ಜಿಲ್ಲಾಡಳಿತ ವಿಮಾನ ನಿಲ್ದಾಣಕ್ಕಾಗಿ ಯಾವ ಭೂಮಿ ಗುರುತಿಸಿದೆ ಎಂಬುದು ಇನ್ನೂ ಗೌಪ್ಯವಾಗಿಯೇ ಇದ್ದು ಈ ತಂಡದ ಭೇಟಿಯಿಂದ ವಿಮಾನ ನಿಲ್ದಾಣಕ್ಕೆ ಗುರುತಿಸಿದ ಜಾಗೆ ಬಹಿರಂಗಗೊಳ್ಳುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
–ಎಚ್.ಕೆ. ನಟರಾಜ