Advertisement

ವಿಮಾನ ನಿಲ್ದಾಣ ಕಾಮಗಾರಿ ಶೀಘ್ರ ಪೂರ್ಣ

04:26 PM Apr 26, 2022 | Kavyashree |

ವಿಜಯಪುರ: ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದೆ. ಮೊದಲ ಹಾಗೂ ಎರಡನೇ ಹಂತದ 220 ಕೋಟಿ ರೂ. ಹಾಗೂ ಮೂರನೇ ಹಂತದ 120 ಕೋಟಿ ರೂ. ಕಾಮಗಾರಿ ಸೇರಿದಂತೆ 340 ಕೋಟಿ ರೂ.ನ ಎಲ್ಲ ಕಾಮಗಾರಿಗಳು ಪ್ರಸಕ್ತ ವರ್ಷದ ಡಿಸೆಂಬರ್‌ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಹೀಗಾಗಿ ಜಿಲ್ಲೆಯ ಪ್ರವಾಸಕ್ಕೆ ಆಗಮಿಸುವ ಪ್ರವಾಸಿಗರು ಈ ಬಾರಿಯ ಸಂಕ್ರಾಂತಿಗೆ ವಿಮಾನದಲ್ಲೇ ಐತಿಹಾಸಿಕ ವಿಜಯಪುರ ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.

Advertisement

ಸೋಮವಾರ ಮದಭಾವಿ ಬಳಿ ನಿರ್ಮಾಣ ಹಂತದಲ್ಲಿರುವ ಉದ್ದೇಶಿತ ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲಿಸಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಜಯಪುರ ಎಂದರೆ ಗೋಲಗುಮ್ಮಟ. ಆದರೆ ಇನ್ನು ಗೋಲಗುಮ್ಮಟ ನೋಡಲು ಬರುವಂತೆ ವಿಜಯಪುರ ಜಿಲ್ಲೆಗೆ ಇಲ್ಲಿನ ವಿಮಾನ ನಿಲ್ದಾಣ ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುವ ವಿಶಿಷ್ಟ ವಿನ್ಯಾಸ ಹಾಗೂ ಗರಿಷ್ಠ ಗುಣಮಟ್ಟದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ ಎಂದರು.

2021 ಜನವರಿ 15ರಂದು ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯನ್ನು 220 ಕೋಟಿ ರೂ. ವೆಚ್ಚದಲ್ಲಿ ಎಟಿಆರ್‌-72 ದರ್ಜೆಯ ಎರಡು ಹಂತದ ಯೋಜನೆ ರೂಪಿಸಲಾಗಿತ್ತು. ಬಾಗಲಕೋಟೆ ಭಾಗದಲ್ಲಿ ದ್ರಾಕ್ಷಿ, ಲಿಂಬೆ, ದಳಿಂಬೆ, ಸಪೋಟಾ, ಸೀಬೆ ಹೀಗೆ ವೈವಿಧ್ಯಮಯ ತೋಟಗಾರಿಕೆ ಬೆಳೆ ಬೆಳೆಯುವ ಕಾರಣ ಸರಕು ವಿಮಾನಗಳ ಸರಕು ವಿಮಾನಗಳ ಇಳಿಯುವ-ಹಾರುವ ಸೌಲಭ್ಯ ಬೇಕು ಎಂಬ ಬೇಡಿಕೆ ಹಿನ್ನೆಲೆಯಲ್ಲಿ 120 ಕೋಟಿ ರೂ. ಹೆಚ್ಚುವರಿ ಅನುದಾನದಲ್ಲಿ ಏರಬಸ್‌ 320 ದರ್ಜೆಯ ವಿಮಾನ ಇಳಿಯುವಂತೆ ಮೇಲ್ದರ್ಜೆಗೆ ಏರಿಸಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಮೇಲ್ದರ್ಜೆಗೆ ಏರಿಸಿದ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ 120 ಕೋಟಿ ರೂ. ಹೆಚ್ಚುವರಿ ಅನುದಾನದ ವಿಸ್ತೃತ ವರದಿ ಸಲ್ಲಿಸಿದ್ದು, ಸರ್ಕಾರದ ತಾತ್ವಿಕ ಒಪ್ಪಿಗೆಯೂ ದೊರಕಿದೆ. ಒಟ್ಟು ಬೇಡಿಕೆಯ ಸಮಗ್ರ ಸಮೀಕ್ಷಾ ವರದಿಯ ಅನುಮೋದನೆಗೆ ಸರ್ಕಾರಕ್ಕೆ ಸಲ್ಲಿಸಲಾಗಿದೆ. ವಿಮಾನ ನಿಲ್ದಾಣ ಕಾಮಗಾರಿಗೆ ಆರ್ಥಿಕ ಸಮಸ್ಯೆ ಇಲ್ಲ ಎಂದು ವಿವರ ನೀಡಿದರು.

Advertisement

ಪ್ರವಾಸಿಗರು ಗೋಲಗುಮ್ಮಟ ನೋಡಲು ಬರುವಂತೆ ವಿಜಯಪುರ ವಿಮಾನ ನಿಲ್ದಾಣ ನೋಡಲು ಬರಬೇಕು. ಅಷ್ಟೊಂದು ವಿಶಿಷ್ಟತೆಯ ಆಕರ್ಷಕ ವಿನ್ಯಾಸದೊಂದಿಗೆ ನಿಲ್ದಾಣ ನಿರ್ಮಾಣವಾಗಲಿದೆ. ಬೆಂಗಳೂರು ಮೂಲದ ಐಡೆಕ್‌ ಸಂಸ್ಥೆಗೆ ಕಾಮಗಾರಿಯ ನಿರ್ವಹಣೆ ಹಾಗೂ ಮಾರ್ಗದರ್ಶನದ ಜವಾಬ್ದಾರಿ ನೀಡಲಾಗಿದೆ. ಮೊದಲ ಹಂತದ ಕಾಮಗಾರಿ ವಿಜಯಪುರ ಮೂಲದ ಎಸ್‌.ಎಸ್‌. ಆಲೂರ ಕನಸ್ಟ್ರಕ್ಷನ್‌ ಸಂಸ್ಥೆಗೆ 2021 ಜನವರಿ ತಿಂಗಳಲ್ಲಿ ಕಾಮಗಾರಿ ವಹಿಸಲಾಗಿದೆ ಎಂದು ವಿವರಿಸಿದರು.

ಮೊಲದ ಹಂತದಲ್ಲಿ 95 ಕೋಟಿ ರೂ. ವೆಚ್ಚದ ಕಾಮಗಾರಿಯಲ್ಲಿ ರನ್‌ ವೇ, ಟ್ಯಾಕ್ಸಿ ವೇ, ಎಪ್ರಾನ್‌, ಇಸೋಲೇಷನ್‌ ಬೇ, ಕೂ ರಸ್ತೆ, ಪೆರಿಪೆರಲ್‌ ಸೇರಿದಂತೆ ಇತರೆ ಕಾಮಗಾರಿಗಳು ಭರದಿಂದ ಸಾಗಿವೆ. ಎರಡನೇ ಹಂತದಲ್ಲಿ ಟರ್ಮಿನಲ್‌ ಕಟ್ಟಡ, ಎಟಿಸಿ ಟವರ್‌, ಸಿಎಫ್‌ಆರ್‌ ಕಟ್ಟಡ, ಕಾಂಪೌಂಡ್‌ ಗೋಡೆ ನಿರ್ಮಾಣ ಕಾಮಗಾರಿಯನ್ನು ಹೈದ್ರಾಬಾದ್‌ ಮೂಲದ ಕೆಎಂವಿ ಕನಸ್ಟ್ರಕ್ಷನ್‌ ಕಂಪನಿಗೆ ವಹಿಸಲಾಗಿದೆ. ಸದರಿ ಎಲ್ಲ ಕಾಮಗಾರಿಗಳು ಭರದಿಂದ ಸಾಗಿವೆ ಎಂದರು.

ಉಳಿದಂತೆ ಭದ್ರತಾ ಪರಿಶೀಲನೆ, ವಿಮಾನ ಹಾರಾಟದ ಮಾಹಿತಿ ಫಲಕ ನಿರ್ಮಾಣ, 24×7 ನಿರಂತರ ನೀರು ಪೂರೈಕೆ, ವಿದ್ಯುತ್‌ ಹಳೆಯ ಮಾರ್ಗ ಸ್ಥಳಾಂತರ, ನಿರಂತರ ವಿದ್ಯುತ್‌ ಸೌಲಭ್ಯಕ್ಕಾಗಿ 110 ಕೆ.ವಿ. ಸಾಮರ್ಥ್ಯದ ಎರಡು ವಿದ್ಯುತ್‌ ಘಟಕ ನಿರ್ಮಾಣ ಸೇರಿದಂತೆ ಎಲ್ಲ ಕಾಮಗಾರಿಗೆ ಚಾಲನೆ ದೊರತಿದೆ ಎಂದರು.

ವಿಮಾನ ನಿಲ್ದಾಣ ಕಾಮಗಾರಿಗಳು ಮುಗಿಯುತ್ತಲೇ ಕೇಂದ್ರ ಸರ್ಕಾರ ವಿಮಾನ ಹಾರಾಟಕ್ಕೆ ಕ್ರಮ ಕೈಗೊಳ್ಳಲಿದೆ. ಉಡಾನ್‌ ಯೋಜನೆಯಲ್ಲೂ ಜಿಲ್ಲೆಗೆ ಹೆಚ್ಚಿನ ವಿಮಾನ ಹಾರಾಟ ಸೌಲಭ್ಯ ಸಿಗಲಿದೆ ಎಂದರು.

ವಿಜಯಪುರ ಜಿಲ್ಲಾಧಿ ಕಾರಿ ವಿ.ಬಿ. ದಾನಮ್ಮನವರ, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಬಿ.ವೈ. ಪವಾರ, ಕಾರ್ಯಪಾಲಕ ಅಭಿಯಂತರ ಎಂ.ಎಸ್‌. ಹಿರೇಗೌಡ್ರ, ರಾಜು ಮಜುಂದಾರ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next