ಬೆಂಗಳೂರು: ಜಾಗತಿಕ ವೈಮಾನಿಕ, ಬಾಹ್ಯಾಕಾಶ ಹಾಗೂ ಸಂಬಂಧಿತ ಸೇವೆಗಳ ಪ್ರತಿಷ್ಠಿತ ಸಂಸ್ಥೆ ಏರ್‌ಬಸ್ ಬಿಜ್‌ಲ್ಯಾಬ್, ಜೆನ್‌ನೆಕ್ಸ್ಟ್ ವೈಮಾನಿಕ ಪರಿಹಾರಗಳನ್ನು ಶಕ್ತಿಯುತಗೊಳಿಸುವ ನಿಟ್ಟಿನಲ್ಲಿ ಮೂರು ಭಾರತೀಯ ನವ ಉದ್ಯಮಗಳೊಂದಿಗೆ ಕೈಜೋಡಿಸಿದೆ.
ನಗರದ ಹೋಟೆಲ್ ಒಂದರಲ್ಲಿ ಏರ್‌ಬಸ್ ಅಂಗಸಂಸ್ಥೆ ನ್ಯಾವ್‌ಬು ಮತ್ತು ಏರಿಯಲ್ ಜಂಟಿಯಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೇಶೀಯ ಸ್ಟಾರ್ಟ್‌ಅಪ್ ಕಂಪನಿಗಳಾದ ಸ್ಟೇಲೆ ಟೆಕ್ನಾಲಜಿ, ಇಫ್ಲೆಟ್ ಮತ್ತು ಏರ್‌ಪಿಕ್ಸ್ ಸಂಸ್ಥೆಗಳ ಜತೆ ಒಪ್ಪಂದಕ್ಕೆ ಏರ್‌ಬಸ್ ಸಹಿ ಹಾಕಿದೆ.
ಈ ಸಂದರ್ಭದಲ್ಲಿ ಏರ್‌ಬಸ್ ಬಿಜ್‌ಲ್ಯಾಬ್‌ನ ಜಾಗತಿಕ ಮುಖ್ಯಸ್ಥ ಬ್ರೂನೋ ಗುಟಿಯಲ್ಸ್ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಭಾರತದ ಉದ್ಯಮಿಗಳ ಸಾಮರ್ಥ್ಯ ಹಾಗೂ ಗುಣಮಟ್ಟದ ಬಗ್ಗೆ ಬಹಳಷ್ಟು ತಿಳಿದುಕೊಂಡಿದ್ದೇನೆ.
ಏರ್‌ಬಸ್ ಮತ್ತು ಭಾರತೀಯ ಉದ್ಯಮಗಳ ನಡುವಿನ ಈ ಒಡಂಬಡಿಕೆ ನನ್ನ ನಂಬಿಕೆಯನ್ನು ಸಾಬೀತುಪಡಿಸಿದೆ. ಮೇಕ್ ಇನ್ ಇಂಡಿಯಾ ಹಾಗೂ ಸ್ಟಾರ್ಟ್ ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಈ ಮೂರು ಕಂಪನಿಗಳೊಡನೆ ಕಾರ್ಯನಿರ್ವಹಿಸಲು ಇಚ್ಛಿಸಿದ್ದೇವೆ.
ಬಿಜ್‌ಲ್ಯಾಬ್ ಏರ್‌ಬಸ್‌ನ ನವೀನ ಕಾರ್ಯತಂತ್ರದ ಒಂದು ಭಾಗವಾಗಿದ್ದು ಸ್ಟಾರ್ಟ್‌ಅಪ್‌ಗ್ಳು ಹಾಗೂ ಏರ್‌ಬಸ್ ಎಂಟ್ರಪ್ರನರ್ ತಮ್ಮ ನವೀನ ಕಲ್ಪನೆಗಳ ರೂಪಾಂತರವನ್ನು ಮೌಲ್ಯಯುತ ವ್ಯವಹಾರಗಳಾಗಿ ಬದಲಾಯಿಸಿ ಕಾರ್ಯಗತಗೊಳಿಸಲು ಒಪ್ಪಂದವೇರ್ಪಟ್ಟಿದೆ ಎಂದರು. ಕಾರ್ಯಕ್ರಮದಲ್ಲಿ ನ್ಯಾವ್‌ಬು ಮುಖ್ಯ ಕಾರ್ಯತಂತ್ರ ಮತ್ತು ಇನ್ನೋವೇಷನ್ ಅಧಿಕಾರಿ ಫೆಬ್ರಿಸ್ ವಿಲಿಯಮ್ಸ್ ಇತರರು ಉಪಸ್ಥಿತರಿದ್ದರು.