ಹೆಬ್ಟಾಳ ಮಾರ್ಗದಲ್ಲಿ ನಿತ್ಯ ಉಂಟಾಗುತ್ತಿರುವ ಸಂಚಾರದಟ್ಟಣೆ ಮೂಲ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಗರದ ಕಡೆಗೆ ಬರುವ ಲಕ್ಷಾಂತರ ವಾಹನಗಳು. ಈ ವಾಹನಗಳ ಸಂಚಾರದ ದಿಕ್ಕನ್ನು ಬದಲಿಸಿದರೆ, ಅರ್ಧಕ್ಕರ್ಧ ಸಮಸ್ಯೆಯೇ ಬಗೆಹರಿಯುತ್ತದೆ. ಹೆಬ್ಟಾಳ ಮಾರ್ಗದಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಅಲ್ಲಿ ಗಂಟೆಗೆ 24 ಸಾವಿರ ವಾಹನಗಳು ಸಂಚರಿಸುತ್ತವೆ.
ಇದರಲ್ಲಿ ವಿಮಾನ ನಿಲ್ದಾಣ ಕಡೆಯಿಂದ ಬರುವ ವಾಹನಗಳೇ ಹೆಚ್ಚು. ವಿಮಾನ ನಿಲ್ದಾಣಕ್ಕೆ ಪ್ರತಿ ದಿನ ಎರಡು ಲಕ್ಷ ಪ್ರಯಾಣಿಕರು ಬಂದಿಳಿಯುತ್ತಾರೆ. ಅವರಲ್ಲಿ ಶೇ. 75ರಿಂದ 80ರಷ್ಟು ಜನ ಟ್ಯಾಕ್ಸಿ ಅಥವಾ ಕಾರುಗಳಲ್ಲೇ ನಗರ ಪ್ರವೇಶ ಮಾಡುತ್ತಾರೆ. ಹಾಗಾಗಿ, ಈ ಸಂಚಾರದಟ್ಟಣೆಯನ್ನು ಮಾತ್ರ ಡೈವರ್ಟ್ ಮಾಡುವುದು ಅತ್ಯವಶ್ಯಕ.
ಇದಕ್ಕಾಗಿ ಏನು ಮಾಡಬಹುದು? ಉತ್ತರ ಸರಳ. ಪ್ರಸ್ತುತ ವಿಮಾನ ನಿಲ್ದಾಣದ ರನ್‌ವೇ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ. ಅದನ್ನೇ ಶಾಶ್ವತಗೊಳಿಸಿದರೆ ಸಾಕು. ಇದು ಮೈಲೇನಹಳ್ಳಿ ಮೂಲಕ ಬಾಗಲೂರಿನಿಂದ ಥಣಿಸಂದ್ರ ರಸ್ತೆಯಲ್ಲಿ ಹಾದು, ನಾಗವಾರ ಜಂಕ್ಷನ್ ಸೇರಬಹುದು. ಇದು ಮುಂದೆ ವೈಟ್‌ಫೀಲ್ಡ್‌ಗೂ ಸಂಪರ್ಕ ಕಲ್ಪಿಸುತ್ತದೆ.
ಮತ್ತೂಂದೆಡೆ ಸಾಕಷ್ಟು ವೋಲ್ವೊ ವಾಯು ವಜ್ರ ಬಸ್‌ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಇದರಲ್ಲಿ ಬಹುತೇಕ ಖಾಲಿ ಓಡಾಡುತ್ತಿರುತ್ತವೆ. ಬಸ್ ದರ ಕಡಿಮೆ ಮಾಡಿದರೆ, ಸುಮಾರು 20ರಿಂದ 30 ಸಾವಿರ ಜನ ಈ ಬಸ್‌ಗಳಲ್ಲಿ ತೆರಳುತ್ತಾರೆ. ಈ ಮಾರ್ಗದಲ್ಲಿ ಸಂಚಾರದಟ್ಟಣೆ ತಗ್ಗಿಸಲು ಮೆಟ್ರೋ ಪರ್ಯಾಯ ಅಲ್ಲವೇ ಅಲ್ಲ.
ಯಾಕೆಂದರೆ, ಸುಮಾರು 15ರಿಂದ 20 ಸಾವಿರ ರೂ. ಕೊಟ್ಟು ವಿಮಾನದಲ್ಲಿ ಬಂದಿಳಿಯುವವರ ಪೈಕಿ ಬಹುತೇಕರು ಮೆಟ್ರೋ ಏರುವುದಿಲ್ಲ. ಅವರೆಲ್ಲಾ ಇನ್ನೂ ಒಂದು ಸಾವಿರ ರೂ. ಕೊಟ್ಟು ಕಾರಿನಲ್ಲಿ ನಗರಕ್ಕೆ ಬರುತ್ತಾರೆ. ಹೆಚ್ಚೆಂದರೆ 30 ಸಾವಿರ ಜನ ಈ ಮೆಟ್ರೋ ಬಳಸಬಹುದು. ಇದಕ್ಕಾಗಿ 5 ಸಾವಿರ ಕೋಟಿ ರೂ. ಸುರಿದು ಮೆಟ್ರೋ ನಿರ್ಮಿಸುವುದು ಸಮಂಜಸ ಅನಿಸುವುದಿಲ್ಲ.
* ಆರ್. ಹಿತೇಂದ್ರ, ನಗರ ಸಂಚಾರ ಹೆಚ್ಚುವರಿ ಪೊಲೀಸ್ ಆಯುಕ್ತರು.